
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಈಗಾಗಲೇ ಪೊಲೀಸರ ವಶದಲ್ಲಿರುವ ನಟ ದರ್ಶನ್'ಗೆ ಮತ್ತೊಂದು ಸಂಕಷ್ಟ ಎದುರಾಗುವ ಸಾಧ್ಯತೆಗಳಿವೆ.
ಎರಡು ತಿಂಗಳ ಹಿಂದೆ ಅನೇಕರ್ ನಲ್ಲಿರುವ ದರ್ಶನ್ ಫಾರ್ಮ್ ಹೌಸ್ ನಲ್ಲಿ ಕೆಲಸ ಮಾಡುತ್ತಿದ್ದ ಮ್ಯಾನೇಜರ್ ಶ್ರೀಧರ್ (35) ಆತ್ಮಹತ್ಯೆ ಮಾಡಿಕೊಂಡ ಪ್ರಕರಣದ ಬಗ್ಗೆ ಇದೀಗ ಮತ್ತೆ ಚರ್ಚೆ ಆರಂಭವಾಗಿದ್ದು, ಮೃತ ವ್ಯಕ್ತಿಯ ಸಹೋದರಿ ಕೂಡ ಪ್ರಕರಣವನ್ನು ಮರು ತನಿಖೆ ಮಾಡುವಂತೆ ಆಗ್ರಹಿಸಿದ್ದಾರೆ.
ಶ್ರೀಧರ್ ಅವರ ಸಹೋದರಿ ರೂಪಾ ಅವರು ಪ್ರಕರಣದ ಮರು ತನಿಖೆಗೆ ಆಗ್ರಹಿಸಿದ್ದಾರ. ನನ್ನ ಸಹೋದರನ ಸಾವಿನ ಬಗ್ಗೆ ಮರು ತನಿಖೆ ನಡೆಸಬೇಕು. ದರ್ಶನ್ ಬಂಧನವಾಗಿರುವ ರೇಣುಕಾಸ್ವಾಮಿ ಕೊಲೆ ಪ್ರಕರಣವನ್ನು ಗಮನಿಸಿದರೆ, ನನ್ನ ಸಹೋದರನ ಸಾವಿನಲ್ಲಿ ಅಕ್ರಮ ನಡೆದಿರುವ ಶಂಕೆ ಇದೆ ಎಂದು ರೂಪಾ ಹೇಳಿದ್ದಾರೆ.
ನನ್ನ ಮಗ ಸತ್ತ ನಂತರ, ಕೆಲವರು ನಮಗೆ 50,000 ರೂ ನೀಡಿದ್ದರು. ಆ ಹಣವನ್ನು ನಾವು ತೆಗೆದುಕೊಂಡಿದ್ದೆವು. ಈಗ, ನನ್ನ ಮಗನ ಸಾವಿನಲ್ಲಿ ಅನುಮಾನಗಳು ವ್ಯಕ್ತವಾಗುತ್ತಿವೆ ಎಂದು ಶ್ರೀಧರ್ ಅವರ ತಾಯಿ ಹೇಳಿದ್ದಾರೆ.
ಶ್ರೀಧರ್ ಬಗ್ಗನದೊಡ್ಡಿಯಲ್ಲಿ ಶವವಾಗಿ ಪತ್ತೆಯಾಗಿದ್ದು. ಆತನ ಶವದ ಬಳಿ ವಿಷದ ಬಾಟಲಿ ಪತ್ತೆಯಾಗಿತ್ತು. ಸಾವಿಗೂ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದರು ಎನ್ನಲಾಗಿದೆ. ನನ್ನ ಸಾವಿಗೆ ನಾನೇ ಕಾರಣ, ಯಾರನ್ನೂ ದೂಷಿಸಬಾರದು ಎಂದು ಬರೆದಿಟ್ಟಿದ್ದರು ಎನ್ನಲಾಗುತ್ತಿದೆ.
ಡೆತ್ ನೋಟ್ ನಲ್ಲಿ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಸಹಿ ಹಾಕಿದ್ದರು. ಅದರ ಮೇಲೆ ತಮ್ಮ ಹೆಬ್ಬೆರಳಿನ ಗುರುತನ್ನೂ ಕೂಡ ಹಾಕಿದ್ದರು. ಅಲ್ಲದೇ ತನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ವಿಡಿಯೋವನ್ನು ಮಾಡಿದ್ದರು. ಈ ವಿಡಿಯೋದಲ್ಲಿ ಪದೇ ಪದೇ ನನ್ನ ಸಾವಿಗೆ ನಾನೇ ಕಾರಣ ಎಂದು ಹೇಳಿರುವುದು, ಪೊಲೀಸರಿಗೆ ಮನವಿ ಮಾಡಿರುವುದು ಅನುಮಾನಗಳನ್ನು ಮೂಡಿಸಿದೆ.
ಪ್ರಾಥಮಿಕ ತನಿಖೆಯ ನಂತರ ಆನೇಕಲ್ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದ್ದಾರೆ.
ಡೆತ್ ನೋಟ್ ಮತ್ತು ಶ್ರೀಧರ್ ಅವರ ಮೊಬೈಲ್ ಫೋನ್ ಅನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದೆ. ಪೊಲೀಸರು ಇನ್ನೂ ಎಫ್‌ಎಸ್‌ಎಲ್ ವರದಿಗಳನ್ನು ಸ್ವೀಕರಿಸಿಲ್ಲ. ಪ್ರಕರಣ ಇನ್ನೂ ವಿಚಾರಣೆ ಹಂತದಲ್ಲಿದೆ. ಶ್ರೀಧರ್ ಅವರ ತಂದೆ ತನ್ನ ಮಗನಿಗೆ ಮದುವೆಯಾಗಿರಲಿಲ್ಲ, ಖಿನ್ನತೆಯಲ್ಲಿದ್ದ. ಮದುವೆ ವಿಚಾರವಾಗಿ ಜಗಳವಾಡಿದ್ದ ಎಂದು ಹೇಳಿಕೆ ನೀಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.
Advertisement