ಕೆ-ರೈಡ್‌ಗೆ ಶೀಘ್ರದಲ್ಲಿ ಪೂರ್ಣಾವಧಿ ಎಂಡಿ ನೇಮಕ: ಕೇಂದ್ರ ಸಚಿವ ವಿ. ಸೋಮಣ್ಣ

ಕರ್ನಾಟಕ ರೈಲು ಮೂಲಸೌಲಭ್ಯ ಅಭಿವೃದ್ಧಿ ಕಂಪನಿ ನಿಯಮಿತ (ಕೆ-ರೈಡ್) ಗೆ ಶೀಘ್ರದಲ್ಲೇ ಪೂರ್ಣವಧಿ ವ್ಯವಸ್ಥಾಪಕ ನಿರ್ದೇಶಕರಾಗಿ ತಾಂತ್ರಿಕ ತಜ್ಞರನ್ನು ನೇಮಕ ಮಾಡಲಾಗುವುದು ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ ಸೋಮಣ್ಣ ಸೋಮವಾರ ಹೇಳಿದ್ದಾರೆ.
ಕೇಂದ್ರ ಸಚಿವ ವಿ. ಸೋಮಣ್ಣ
ಕೇಂದ್ರ ಸಚಿವ ವಿ. ಸೋಮಣ್ಣ

ಬೆಂಗಳೂರು: ಕರ್ನಾಟಕ ರೈಲು ಮೂಲಸೌಲಭ್ಯ ಅಭಿವೃದ್ಧಿ ಕಂಪನಿ ನಿಯಮಿತ (ಕೆ-ರೈಡ್) ಗೆ ಶೀಘ್ರದಲ್ಲೇ ಪೂರ್ಣವಧಿ ವ್ಯವಸ್ಥಾಪಕ ನಿರ್ದೇಶಕರಾಗಿ ತಾಂತ್ರಿಕ ತಜ್ಞರನ್ನು ನೇಮಕ ಮಾಡಲಾಗುವುದು ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ ಸೋಮಣ್ಣ ಸೋಮವಾರ ಹೇಳಿದ್ದಾರೆ.

ರಾಜ್ಯದ ವಿವಿಧ ಅಭಿವೃದ್ಧಿ ಯೋಜನೆಗಳ ಕುರಿತು ರೈಲ್ವೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಈ ಹಿಂದೆ ಮೂಲಸೌಕರ್ಯ ಸಚಿವರಾಗಿದ್ದಾಗ ಕೆ-ರೈಡ್‌ಗೆ ವ್ಯವಸ್ಥಾಪಕ ನಿರ್ದೇಶಕರಿರಲಿಲ್ಲ ಮತ್ತು ಮುಂದಿನ 15-20 ದಿನಗಳಲ್ಲಿ ತಾಂತ್ರಿಕವಾಗಿ ಪರಿಣತಿ ಹೊಂದಿರುವ ವ್ಯಕ್ತಿಯನ್ನು ನೇಮಕ ಮಾಡಲು ಮುಖ್ಯ ಕಾರ್ಯದರ್ಶಿಯೊಂದಿಗೆ ಮಾತನಾಡಿದ್ದೇನೆ ಎಂದರು.

ಕರ್ನಾಟಕದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಪ್ರಧಾನಿ ನರೇಂದ್ರ ಮೋದಿ ಅವರು ಉಪನಗರ ರೈಲ್ವೆ ಯೋಜನೆಗೆ ಶಂಕುಸ್ಥಾಪನೆ ಮಾಡಿದ್ದನ್ನು ನೆನಪಿಸಿಕೊಂಡ ಸಚಿವರು, ದಶಕಗಳಿಂದ ಬಾಕಿ ಉಳಿದಿರುವ ಒಂಬತ್ತು ರೈಲ್ವೆ ಯೋಜನೆಗಳನ್ನು ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು. ಇವುಗಳಲ್ಲಿ ಕೆಲವು ಯೋಜನೆಗಳು ಡಿಸೆಂಬರ್ 2026 ರೊಳಗೆ ಪೂರ್ಣಗೊಳ್ಳುತ್ತವೆ ಮತ್ತು ಇತರವು ಡಿಸೆಂಬರ್ 2028 ರೊಳಗೆ ಪೂರ್ಣಗೊಳ್ಳಲಿವೆ ಎಂದರು.

"ಈ ಎಲ್ಲಾ ಒಂಬತ್ತು ಯೋಜನೆಗಳನ್ನು ಪೂರ್ಣಗೊಳಿಸಲಾಗುವುದು, ತ್ವರಿತಗತಿಯಲ್ಲಿ ರೈಲ್ವೆ ಹಳಿಗಳ ದ್ವಿಗುಣ ಕಾರ್ಯ ಕೈಗೊಳ್ಳಲಾಗುವುದು, ಇದು ಪ್ರಧಾನಿ ಮತ್ತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರ ದೂರದೃಷ್ಟಿಯಾಗಿದೆ.

ಕರ್ನಾಟಕಕ್ಕೆ ಸಂಬಂಧಿಸಿದ ಎಲ್ಲಾ ಯೋಜನೆಗಳನ್ನು ಪೂರ್ಣಗೊಳಿಸುವುದಾಗಿ ಖಾತ್ರಿಪಡಿಸುತ್ತೇನೆ. ಎಲ್ಲಾ ಕೆಳಸೇತುವೆಗಳು, ಲೆವೆಲ್ ಕ್ರಾಸಿಂಗ್ ಗಳು, ಮೇಲ್ಸುತುವೆಗಳನ್ನು ಗುರುತಿಸಿ ಪೂರ್ಣಗೊಳಿಸಲಾಗುವುದು, ಜಲ ಜೀವನ್ ಮಿಷನ್ ನ್ನು ಮುಂದುವರೆಸುವ ಕುರಿತು ಕೇಂದ್ರ ಕ್ಯಾಬಿನೆಟ್ ಸಚಿವರೊಂದಿಗೆ ಮಾತುಕತೆ ನಡೆಸಲಾಗುವುದು ಎಂದರು.

ಕೇಂದ್ರ ಸಚಿವ ವಿ. ಸೋಮಣ್ಣ
ಕೇಂದ್ರ ಜಲಶಕ್ತಿ ಖಾತೆ ರಾಜ್ಯ ಸಚಿವರಾಗಿ ವಿ. ಸೋಮಣ್ಣ ಅಧಿಕಾರ ಸ್ವೀಕಾರ

ಪಶ್ಚಿಮ ಬಂಗಾಳದಲ್ಲಿ ರೈಲುಗಳ ಡಿಕ್ಕಿ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸೋಮಣ್ಣ, ಘಟನೆ ಬಗ್ಗೆ ಬೆಳಗ್ಗೆ ಮಾಹಿತಿ ಪಡೆದಿದ್ದು, ಏನಾಯಿತು ಎಂಬುದರ ಬಗ್ಗೆ ಮಾಹಿತಿ ನೀಡಲು ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಅಪಘಾತ ಘಟನೆ ನೋವು ತಂದಿದೆ. ಅಧಿಕಾರಿಗಳು ಅಲ್ಲಿದ್ದು, ಕೂಡಲೇ ವರದಿ ನೀಡುವಂತೆ ನಿರ್ದೇಶಿಸಲಾಗಿದೆ. ನವದೆಹಲಿ ರೈಲ್ವೆ ಭವನಕ್ಕೆ ತೆರಳಿ ಮಂಡಳಿ ಜೊತೆಗೆ ಸಭೆ ನಡೆಸಿ, ವಿವರ ಪಡೆಯಲಾಗುವುದು ಎಂದು ಅವರು ತಿಳಿಸಿದರು.

ನೈಋತ್ಯ ರೈಲ್ವೆಯ ವ್ಯಾಪ್ತಿಗೆ ಒಳಪಡುವ ಅಭಿವೃದ್ಧಿ ಯೋಜನೆಗಳ ಸಂಪೂರ್ಣ ಪರಿಶೀಲನೆಯನ್ನು ಸಚಿವರು ನಡೆಸಿರುವುದಾಗಿ ನೈಋತ್ಯ ರೈಲ್ವೆ ಹೇಳಿಕೆಯಲ್ಲಿ ತಿಳಿಸಿದೆ. ಒಂಬತ್ತು ಹೊಸ ಮಾರ್ಗಗಳು ಮತ್ತು ಐದು ಜೋಡಿ ಮಾರ್ಗ ಯೋಜನೆಗಳು ಸೇರಿದಂತೆ 14 ಮಹತ್ವದ ಯೋಜನೆಗಳ ಕುರಿತು ಚರ್ಚೆ ನಡೆದಿದೆ.

ಈ ಯೋಜನೆಗಳು ಒಟ್ಟು 1,264 ಕಿಮೀ ಹೊಸ ಮಾರ್ಗ ಮತ್ತು 707 ಕಿಮೀ ಜೋಡಿ ಮಾರ್ಗ ಒಳಗೊಂಡಿವೆ. 289 ಕಿಮೀ ಹೊಸ ಮಾರ್ಗಗಳು ಮತ್ತು 502 ಕಿಮೀ ಡಬ್ಲಿಂಗ್ ಲೈನ್‌ಗಳು ಈಗಾಗಲೇ ಯಶಸ್ವಿಯಾಗಿ ಕಾರ್ಯಾರಂಭಗೊಂಡಿವೆ. ಐದು ಜೋಡಿ ಮಾರ್ಗ ಯೋಜನೆಗಳಲ್ಲಿ ಹೊಟಗಿ-ಕುಡಗಿ-ಗದಗ, ಯಶವಂತಪುರ-ಚನ್ನಸಂದ್ರ, ಬೈಯ್ಯಪನಹಳ್ಳಿ-ಹೊಸೂರು, ಬೆಂಗಳೂರು-ವೈಟ್‌ಫೀಲ್ಡ್ ಮತ್ತು ಹೊಸಪೇಟೆ-ಹುಬ್ಬಳ್ಳಿ-ಲೋಂಡಾ-ತಿನೈಘಾಟ್-ವಾಸ್ಕೋಡಗಾಮಾ ಮಾರ್ಗಗಳು ಸೇರಿವೆ.

ಕೇಂದ್ರ ಸಚಿವ ವಿ. ಸೋಮಣ್ಣ
ಕೇಂದ್ರ ಸಚಿವ ವಿ ಸೋಮಣ್ಣ ಪುತ್ರ ವಿರುದ್ಧ FIR: ವಂಚನೆ, ಜೀವ ಬೆದರಿಕೆ ಆರೋಪದಡಿ ಅರುಣ್ ಸೋಮಣ್ಣಗೆ ಬಂಧನ ಭೀತಿ!

ಒಂಬತ್ತು ಹೊಸ ಮಾರ್ಗದ ಯೋಜನೆಗಳೆಂದರೆ ಕಲ್ಯಾಣದುರ್ಗ ಮೂಲಕ ತುಮಕೂರು-ರಾಯದುರ್ಗ, ತುಮಕೂರು-ಚಿತ್ರದುರ್ಗ-ದಾವಣಗೆರೆ, ಗಿಣಿಗೇರಾ-ರಾಯಚೂರು, ಬಾಗಲಕೋಟ-ಕುಡಚಿ, ಗದಗ-ವಾಡಿ, ಕಡೂರು-ಚಿಕ್ಕಮಗಳೂರು, ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು. ಕಿತ್ತೂರು ಮೂಲಕ ಬೆಳಗಾವಿ-ಧಾರವಾಡ, ಹಾಸನ- ಬೇಲೂರು ಸೇರಿವೆ.

ರೈಲ್ವೆ ಅಭಿವೃದ್ಧಿ ಯೋಜನೆಗಳನ್ನು ತ್ವರಿತಗೊಳಿಸಲು ರೈಲ್ವೆ ಅಧಿಕಾರಿಗಳು ಮತ್ತು ಜಿಲ್ಲಾಡಳಿತ ಮತ್ತು ಕೆ-ರೈಡ್ ಸೇರಿದಂತೆ ವಿವಿಧ ಪಾಲುದಾರರ ನಡುವಿನ ಸಹಯೋಗದ ಮಹತ್ವವನ್ನು ಒತ್ತಿದ ಹೇಳಿದ ಸಚಿವರು, ಬಾಕಿ ಉಳಿದಿರುವ ಕಾಮಗಾರಿಗೆ ಭೂಸ್ವಾಧೀನಕ್ಕೆ ವೇಗ ನೀಡುವಂತೆ ರೈಲ್ವೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಮುಂಬರುವ ವರ್ಷಗಳಲ್ಲಿ ಎಲ್ಲಾ ಬಾಕಿ ಯೋಜನೆಗಳನ್ನು ವ್ಯವಸ್ಥಿತವಾಗಿ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com