
ಉಡುಪಿ: ಉಡುಪಿ ರೈಲು ನಿಲ್ದಾಣದ ಬಳಿ 52 ವರ್ಷದ ಕ್ಯಾಂಟೀನ್ ಸಿಬ್ಬಂದಿಯನ್ನು ಹತ್ಯೆಗೈದ ಆರೋಪದ ಮೇಲೆ ಬಂಧಿತರಾಗಿದ್ದ ಇಬ್ಬರನ್ನು ಉಡುಪಿಯ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶುಕ್ರವಾರ ಖುಲಾಸೆಗೊಳಿಸಿದೆ.
ಜುಲೈ 21, 2022 ರಂದು ಸಂಭವಿಸಿದ್ದ ಉಡುಪಿ ರೈಲಿ ನಿಲ್ದಾಣ ಕ್ಯಾಂಟಿನ್ ಸಿಬ್ಬಂದಿ ಕೊಲೆ ಪ್ರಕರಣದಲ್ಲಿ ಆರೋಪಿಗಳಾಗಿದ್ದ ತಮಿಳುನಾಡಿನ ತಂಜಾವೂರಿನ ವಿಘ್ನೇಶ್ ಕುಟ್ಟಿ (24) ಮತ್ತು ಬೆಂಗಳೂರಿನ ಮಲ್ಲತ್ತಹಳ್ಳಿಯ ನವೀನ್ ಕುಮಾರ್ (27) ಅವರನ್ನು ಕೋರ್ಟ್ ಖುಲಾಸೆಗೊಳಿಸಿದೆ.
ಅಪರಾಧಕ್ಕೆ ಸಂಬಂಧಿಸಿದ ಸಾಕಷ್ಟು ಪುರಾವೆಗಳ ಕೊರತೆಯನ್ನು ಉಲ್ಲೇಖಿಸಿ ನ್ಯಾಯಮೂರ್ತಿ ದಿನೇಶ್ ಹೆಗ್ಡೆ ಅವರು ಈ ತೀರ್ಪು ನೀಡಿದರು.
ಕೊಲೆಗೀಡಾದ ಕ್ಯಾಂಟೀನ್ ಸಿಬ್ಬಂದಿ ಕುಮಾರ್, ಇಂದ್ರಾಳಿ ಪ್ರದೇಶದ ಉಡುಪಿ ರೈಲು ನಿಲ್ದಾಣದ ಬಳಿಯ ಕ್ಯಾಂಟೀನ್‌ನಲ್ಲಿ ಕೆಲಸ ಮಾಡುತ್ತಿದ್ದರು. ಜುಲೈ 21, 2022 ರಂದು ವಿಘ್ನೇಶ್ ಕುಟ್ಟಿ ಮತ್ತು ನವೀನ್ ಕುಮಾರ್ ಕ್ಷುಲ್ಲಕ ವಿಚಾರಕ್ಕೆ ಜಗಳ ತೆಗೆದಿದ್ದಾರೆ.
ಈ ವೇಳೆ ಮಾತಿನ ಚಕಮಕಿ ನಡೆದಿದ್ದು, ಇಬ್ಬರೂ ಸೇರಿ ಸಂತ್ರಸ್ತ ಕುಮಾರ್ ನನ್ನು ಮಾರಣಾಂತಿಕವಾಗಿ ಥಳಿಸಿ ಹತ್ಯೆಗೈದಿದ್ದಾರೆ. ತೀವ್ರ ವಾಗ್ವಾದದ ವೇಳೆ ಆರೋಪಿಗಳು ಮರದ ದೊಣ್ಣೆಯಿಂದ ಸಂತ್ರಸ್ತ ಕುಮಾರ್ ಮೇಲೆ ಹಲ್ಲೆ ನಡೆಸಿದ್ದು, ಹಲ್ಲೆಯ ತೀವ್ರತೆಗೆ ಕುಮಾರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮರಣೋತ್ತರ ಪರೀಕ್ಷೆ ನಡೆಸಿದ ಮಣಿಪಾಲದ ಫೋರೆನ್ಸಿಕ್ ತಜ್ಞರು, ಕುಮಾರ್ ಅವರ ಮುಖದ ಮೇಲೆ ಗಂಭೀರ ಗಾಯಗಳಾಗಿದ್ದು, ಮೂಳೆ ಮುರಿತ, ಗಾಯ, ರಕ್ತ ಹೆಪ್ಪುಗಟ್ಟಿದ್ದು, ಇದರಿಂದ ಸಾವು ಸಂಭವಿಸಿದೆ ಎಂದು ಹೇಳಿದ್ದಾರೆ.
ಘಟನೆ ಬಳಿಕ ಆರೋಪಿಗಳಾದ ವಿಘ್ನೇಶ್ ಕುಟ್ಟಿ ಮತ್ತು ನವೀನ್ ಕುಮಾರ್ ಅವರನ್ನು ಬಂಧಿಸಲಾಯಿತು ಮತ್ತು ಅವರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲಾಯಿತು. 21 ಸಾಕ್ಷಿಗಳನ್ನು ಪರಿಶೀಲಿಸಿದ ನಂತರ, ಆರೋಪಿಗಳ ಅಪರಾಧವನ್ನು ಸಾಬೀತು ಪಡಿಸಲು ಸಾಕಷ್ಟು ಸಾಕ್ಷ್ಯಾಧಾರಗಳಿಲ್ಲ ಎಂದು ನ್ಯಾಯಾಲಯವು ತೀರ್ಮಾನಿಸಿ ಇಬ್ಬರನ್ನೂ ಖುಲಾಸೆಗೊಳಿಸಿದೆ. ವಿಚಾರಣೆ ವೇಳೆ ಇಬ್ಬರ ಪರ ವಕೀಲ ಚೇರ್ಕಾಡಿ ಅಖಿಲ್ ಬಿ ಹೆಗ್ಡೆ ವಾದ ಮಂಡಿಸಿದ್ದರು.
Advertisement