
ಬೆಂಗಳೂರು: ಕಳೆದ ವಿಧಾನಸಭೆ ಚುನಾವಣೆಗೆ ಮುನ್ನ ಬಿಜೆಪಿ ವಿರುದ್ಧ ಮಾಡಿದ್ದ ಪರ್ಸೆಂಟೇಜ್ ಆರೋಪದ ಬಗ್ಗೆ ವಿಚಾರಣೆ ಎದುರಿಸಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬೆಂಗಳೂರಿಗೆ ಆಗಮಿಸಿದ್ದಾರೆ.
ಇಂದು ದೇವನಹಳ್ಳಿಯ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರನ್ನು ಸಿಎಂ ಸಿದ್ದರಾಮಯ್ಯ,ಡಿಸಿಎಂ ಡಿ ಕೆ ಶಿವಕುಮಾರ್ ಬರಮಾಡಿಕೊಂಡರು.
ಕರ್ನಾಟಕ ಬಿಜೆಪಿ ದಾಖಲಿಸಿರುವ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ರಾಹುಲ್ ಗಾಂಧಿ ಖುದ್ದಾಗಿ ಕೋರ್ಟ್‌ಗೆ ಹಾಜರಾಗಬೇಕಿದೆ. ಜೂನ್ 1ರಂದು ಖುದ್ದಾಗಿ ರಾಹುಲ್ ಗಾಂಧಿ ವಿಚಾರಣೆಗೆ ಹಾಜರಾಗಿರಲಿಲ್ಲ.
ಈ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಸಹ ಆರೋಪಿಗಳು. ಉಭಯ ನಾಯಕರು ಜೂನ್ 1ರಂದು ಕೋರ್ಟ್‌ಗೆ ಖುದ್ದು ಹಾಜರಾಗಿ ವಿಚಾರಣೆ ಎದುರಿಸಿ ಜಾಮೀನು ಪಡೆದಿದ್ದರು. ರಾಹುಲ್ ಗಾಂಧಿ 4ನೇ ಆರೋಪಿ.
ಏನಿದು ಕೇಸ್?: 2023ರ ವಿಧಾನಸಭೆ ಚುನಾವಣೆಗೂ ಮೊದಲು ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಿತ್ತು. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದರು. 2023ರ ಮೇ 5ರಂದು ಕಾಂಗ್ರೆಸ್ ಪತ್ರಿಕೆಗಳಲ್ಲಿ ಜಾಹೀರಾತು ಒಂದನ್ನು ನೀಡಿತ್ತು. ಬಿಜೆಪಿಯನ್ನು ಭ್ರಷ್ಟ ಎಂದು ಹೇಳಿತ್ತು.
40 ಪರ್ಸೆಂಟ್ ಕಮೀಷನ್ ಆರೋಪವನ್ನು ಹೊರಡಿಸಿತ್ತು. ಈ ಜಾಹೀರಾತು ಮುಂದಿಟ್ಟುಕೊಂಡು ಕರ್ನಾಟಕ ಬಿಜೆಪಿ ಮಾನನಷ್ಟ ಮೊಕದ್ದಮೆ ದಾಖಲು ಮಾಡಿತ್ತು. ಬಿಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ಕೇಶವ ಪ್ರಸಾದ್ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದ್ದ ಖಾಸಗಿ ದೂರಿನ ವಿಚಾರಣೆ ನಡೆಯುತ್ತಿದೆ.
2024ರ ಮಾರ್ಚ್ 11ರಂದು ಕೋರ್ಟ್ ಕಾಂಗ್ರೆಸ್ ನಾಯಕರಿಗೆ ಸಮನ್ಸ್ ಜಾರಿಗೊಳಿಸಿತ್ತು.ಲೋಕಸಭೆ ಚುನಾವಣೆ ಫಲಿತಾಂಶ ಮುಗಿದ ಬಳಿಕ ಬೆಂಗಳೂರಿಗೆ ಆಗಮಿಸಿದ ರಾಹುಲ್ ಗಾಂಧಿ ನಗರ ಸಿವಿಲ್ ಕೋರ್ಟ್ ನಲ್ಲಿ ವಿಚಾರಣೆ ಮುಗಿದ ಬಳಿಕ ಗೆದ್ದ ಹಾಗೂ ಸೋತ ಕರ್ನಾಟಕದ ಸಂಸದರೊಂದಿಗೆ ಕ್ವೀನ್ಸ್ ರಸ್ತೆಯಲ್ಲಿರುವ ಭಾರತ್ ಜೋಡೋ ಭವನದಲ್ಲಿ ಸಭೆ ನಡೆಸಲಿದ್ದಾರೆ.
Advertisement