ಭವಾನಿ ರೇವಣ್ಣ
ಭವಾನಿ ರೇವಣ್ಣTNIE

ಸಂತ್ರಸ್ತೆ ಅಪಹರಣ ಪ್ರಕರಣ: ಭವಾನಿ ರೇವಣ್ಣಗೆ ನಿರೀಕ್ಷಣಾ ಜಾಮೀನು ಮಂಜೂರು; ಮೈಸೂರು, ಹಾಸನ ಪ್ರವೇಶಿಸದಂತೆ ತಾಕೀತು!

ಶಾಸಕ ಎಚ್‌ ಡಿ ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ಏಕಸದಸ್ಯ ಪೀಠ ಶುಕ್ರವಾರ ವಿಚಾರಣೆ ಪೂರ್ಣಗೊಳಿಸಿ, ಆದೇಶ ಕಾಯ್ದಿರಿಸಿತ್ತು. ಇದೀಗ ನ್ಯಾಯಪೀಠ ಜಾಮೀನು ಮಂಜೂರು ಮಾಡಿದೆ.
Published on

ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅತ್ಯಾಚಾರ ಪ್ರಕರಣದ ಸಂತ್ರಸ್ತೆಯನ್ನು ಅಪಹರಿಸಿದ ಆರೋಪ ಸಂಬಂಧ ಭವಾನಿ ರೇವಣ್ಣ ಅವರಿಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದು, ಈ ಮೂಲಕ ಭವಾನಿ ರೇವಣ್ಣ ಅವರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ.

ಶಾಸಕ ಎಚ್‌ ಡಿ ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ಏಕಸದಸ್ಯ ಪೀಠ ಶುಕ್ರವಾರ ವಿಚಾರಣೆ ಪೂರ್ಣಗೊಳಿಸಿ, ಆದೇಶ ಕಾಯ್ದಿರಿಸಿತ್ತು. ಇದೀಗ ನ್ಯಾಯಪೀಠ ಜಾಮೀನು ಮಂಜೂರು ಮಾಡಿದೆ.

ಭವಾನಿ ರೇವಣ್ಣ ಅವರು ಮೈಸೂರು, ಹಾಸನ ಜಿಲ್ಲೆ ಪ್ರವೇಶಿಸದಂತೆ ಷರತ್ತು ವಿಧಿಸಿ ಏಕಸದಸ್ಯ ಪೀಠ ಆದೇಶ ಹೊರಡಿಸಿದೆ. ಆದರೆ, ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆಗಾಗಿ ಅವರನ್ನು ಈ ಜಿಲ್ಲೆಗಳಿಗೆ ಕರೆದೊಯ್ಯಬಹುದು ಎಂದೂ ಹೇಳಿದೆ.

ಎರಡೂ ಕಡೆಯ ಹಿರಿಯ ವಕೀಲರಾದ ಪ್ರೊ. ರವಿವರ್ಮ ಕುಮಾರ್‌ ಮತ್ತು ಸಿ ವಿ ನಾಗೇಶ್‌ ಅವರಿಂದ ಸಾಕಷ್ಟು ಕಾನೂನು ಜ್ಞಾನವನ್ನು ಪಡೆದುಕೊಂಡಿದ್ದೇನೆ. ಈ ತೀರ್ಪಿನ ಮೂಲಕ ನಾನು ತಪ್ಪನ್ನೂ ಎಸಗಿರಬಹುದು. ಆದರೆ, ಒಮ್ಮತದ ತೀರ್ಪು ನೀಡಿದ್ದೇನೆ. ಮೇಲಿನ ಎಲ್ಲಾ ಕಾರಣಗಳ ಹಿನ್ನೆಲೆಯಲ್ಲಿ ಅರ್ಜಿಯು ಊರ್ಜಿತವಾಗಿದ್ದು, ಭವಾನಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಲಾಗಿದೆ ಎಂದು ಪೀಠ ಆದೇಶಿಸಿದೆ.

ಪೊಲೀಸರು ಆರೋಪಿಯನ್ನು ಕಸ್ಟಡಿಗೆ ಕೇಳಿದರೆ, ಕಣ್ಣು ಮುಚ್ಚಿಕೊಂಡು ನ್ಯಾಯಾಲಯವು ನೀಡಬೇಕು ಎಂದು ಪ್ರೊ. ರವಿವರ್ಮ ಕುಮಾರ್‌ ಹೇಳಿದ್ದರು. ಇದು ಸುಪ್ರೀಂ ಕೋರ್ಟ್‌ ತೀರ್ಪಿಗೆ ವಿರುದ್ಧವಾಗಿದೆ. ಬ್ಯಾಂಕಾಕ್‌ನಲ್ಲಿ ನಡೆದ ವಿಶ್ವಸಂಸ್ಥೆಯ ಸಭೆಯಲ್ಲೂ ಮಹಿಳೆಯನ್ನು ಬಂಧಿಸುವಂತಿಲ್ಲ ಎಂದು ಹೇಳಲಾಗಿದೆ” ಎಂದು ನ್ಯಾ. ದೀಕ್ಷಿತ್‌ ಹೇಳಿದರು.

ಎಸ್‌ಐಟಿ ವಿಚಾರಣೆಗೆ ಭವಾನಿ ಸಹಕರಿಸಿಲ್ಲ ಎಂದು ಪ್ರೊ. ಕುಮಾರ್‌ ವಾದಿಸಿದ್ದರು. ಮೂರು ದಿನಗಳಲ್ಲಿ ಒಟ್ಟು 85 ಪ್ರಶ್ನೆಗಳನ್ನು ಕೇಳಲಾಗಿದ್ದು, ಎಲ್ಲದಕ್ಕೂ ಆಕೆ ಉತ್ತರಿಸಿದ್ದಾರೆ. ತಾವು ಬಯಸಿದಂತೆ ಆರೋಪಿ ಉತ್ತರಿಸಬೇಕು ಎಂದು ಪೊಲೀಸರು ನಿರೀಕ್ಷಿಸಲಾಗದು. ಸಂತ್ರಸ್ತೆಗೆ ಆಹಾರ ನೀಡಿಲ್ಲ ಮತ್ತು ಉಡುಪು ಬದಲಿಸಲು ಭವಾನಿ ಅವಕಾಶ ನೀಡಿಲ್ಲ ಎಂದು ಪ್ರಾಸಿಕ್ಯೂಷನ್‌ ವಾದಿಸಿತ್ತು. ಸಂತ್ರಸ್ತೆಯ ಸಿಆರ್‌ಪಿಸಿ ಸೆಕ್ಷನ್‌ 164 ಹೇಳಿಕೆ ಓದಿದಾಗ ಬಟ್ಟೆ ಮತ್ತು ಊಟವನ್ನು ಭವಾನಿ ಕಳುಹಿಸಿದ್ದರು ಎಂದು ಹೇಳಿದ್ದಾರೆ. ಹೀಗಾಗಿ, ಸಂತ್ರಸ್ತೆಯನ್ನು ಒತ್ತೆಯಲ್ಲಿ ಇಡಲಾಗಿತ್ತು ಎನ್ನಲಾಗದು” ಎಂದು ಸಮಜಾಯಿಷಿ ನೀಡಿದರು.

ಮಹಿಳೆಯನ್ನು ಅನಗತ್ಯವಾಗಿ ಬಂಧಿಸುವ ವಿಚಾರವನ್ನೂ ಆದೇಶದಲ್ಲಿ ಪ್ರಸ್ತಾಪಿಸಲಾಗಿದೆ. ಮಹಿಳೆಯರನ್ನು ಕಸ್ಟಡಿಗೆ ನೀಡುವುದರ ವಿರುದ್ಧ ನಾನಿದ್ದೇನೆ. ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಮಹಿಳೆ ಕುಟುಂಬದ ಆಧಾರ. ಆಕೆಯನ್ನು ಪೊಲೀಸರು ಬಂಧಿಸಿದರೆ ಇಡೀ ಕುಟುಂಬ ವ್ಯವಸ್ಥೆಗೆ ಹಾನಿಯಾಗುತ್ತದೆ. ಬಂಧನ ವಾರೆಂಟ್‌ ಜಾರಿ ಮಾಡಿದ ಮೇಲೆ ಜಾಮೀನು ಕೇಳುವ ಹಾಗೆ ಇಲ್ಲ ಎಂಬುದಕ್ಕೂ ಆದೇಶದಲ್ಲಿ ಉತ್ತರಿಸಿದ್ದೇನೆ. ಜಾಮೀನು ನೀಡುವಂತಿಲ್ಲ ಎಂಬುದು ಸ್ಥಾಪಿತ ನಿಯಮವಲ್ಲ. ಅದು ಸಂದರ್ಭ ಮತ್ತು ಪ್ರಕರಣದ ವಾಸ್ತವಿಕ ಅಂಶಗಳನ್ನು ಆಧರಿಸಿರುತ್ತದೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ ಎಂದು ವಿವರಿಸಿದರು.

ಭವಾನಿ ರೇವಣ್ಣ
ಲೈಂಗಿಕ ದೌರ್ಜನ್ಯ ಪ್ರಕರಣ: ಭವಾನಿ ರೇವಣ್ಣ ವಿರುದ್ಧ ಅರೆಸ್ಟ್ ವಾರೆಂಟ್

ಎಸ್‌ಐಟಿ ಅಧಿಕಾರಿಗಳು ಸೂಚಿಸಿದಾಗ ಭವಾನಿ ವಿಚಾರಣೆಗೆ ಹಾಜರಾಗಿದ್ದಾರೆ. ಮತ್ತೆ ಕರೆದಾಗಲೂ ವಿಚಾರಣೆಗೆ ಹಾಜರಾಗಲಾಗುವುದು ಎಂದು ಹೇಳಿದ್ದಾರೆ. ಹೀಗಾಗಿ, ನಿರೀಕ್ಷಣಾ ಜಾಮೀನನ್ನು ಕಾಯಂಗೊಳಿಸಲಾಗಿದೆ. ಅಗತ್ಯ ಬಿದ್ದರೆ ಆರೋಪಿ ಭವಾನಿ ಅವರನ್ನು ಕೆ ಆರ್‌ ನಗರಕ್ಕೆ ವಿಚಾರಣೆಗೆ ಕರೆದೊಯ್ಯಲು ಎಸ್‌ಐಟಿಗೆ ಅನುಮತಿಸಲಾಗಿದೆ” ಎಂದರು.

ಮಾಧ್ಯಮ ವಿಚಾರಣೆ ಇರಬಾರದು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಹೀಗಾಗಿ, ಮಾಧ್ಯಮ ವಿಚಾರಣೆ ನಡೆಯಬಾರದು. ಸಾಮಾನ್ಯ ಜನರು ಪತ್ರಿಕೆಗಳನ್ನು ಓದಿ ಅವರು ಅದನ್ನು ನಂಬುತ್ತಾರೆ. ಆದರೆ, ಯಾರೂ ಪ್ರಕರಣದ ದಾಖಲೆಗಳನ್ನು ಓದಿರುವುದಿಲ್ಲ. ಮಾಧ್ಯಮ ವರದಿಗಳನ್ನು ಆಧರಿಸಿ ಮನೆ, ವಾಯು ವಿಹಾರಕ್ಕೆ ಓದಾಗ ಮಾತನಾಡುತ್ತಾರೆ. ಪತ್ರಿಕೆಗಳ ವರದಿ ಆಧರಿಸಿ ನಾವು ಪ್ರಕರಣ ನಿರ್ಧರಿಸಲಾಗದು. ಪ್ರಕರಣದ ದಾಖಲೆಗಳ ಆಧಾರದಲ್ಲಿ ಆದೇಶ ಮಾಡಲಾಗುತ್ತದೆ. ಎಷ್ಟೋ ಸಾರಿ ಮಾಧ್ಯಮ ವಿಚಾರಣೆಯಾಗುತ್ತದೆ. ಪತ್ರಕರ್ತರು ಹೀಗೂ ಬರೆಯುತ್ತಾರೆ, ಆಗೂ ಬರೆಯುತ್ತಾರೆ. ಇಲ್ಲಿ ನಾಗರಿಕ ಸಮಾಜ ಸಂಶಯ ಪ್ರದರ್ಶಿಸಬೇಕು” ಎಂದು ಮನವಿ ಮಾಡುತ್ತೇನೆ ಎಂದು ನ್ಯಾ. ದೀಕ್ಷಿತ್‌ ಹೇಳಿದರು.

ಮಹಿಳೆಯರು ಇಂಥ ಪ್ರಕರಣದಲ್ಲಿ ಇದ್ದಾರೆ ಎಂಬ ಆರೋಪ ಕೇಳಿ ಬಂದಾಗ ಮಾಧ್ಯಮಗಳೂ ಸಂಯಮ ಪ್ರದರ್ಶಿಸಬೇಕು. ಈಗಲೇ ನಾವು ಆರೋಪಿಯನ್ನು ಅಪರಾಧಿ ಎಂದು ಬಿಂಬಿಸಿದರೆ ಸಮಾಜದ ಸ್ವಾಸ್ಥ್ಯಕ್ಕೆ ಹಾನಿ ಉಂಟು ಮಾಡುತ್ತದೆ. ವಿಚಾರಣೆಯಲ್ಲಿ ಆರೋಪಿ/ಅಪರಾಧಿ ನಿರ್ಧಾರವಾಗುತ್ತದೆ. ಅಮೆರಿಕಾದ ಸಂವಿಧಾನಕ್ಕೆ ತಿದ್ದುಪಡಿ ತಂದು ಮಾಧ್ಯಮ ವಿಚಾರಣೆಗೆ ನಿರ್ಬಂಧ ವಿಧಿಸಲಾಗಿದೆ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com