ತುಮಕೂರು: ಕಲುಷಿತ ನೀರು ಸೇವನೆ; ಮೂರು ವರ್ಷದ ಬಾಲಕಿ ಸೇರಿ ಮೂವರು ದಾರುಣ ಸಾವು
ತುಮಕೂರು: ಕಲುಷಿತ ನೀರು ಸೇವಿಸಿ ಮೂರು ವರ್ಷದ ಬಾಲಕಿ ಸೇರಿದಂತೆ ಮೂವರು ಸಾವಿಗೀಡಾಗಿರುವ ದಾರುಣ ಘಟನೆ ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಚಿನ್ನೇನಹಳ್ಳಿ ಗ್ರಾಮದಲ್ಲಿ ಬುಧವಾರ ನಡೆದಿದೆ.
ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚಿಕ್ಕದಾಸಪ್ಪ (76), ಪೆದ್ದಣ್ಣ (74) ಹಾಗೂ ಮಧುಗಿರಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಮೀನಾಕ್ಷಿ (3) ಮೃತಪಟ್ಟಿದ್ದಾರೆ.
ವಾಂತಿ, ಬೇಧಿಯಿಂದ ಬಳಲುತ್ತಿದ್ದ ಮೀನಾಕ್ಷಿ ಆರೋಗ್ಯದಲ್ಲಿ ಬುಧವಾರ ಬೆಳಗ್ಗೆ ಏರುಪೇರಾಗಿತ್ತು. ಕೂಡಲೇ ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ನಂತರ ಚೇತರಿಸಿಕೊಂಡಿದ್ದ ಆಕೆಯನ್ನು ಪೋಷಕರು ಮನೆಗೆ ಕರೆದುಕೊಂಡು ಹೋಗಿದ್ದರು. ಆದರೆ, ಮನೆಗೆ ಹೋದ ಬಳಿಕ ಮತ್ತೆ ಅಸ್ವಸ್ಥಳಾದ ಆಕೆಯನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯೇ ಸಾವಿಗೀಡಾಗಿದ್ದಳು.
ಚಿಕ್ಕದಾಸಪ್ಪ ಮತ್ತು ಪೆದ್ದಣ್ಣ ಜೂನ್ 10 ರಿಂದ ಚಿಕಿತ್ಸೆ ಪಡೆಯುತ್ತಿದ್ದರು. ಸದ್ಯ ಒಟ್ಟು 59 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜೂನ್ 10 ರಂದು ಗ್ರಾಮದಲ್ಲಿನ ಓವರ್‌ಹೆಡ್ ಟ್ಯಾಂಕ್ ಮತ್ತು ಶುದ್ಧ ಕುಡಿಯುವ ನೀರಿನ ಘಟಕದಿಂದ ಸರಬರಾಜು ಮಾಡಿದ ನೀರು ಕುಡಿದು ವಾಂತಿ, ಬೇಧಿಯಿಂದ ಗ್ರಾಮದ 98 ಮಂದಿ ಅಸ್ವಸ್ಥರಾಗಿದ್ದರು. ಈ ಪೈಕಿ 59 ಜನರು ಗುಣಮುಖರಾಗಿದ್ದರು. ಜೂನ್ 7ರಂದು ಚಿನ್ನೇನಹಳ್ಳಿಯಲ್ಲಿ ಜಾತ್ರೆ ನಡೆದಿದ್ದರಿಂದಾಗಿ ಸುತ್ತಮುತ್ತಲಿನ ಗ್ರಾಮಗಳ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ