ರಾಜ್ಯದ ಅಭಿವೃದ್ಧಿ ಕಾರ್ಯಕ್ಕಾಗಿ ತೈಲ ಬೆಲೆ ಏರಿಕೆ ಮಾಡಿದ್ದೇವೆ; ಗ್ಯಾರಂಟಿ ಯೋಜನೆಗಳಿಗಾಗಿ ಅಲ್ಲ: ಸಿಎಂ ಸಿದ್ದರಾಮಯ್ಯ

ಗ್ಯಾರಂಟಿ ಯೋಜನೆಗಳಿಗೆ ಹಣ ನೀಡಲು ತೈಲ ಬೆಲೆ ಏರಿಕೆ ಮಾಡಿಲ್ಲ. ಅಭಿವೃದ್ಧಿ ಕಾರ್ಯಕ್ಕಾಗಿ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಹೇಳಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಿರುವ ಸಿಎಂ ಸಿದ್ದರಾಮಯ್ಯ.
ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಿರುವ ಸಿಎಂ ಸಿದ್ದರಾಮಯ್ಯ.
Updated on

ಬೆಂಗಳೂರು: ಗ್ಯಾರಂಟಿ ಯೋಜನೆಗಳಿಗೆ ಹಣ ನೀಡಲು ತೈಲ ಬೆಲೆ ಏರಿಕೆ ಮಾಡಿಲ್ಲ. ಅಭಿವೃದ್ಧಿ ಕಾರ್ಯಕ್ಕಾಗಿ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಹೇಳಿದ್ದಾರೆ.

ಗೃಹಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮುಖ್ಯಮಂತ್ರಿಗಳು, ಪೆಟ್ರೋಲ್ ಹಾಗೂ ಡಿಸೇಲ್ ಮೇಲೆ‌ ರೂ.3 ಹೆಚ್ಚಳ ಮಾಡಲಾಗಿದೆ. ಆದರೆ, ಬಿಜೆಪಿ ಸರ್ಕಾರ ಆಡಳಿತ ಇರುವ ರಾಜ್ಯಗಳಿಗಿಂತ ನಮ್ಮ ರಾಜ್ಯದಲ್ಲಿ ತೈಲ ಬೆಲೆ ಕಡಿಮೆ ಇದೆ. ನಮ್ಮ ಅಕ್ಕ-ಪಕ್ಕದ ರಾಜ್ಯದಲ್ಲಿ ತೈಲ ಬೆಲೆ ಹೆಚ್ಚಿದೆ, ನಮ್ಮಲ್ಲಿ ಅಲ್ಲಿಗಿಂತ ದರ ಕಡಿಮೆ ಇದೆ ಎಂಂದು ಹೇಳಿದರು.

ಬಿಜೆಪಿ ಆಡಳಿತ ಇರುವ ಮಹಾರಾಷ್ಟ್ರ, ರಾಜಸ್ಥಾನ ಮತ್ತು ಗುಜರಾತ್ ರಾಜ್ಯಗಳಲ್ಲಿ ತೈಲ ಬೆಲೆ ಇಲ್ಲಿಗಿಂತ ಅಧಿಕವಾಗಿದೆ. ಆದರೂ, ಬಿಜೆಪಿ ನಾಯಕರು ಇಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. ನಮ್ಮ ವಿರುದ್ಧದ ಬದಲು ಬಿಜೆಪಿಯವರು ಕೇಂದ್ರದ ವಿರುದ್ಧ ಧರಣಿ ಮಾಡಬೇಕು ಎಂದು ತಿಳಿಸಿದರು.

ಈ ಹಿಂದೆ ಕೇಂದ್ರದಲ್ಲಿ ಕಾಂಗ್ರೆಸ್​ ಸರ್ಕಾರ ಇದ್ದಾಗ ಗ್ಯಾಸ್, ತೈಲ ದರ ಹೆಚ್ಚಿಸಿದ ಸಮಯದಲ್ಲಿ ಅಂದು ಗುಜರಾತ್​ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರು ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದರೆ ಇವೆಲ್ಲದರ ಬೆಲೆ ಇಳಿಸುತ್ತೇವೆ ಎಂದು ಹೇಳಿದ್ದರು. ಆದರೆ, ಇದೀಗ ಪ್ರಧಾನಿ ಮೋದಿ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದರು.

ಮೋದಿಯವರು ಪ್ರಧಾನಿಯಾದ ಸಂದರ್ಭದಲ್ಲಿ ಪೆಟ್ರೋಲ್‌ ದರ 72.26 ರೂ. ಇತ್ತು. ಆದರೆ ಈಗ 104 ರೂ. ಆಗಿದೆ. ಡೀಸೆಲ್ ಬೆಲೆ 67.28 ಇತ್ತು, ಇದೀಗ 91 ರೂ. ಆಗಿದೆ. ಈಗ ಕ್ರೂಡ್ ಆಯಿಲ್ ಬೆಲೆ 84 ರೂಪಾಯಿ ಇದೆ. 2015ರಲ್ಲಿ ಕಚ್ಚಾ ತೈಲ​ ದರ 50 ರೂ. ಇತ್ತು. ಹಾಗಾದರೆ ಯಾರ ವಿರುದ್ಧ ನೀವು ಪ್ರತಿಭಟನೆ ಮಾಡಬೇಕು ಎಂದು ರಾಜ್ಯ ಬಿಜೆಪಿ ನಾಯಕರನ್ನು ಪ್ರಶ್ನಿಸಿದರು.

ಬಿಜೆಪಿಯವರಿಗೆ ಬಡವರು, ಜನಸಾಮಾನ್ಯರ ಬಗ್ಗೆ ಕಾಳಜಿ‌ ಇದ್ದರೆ ಬೆಲೆ ಕಡಿಮೆ ಮಾಡಬೇಕಿತ್ತು. ಕೇಂದ್ರ ಸರ್ಕಾರ‌ ಜಿಎಸ್​ಟಿ ತಂದ ಮೇಲೆ ರಾಜ್ಯ ಸರ್ಕಾರಕ್ಕೆ ಬರುವ ತೆರಿಗೆ ಪಾಲು ಕಡಿಮೆ ಆಯಿತು. ಸ್ಟ್ಯಾಂಪ್ ಡ್ಯೂಟಿ, ಮೋಟರ್ ತೆರಿಗೆ ಬಿಟ್ಟು ಎಲ್ಲದರ ಕುರಿತು ಕೇಂದ್ರ ಸರ್ಕಾರ ನಿರ್ಧಾರ ಮಾಡುತ್ತದೆ. ಕರ್ನಾಟಕಕ್ಕೆ 18,6000 ಕೋಟಿ ರೂ. ನಷ್ಟವಾಗಿದೆ. ಕರ್ನಾಟಕಕ್ಕೆ ಬರುವ ತರಿಗೆ ಕಡಿಮೆಯಾದರೂ, ರಾಜ್ಯದ ಪರ ಬಿಜೆಪಿಯವರು ಒಂದು ದಿನವೂ ಮಾತನಾಡಿಲ್ಲ ಎಂದರು.

ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಿರುವ ಸಿಎಂ ಸಿದ್ದರಾಮಯ್ಯ.
ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಗೆ ಖಂಡನೆ: ರಾಜ್ಯಾದಾದ್ಯಂತ ಬಿಜೆಪಿ ಪ್ರತಿಭಟನೆ, ಸರ್ಕಾರದ ವಿರುದ್ದ ಆಕ್ರೋಶ

ರಿಂಗ್ ರೋಡ್ ನಿರ್ಮಾಣಕ್ಕೆ ಹಾಗೂ ಕೆರೆ ಅಭಿವೃದ್ಧಿ, ಭದ್ರಾ ಮೇಲ್ದಂಡೆ ಯೋಜನೆ ಬಗ್ಗೆ ಬಿಜೆಪಿಯವರು ಮಾತನಾಡುತ್ತಿಲ್ಲ. ಇದಷ್ಟೆ ಅಲ್ಲದೇ ಯಾವುದರ ಬಗ್ಗೆಯೂ ಬಿಜೆಪಿಯವರು ಮಾತನಾಡಿಲ್ಲ. ಈಗ ನಮ್ಮ ಸರ್ಕಾರಕ್ಕೆ ಪಾಪರ್ ಆಗಿದೆ ಎಂದು ಹೇಳುತ್ತಿದ್ದಾರೆ. ನಾವೇನು ನೌಕರ ಸಂಬಳ ನಿಲ್ಲಿಸಿದ್ದೇವಾ? ಬಡವರು, ರೈತರು ಬಗ್ಗೆ ‌ಬಿಜೆಪಿವರಿಗೆ ಕಾಳಜಿ‌ ಇದೆಯಾ? ಎಂದು ಪ್ರಶ್ನಿಸಿದರು.

ನಾವು ಗ್ಯಾರಂಟಿ ಕೊಟ್ಟಿರೋದು ಎಲ್ಲ ವರ್ಗದ ಜನರಿಗೆ. ಬಸ್​ನಲ್ಲಿ ‌ಓಡಾಡಿದರೆ ಆರ್ಥಿಕವಾಗಿ ಶಕ್ತಿ ಬರುತ್ತೆ. ಎರಡು ಸಾವಿರ ಹಣ, ‌ಫ್ರೀ‌ ಕರೆಂಟ್ ಕೊಟ್ಟರೆ ಸಹಾಯವಾಗುತ್ತಿದೆ. ಈ ಬಗ್ಗೆ ಬಿಜೆಪಿ‌ಯವರು ಯಾರೂ ಮಾತನಾಡುವುದಿಲ್ಲ ಎಂದು ಹೇಳಿದರು.

ಬಿಜೆಪಿಗೆ ವಿಷಯ ಇಲ್ಲ, ಹೀಗಾಗಿ ಹೋರಾಟ ಮಾಡುತ್ತಿದ್ದಾರೆ. ‘ನಮ್ಮ ತೆರಿಗೆ ನಮ್ಮ ಹಕ್ಕು’ ಹೋರಾಟದಲ್ಲಿ ಸಾಥ್ ಕೊಟ್ಟಿಲ್ಲ. ಕೇಂದ್ರದ ಮಂತ್ರಿಯಾಗಿ ದಂಗೆ ಏಳಿ ಎಂದು ಹೆಚ್​ಡಿ ಕುಮಾರಸ್ವಾಮಿ ಅವರು ಹೇಳುತ್ತಿದ್ದಾರೆ. ಮೈತ್ರಿ ಮಾಡಿಕೊಂಡಿದ್ದಾರೆ, ಅದಕ್ಕೂ ಮುನ್ನ ಮಾತಾಡಿದ್ದರಾ? ಕೇಂದ್ರ ಸರ್ಕಾರ ರೈತರ ಸಾಲಮನ್ನಾ ಮಾಡಿ ಎಂದರೆ ಮಾಡಲಿಲ್ಲ. ಬಿಜೆಪಿವರಿಗೆ ನೈತಿಕತೆ ಇಲ್ಲ, ಕರ್ನಾಟಕದ ಬಗ್ಗೆ ಕಾಳಜಿ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಸದ್ಯಕ್ಕೆ ಬಸ್ ಟಿಕೆಟ್ ದರ ಹೆಚ್ಚಳ ಮಾಡುವುದಿಲ್ಲ ಎಂದೂ ಸ್ಪಷ್ಟಪಡಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com