ಮೆಟ್ರೋ ಕಾಮಗಾರಿ ಹಿನ್ನೆಲೆ: ಐದು ವರ್ಷಗಳ ನಂತರ ಸಂಚಾರಕ್ಕೆ ಕಾಮರಾಜ್ ರಸ್ತೆ ಮುಕ್ತ!
ಬೆಂಗಳೂರು: ಬರೋಬ್ಬರಿ ಐದು ವರ್ಷಗಳ ಕಾಯುವಿಕೆಯ ನಂತರ ಶುಕ್ರವಾರ ಎಂಜಿ ರಸ್ತೆ ಮತ್ತು ಕಬ್ಬನ್ ರೋಡ್ ಸಂಪರ್ಕಿಸುವ 220 ಮೀಟರ್ ಕಾಮರಾಜ್ ರಸ್ತೆಯ ಒಂದು ಭಾಗವನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.
ಈ ರಸ್ತೆಯನ್ನು ಜೂನ್ 2019 ರಲ್ಲಿ ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ (BMRCL) ಕಾಮಗಾರಿಯ ಕಾರಣಕ್ಕೆ ಮುಚ್ಚಲಾಗಿತ್ತು. ಪಿಂಕ್ ಲೈನ್‌ನ ನಾಗವಾರದಿಂದ ಕಾಳೇನ ಅಗ್ರಹಾರದವರೆಗಿನ ಮಾರ್ಗದಲ್ಲಿ MG ರಸ್ತೆ ಭೂಗತ ನಿಲ್ದಾಣವನ್ನು ನಿರ್ಮಿಸಲು ಈ ರಸ್ತೆಯನ್ನು ಮುಚ್ಚಲಾಗಿತ್ತು.
ಶುಕ್ರವಾರ ಬೆಳಗ್ಗೆ 10.30ರ ಸುಮಾರಿಗೆ ರಸ್ತೆಯನ್ನು ತೆರೆಯಲಾಗಿದೆ. ಸದ್ಯಕ್ಕೆ ಇದು ಎಂಜಿ ರಸ್ತೆಯಿಂದ ಕಬ್ಬನ್ ರಸ್ತೆ ಕಡೆಗೆ ಏಕಮುಖ ರಸ್ತೆಯಾಗಲಿದೆ. ಕೆಲವು ಸಿಗ್ನಲಿಂಗ್ ಉಪಕರಣಗಳನ್ನು ಇನ್ನೂ ಅಳವಡಿಸಬೇಕಾಗಿರುವುದರಿಂದ, ಸುಗಮ ಟ್ರಾಫಿಕ್ ಹರಿವನ್ನು ಖಚಿತಪಡಿಸಿಕೊಳ್ಳಲು ಪೊಲೀಸರನ್ನು ನಿಯೋಜಿಸಲಾಗಿದೆ. ಬಿಎಂಆರ್‌ಸಿಎಲ್ ಇನ್ನೊಂದು ರಸ್ತೆಯಲ್ಲಿ ತನ್ನ ಕೆಲಸವನ್ನು ಪೂರ್ಣಗೊಳಿಸುವವರೆಗೆ ಏಕಮುಖ ವ್ಯವಸ್ಥೆ ಜಾರಿಯಲ್ಲಿರುತ್ತದೆ. ಇದಕ್ಕೆ ಸ್ವಲ್ಪ ಸಮಯ ತೆಗೆದುಕೊಳ್ಳಬಹುದು ಎಂದು ಡಿಸಿಪಿ (ಟ್ರಾಫಿಕ್ ವೆಸ್ಟ್) ಅನಿತಾ ಬಿ ಹದ್ದಣ್ಣನವರ್ ತಿಳಿಸಿದ್ದಾರೆ.
ರಸ್ತೆ ಮುಚ್ಚಿದ್ದರಿಂದ ಶಿವಾಜಿನಗರ ಅಥವಾ ಕಮರ್ಷಿಯಲ್ ಸ್ಟ್ರೀಟ್‌ಗೆ ತೆರಳಲು ಇಚ್ಛಿಸುವ ವಾಹನ ಸವಾರರು ಅನಿಲ್ ಕುಂಬ್ಳೆ ವೃತ್ತ ಅಥವಾ ಟ್ರಿನಿಟಿ ವೃತ್ತದವರೆಗೆ ಹೋಗಿ ತಿರುವು ತೆಗೆದುಕೊಳ್ಳಬೇಕಾಗಿದ್ದು, ಎಂಜಿ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತಿತ್ತು.
ಈ ಬೆಳವಣಿಗೆಯನ್ನು BMRCL ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ್ ರಾವ್ ಖಚಿತಪಡಿಸಿದ್ದಾರೆ. ಬಿಎಂಆರ್‌ಸಿಎಲ್‌ನ ಹಿರಿಯ ಅಧಿಕಾರಿಯೊಬ್ಬರು, “ನಾವು ಈಗ ಅರ್ಧದಷ್ಟು ರಸ್ತೆಯನ್ನು ಮಾತ್ರ ಪುನಃಸ್ಥಾಪಿಸಿದ್ದೇವೆ. ಸಂಪೂರ್ಣ ಸಂಚಾರಕ್ಕೆ ಅನುಮತಿ ನೀಡುವುದರಿಂದ ಇಲ್ಲಿ ದಟ್ಟಣೆ ಉಂಟಾಗುವುದರಿಂದ ಏಕಮುಖ ರಸ್ತೆಯನ್ನಾಗಿ ಮಾಡಲು ಸಂಚಾರ ಪೊಲೀಸರು ನಿರ್ಧರಿಸಿದ್ದಾರೆ. ಉಳಿದ 12 ಮೀಟರ್‌ಗಳು 6-9 ತಿಂಗಳುಗಳ ಕಾಲ ಮುಚ್ಚಿರುತ್ತದೆ ಏಕೆಂದರೆ ನಮ್ಮ ಅಂಡರ್ ಗ್ರೌಂಡ್ ನಿಲ್ದಾಣವನ್ನು ಪೂರ್ಣಗೊಳಿಸಲು ಉಪಕರಣಗಳನ್ನು ಕೆಳಗೆ ಕಳುಹಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.