ಪೆಟ್ರೋಲ್- ಡೀಸಲ್ ಬೆಲೆ ಏರಿಕೆ: ಸರ್ಕಾರದ ವಿರುದ್ಧ ಅನಿರ್ದಿಷ್ಟಾವಧಿ ಪ್ರತಿಭಟನೆಗೆ ಬಿಜೆಪಿ ನಿರ್ಧಾರ!

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ನಿರ್ಧಾರದಿಂದ ಹಿಂದೆ ಸರಿಯದ ಹೊರತು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಿಲ್ಲದು ಎಂದು ಬಿಜೆಪಿ ಸೋಮವಾರ ಹೇಳಿದೆ.
ಬಿಜೆಪಿ ಪ್ರತಿಭಟನೆ
ಬಿಜೆಪಿ ಪ್ರತಿಭಟನೆ

ಬೆಂಗಳೂರು: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ನಿರ್ಧಾರದಿಂದ ಹಿಂದೆ ಸರಿಯದ ಹೊರತು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಿಲ್ಲದು ಎಂದು ಬಿಜೆಪಿ ಸೋಮವಾರ ಹೇಳಿದೆ.

ಬೆಲೆ ಏರಿಕೆ ಖಂಡಿಸಿ ನಿನ್ನೆ ಬಿಜೆಪಿ ಮುಖಂಡರು ರಾಜ್ಯದಾದ್ಯಂತ ಪ್ರತಿಭಟನೆ ನಡೆಸಿದರು. ಈ ವೇಳೆ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ, ಸರ್ಕಾರದ ವಿರುದ್ಧ ಹಿಂದೆ ಸರಿಯದ ಹೊರತು ಪ್ರತಿಭಟನೆ ನಿಲ್ಲುವುದಿಲ್ಲ ಎಂದೂ ಎಚ್ಚರಿಕೆ ನೀಡಿದರು.

ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆ ವೇಳೆ ಕೆಲ ಬಿಜೆಪಿ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದರು. ಇಂಧನ ಬೆಲೆ ಏರಿಕೆ ವಿರೋಧಿಸಿ ಸಾಂಕೇತಿಕವಾಗಿ ಬಿಜೆಪಿ ಮುಖಂಡರು ವಾಹನಗಳ ಅಣಕು ಶವಯಾತ್ರೆ ಮಾಡಿದರು.

ಪ್ರತಿಭಟನೆ ವೇಳೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು, ಈ ವಿಚಾರ ತಾರ್ಕಿಕ ಅಂತ್ಯ ಕಾರಣದ ಹೊರತು ಪ್ರತಿಭಟನೆ ನಿಲ್ಲುವುದಿಲ್ಲ ಎಂದು ಹೇಳಿದರು.

ಗ್ಯಾರಂಟಿ ಯೋಜನೆಗಳಿಂದ ಜನರ ಹಾದಿ ತಪ್ಪಿಸಿ, ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿರುವುದನ್ನು ಒಪ್ಪಲು ಸಾಧ್ಯವಿಲ್ಲ. ಸರ್ಕಾರ ಈ ಕ್ರಮವು ಜನರ ನಂಬಿಕೆ ಮತ್ತು ಭಾವನೆಗಳಿಗೆ ದ್ರೋಹ ಮಾಡಿದಂತಾಗುತ್ತದೆ, ಇದು ವಂಚನೆಗಿಂತ ಕಡಿಮೆಯಿಲ್ಲ ಎಂದು ತಿಳಿಸಿದರು.

ಬಿಜೆಪಿ ಪ್ರತಿಭಟನೆ
ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಗೆ ಖಂಡನೆ: ರಾಜ್ಯಾದಾದ್ಯಂತ ಬಿಜೆಪಿ ಪ್ರತಿಭಟನೆ, ಸರ್ಕಾರದ ವಿರುದ್ದ ಆಕ್ರೋಶ

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಭೀಕರ ಬರ ಮತ್ತು ಸಂಕಷ್ಟದಿಂದ ಜನರು ಕಂಗೆಟ್ಟಿದ್ದಾರೆ. ಇದೀಗ ಬೆಲೆ ಏರಿಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಈ ಬೆಲೆ ಏರಿಕೆಯನ್ನು ಬೇರೆ ರಾಜ್ಯಗಳಿಗೆ ಹೋಲಿಸಿ ಸಮರ್ಥಿಸಿಕೊಳ್ಳುವುದು ಈ ಕಾಂಗ್ರೆಸ್ ಸರ್ಕಾರದ ಅಸಮರ್ಥತೆಯ ಪರಮಾವಧಿ. ಕಾಂಗ್ರೆಸ್ ಸರಕಾರಕ್ಕೆ ಕಳೆದ ಒಂದು ವರ್ಷದ ಅಧಿಕಾರದಲ್ಲಿ ಒಂದೇ ಒಂದು ರೂಪಾಯಿಯನ್ನೂ ಅಭಿವೃದ್ಧಿಗೆ ಕೊಡಲು ಸಾಧ್ಯವಾಗಿಲ್ಲ. ರಸ್ತೆ, ಶಾಲೆಗಳ ಅಭಿವೃದ್ಧಿ, ಆಸ್ಪತ್ರೆಗಳ ವಿಚಾರದಲ್ಲೂ ಅಭಿವೃದ್ಧಿ ಎಂಬುದು ಕನಸಾಗಿದೆ ಎಂದು ಟೀಕಿಸಿದರು.

ಬಿಜೆಪಿ ಸರಕಾರ ಇದ್ದಾಗ ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿ ಸ್ಥಾನದಿಂದ ಇಳಿಯುವಾಗ ರಾಜ್ಯದಲ್ಲಿ ರಾಜಸ್ವ ಮಿಗತೆ ಇತ್ತು. ಹೆಚ್ಚು ಸಾಲಗಳೂ ಇರಲಿಲ್ಲ. ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆದ ಒಂದೇ ಒಂದು ವರ್ಷದಲ್ಲಿ ಕರ್ನಾಟಕ ರಾಜ್ಯದ ಆರ್ಥಿಕ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ರಾಜ್ಯ ದಿವಾಳಿ ಅಂಚಿಗೆ ಹೋಗಿದೆ. ಹಾಗಿದ್ದರೆ ಯಾವ ಪುರುಷಾರ್ಥಕ್ಕೆ ಆಡಳಿತ ನಡೆಸುತ್ತಿದ್ದೀರಿ ಎಂದು ಪ್ರಶ್ನಿಸಿದರು.

ಬೆಲೆ ಏರಿಕೆ, ಹಣದುಬ್ಬರದ ಕುರಿತು ತಿಳಿದಿದ್ದರೂ ಅನುಭವಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಲೋಕಸಭಾ ಚುನಾವಣೆ ನಂತರ ಪೆಟ್ರೋಲ್, ಡೀಸೆಲ್ ದರ ಹೆಚ್ಚಳದ ಈ ಜನವಿರೋಧಿ ನಿರ್ಧಾರ ಮಾಡಿದ್ದು, ಇದು ಅಕ್ಷಮ್ಯ ಅಪರಾಧ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು.

ಇತ್ತೀಚಿನ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ 20 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಲ್ಲಿತ್ತು. ಆದರೆ, ಫಲಿತಾಂಶವು ನಿರಾಶೆ ಮೂಡಿಸಿದೆ. ಇದೀಗ ಕಾಂಗ್ರೆಸ್ ಶಾಸಕರೇ ಗ್ಯಾರಂಟಿ ಯೋಜನೆಗಳ ವಿರುದ್ಧ ಧ್ವನಿ ಎತ್ತುತ್ತಿದ್ದಾರೆಂದು ಹೇಳಿದರು.

ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಮಾತನಾಡಿ, ರಾಜ್ಯ ಸರಕಾರ ಗ್ಯಾರಂಟಿ ಯೋಜನೆಗಳಿಗೆ 55 ಸಾವಿರ ಕೋಟಿ ರೂ ಮೀಸಲಿಟ್ಟಿದೆ. ರಾಜ್ಯ ಸರಕಾರ ನಮ್ಮದೇ ಹಣವನ್ನು ಲೂಟಿ ಮಾಡಿ ನಮಗೆ ವಾಪಸ್ ನೀಡುತ್ತಿದೆ. ಕಳೆದ ಒಂದು ವರ್ಷದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ನಡೆದಿಲ್ಲ. ಬೆಂಗಳೂರಿನಲ್ಲಿ ಗುಂಡಿ ಬಿದ್ದ ರಸ್ತೆಗಳು ತುಂಬಿಲ್ಲ. ಬೆಂಗಳೂರನ್ನು ವಿಭಜಿಸಲು ಪ್ರಯತ್ನ ನಡೆಸುತ್ತಿದೆ. ಸರ್ಕಾರದ ಆರ್ಥಿಕ ದುರುಪಯೋಗವನ್ನು ಬಿಜೆಪಿ ಬಯಲು ಮಾಡಲಿದೆ. ಸಿಎಂ ಸಿದ್ದರಾಮಯ್ಯ ಅವರು ಸರ್ಕಾರಿ ಆಸ್ತಿಗಳನ್ನು ಅಡಮಾನ ಇಡಲು ಮುಂದಾಗಿದ್ದಾರೆಂದು ಕಿಡಿಕಾರಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com