ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆಗೆ ಕ್ರಮ: ಡಿಸಿಆರ್‌ಇ 33 ಘಟಕಗಳ ‘ವಿಶೇಷ ಪೊಲೀಸ್‌ ಠಾಣೆ’ಗಳೆಂದು ಘೋಷಿಸಲು ಸರ್ಕಾರ ನಿರ್ಧಾರ!

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯದ ಪ್ರಕರಣಗಳನ್ನು ನಿರ್ವಹಿಸಲು ನಾಗರಿಕ ಹಕ್ಕು ನಿರ್ದೇಶನಾಲಯದ (ಡಿಸಿಆರ್‌ಇ) 33 ಘಟಕಗಳನ್ನು ‘ವಿಶೇಷ ಪೊಲೀಸ್‌ ಠಾಣೆ’ಗಳೆಂದು ಘೋಷಿಸಲು ಸರ್ಕಾರ ನಿರ್ಧರಿಸಿದೆ. ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಸಚಿವ ಸಂಪುಟ ಸಭೆ (ಸಂಗ್ರಹ ಚಿತ್ರ)
ಸಚಿವ ಸಂಪುಟ ಸಭೆ (ಸಂಗ್ರಹ ಚಿತ್ರ)

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯದ ಪ್ರಕರಣಗಳನ್ನು ನಿರ್ವಹಿಸಲು ನಾಗರಿಕ ಹಕ್ಕು ನಿರ್ದೇಶನಾಲಯದ (ಡಿಸಿಆರ್‌ಇ) 33 ಘಟಕಗಳನ್ನು ‘ವಿಶೇಷ ಪೊಲೀಸ್‌ ಠಾಣೆ’ಗಳೆಂದು ಘೋಷಿಸಲು ಸರ್ಕಾರ ನಿರ್ಧರಿಸಿದೆ. ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಸಚಿವ ಹೆಚ್,ಕೆ.ಪಾಟೀಲ್ ಅವರು, ಪ್ರತಿ ಜಿಲ್ಲೆಗೊಂದು ಠಾಣೆ ಮತ್ತು ಬೆಂಗಳೂರಿನಲ್ಲಿ ಎರಡು ಈ ವಿಶೇಷ ಪೊಲೀಸ್‌ ಠಾಣೆಗಳಿರಲಿವೆ. ಪರಿಶಿಷ್ಟರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದ ಎಲ್ಲ ಪ್ರಕರಣಗಳನ್ನು ಈ ಠಾಣೆಗಳಿಗೆ ವರ್ಗಾಯಿಸಲಾಗುವುದು ಎಂದು ಹೇಳಿದರು.

ಒಳಾಡಳಿತ ಇಲಾಖೆಯಿಂದ ಸಿಆರ್‌ಪಿಸಿ ಕಾಯ್ದೆ 1973ರ ಕಲಂ 2 ಎಸ್‌ ಅಡಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಕೆಲವು ರಾಜ್ಯಗಳಲ್ಲಿ ಈಗಾಗಲೇ ವಿಶೇಷ ಪೊಲೀಸ್‌ ಠಾಣೆಗಳು ಇವೆ. ರಾಜ್ಯದಲ್ಲಿ 2022 ರ ಡಿಸೆಂಬರ್‌ವರೆಗೆ 7,633 ಪ್ರಕರಣಗಳು ಮಾತ್ರ ನ್ಯಾಯಾಲಯಕ್ಕೆ ಬಂದಿವೆ. ಈ ಪೈಕಿ 1,723 ಪ್ರಕರಣಗಳು ವಿಲೇವಾರಿ ಆಗಿವೆ. 1,363 ಪ್ರಕರಣಗಳು ಖುಲಾಸೆ ಆಗಿದ್ದು, ಕೇವಲ 68 ಪ್ರಕರಣಗಳಲ್ಲಿ ಶಿಕ್ಷೆ ಆಗಿದೆ. ಶಿಕ್ಷೆ ಪ್ರಮಾಣ ಶೇ 4ರಷ್ಟು ಎಂದು ಮಾಹಿತಿ ನೀಡಿದರು.

ಸಚಿವ ಸಂಪುಟ ಸಭೆ (ಸಂಗ್ರಹ ಚಿತ್ರ)
'ಪ್ರಗತಿಪಥ' ಯೋಜನೆ ಅನುಷ್ಠಾನಕ್ಕೆ ಸಚಿವ ಸಂಪುಟ ಸಮ್ಮತಿ; 7,110 ಕಿ.ಮೀ ಗ್ರಾಮೀಣ ರಸ್ತೆ ಅಭಿವೃದ್ಧಿ: ಪ್ರಿಯಾಂಕ್ ಖರ್ಗೆ

ರಾಜ್ಯದಲ್ಲಿ ಪ್ರತಿ ವರ್ಷ 2,000 ದೌರ್ಜನ್ಯ ಪ್ರಕರಣಗಳು ದಾಖಲಾಗುತ್ತಿವೆ. ಇನ್ನು ಮುಂದೆ ಪರಿಶಿಷ್ಟರ ಮೇಲಿನ ದೌರ್ಜನ್ಯದ ಪ್ರಕರಣಗಳನ್ನು ವಿಶೇಷ ಠಾಣೆಗಳಲ್ಲಿಯೇ ದಾಖಲಿಸಲಾಗುವುದು. ನಿಗದಿತ ಅವಧಿಯಲ್ಲಿ ತನಿಖೆ ನಡೆಸಿ, ನಿಗದಿತ ಸಮಯದೊಳಗೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

ಇದರಿಂದಾಗಿ ಸಮಯಬದ್ಧವಾಗಿ ಮತ್ತು ನ್ಯಾಯೋಚಿತವಾಗಿ ತನಿಖೆ ನಡೆಸಬಹುದಾಗಿದೆ. ತನಿಖೆಯ ಗುಣಮಟ್ಟವೂ ಹೆಚ್ಚಾಗಲಿದೆ. ಮುಖ್ಯವಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಮುದಾಯದ ಆರ್ಥಿಕ ದುಃಸ್ಥಿತಿಯ ಬಗ್ಗೆ ಸಾರ್ವಜನಿಕರಲ್ಲೂ ಅರಿವು ಮೂಡಲು ಸಹಾಯಕವಾಗುತ್ತದೆ. ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ 24ರಷ್ಟು ಈ ಸಮುದಾಯದವರೇ ಇದ್ದಾರೆ ಎಂದು ಹೇಳಿದರು.

ಪ್ರತಿಯೊಂದು ವಿಶೇಷ ಠಾಣೆಯಲ್ಲೂ ಡಿವೈಎಸ್‌ಪಿ/ಎಸಿಪಿ ದರ್ಜೆಯ ಅಧಿಕಾರಿಗಳು ಇರುತ್ತಾರೆ. ಇಡೀ ರಾಜ್ಯಕ್ಕೆ 1 ಎಡಿಜಿಪಿ, 1 ಐಜಿಪಿ, 10 ಎಸ್‌ಪಿ, 12 ಡಿವೈಎಸ್‌ಪಿ, 27 ಪಿಐ, 181 ಹೆಡ್‌ ಕಾನ್‌ಸ್ಟೆಬಲ್‌ಗಳು ಮತ್ತು 412 ಕಾನ್‌ಸ್ಟೆಬಲ್‌ಗಳು ಸೇರಿ 677 ಹುದ್ದೆಗಳ ಅಗತ್ಯವಿದೆ ಎಂಬ ಪ್ರಸ್ತಾವನೆ ಇದೆ. ಈ ವಿಚಾರವನ್ನು ಸಮಾಜ ಕಲ್ಯಾಣ ಇಲಾಖೆ ಮತ್ತು ಗೃಹ ಇಲಾಖೆಗಳು ಸಭೆಸಿ ತೀರ್ಮಾನ ತೆಗೆದುಕೊಳ್ಳುತ್ತವೆ ಎಂದು ಅವರು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com