
ಹಾಸನ: ಜೆಡಿಎಸ್ MLC ಸೂರಜ್ ರೇವಣ್ಣ ವಿರುದ್ಧ ಕೇಳಿಬಂದಿರುವ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಳೆ ನರಸೀಪುರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದ್ದು, ತನಿಖಾಧಿಕಾರಿ ನೇಮಕ ಮಾಡಲಾಗಿದೆ.
ಹೌದು.. ವಿಧಾನಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ(Suraj Revanna)ವಿರುದ್ದ ಅಸ್ವಾಭಾವಿಕ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದಿದ್ದು, ಎಫ್ಐಆರ್(FIR) ದಾಖಲಾಗಿದೆ.
ನಿನ್ನೆ(ಜೂ.21) ಬೆಂಗಳೂರಿನ ಡಿಜಿ ಕಛೇರಿಗೆ ದೂರು ನೀಡಿದ್ದ ಸಂತ್ರಸ್ಥ, ದೂರು ನೀಡುವಾಗಲೇ ಹಾಸನ ಎಸ್ಪಿ ಗೆ ದೂರಿನ ಪ್ರತಿ ಮೇಲ್ ಮಾಡಿದ್ದರು. ಇದರ ಜೊತೆಗೆ ಮೇಲ್ ಮಾಡಿದ್ದ ಬಗ್ಗೆಯೂ ವೀಡಿಯೋ ಹೇಳಿಕೆಯಲ್ಲಿ ಮಾಹಿತಿ ಹಂಚಿಕೊಂಡಿದ್ದರು.
ಅದರಂತೆ ಇಂದು ಹಾಸನದ ಜಿಲ್ಲಾ ಪೊಲೀಸ್ ಕಛೇರಿಗೆ ಸಂತ್ರಸ್ಥನ ದೂರು ತಲುಪಿದ್ದು, ಜಿಲ್ಲಾ ಪೊಲೀಸ್ ಕಛೇರಿಗೆ ಬಂದ ದೂರನ್ನು, ಅಧಿಕಾರಿಗಳನ್ನು ಹೊಳೆನರಸೀಪುರ ಗ್ರಾಮಾಂತರ ಠಾಣೆ ಪೊಲೀಸರಿಗೆ ವರ್ಗಾಯಿಸಿದ್ದಾರೆ. ದೂರಿನ ಸತ್ಯಾಸತ್ಯತೆಗಾಗಿ ದೂರುದಾರನನ್ನು ಸಂಪರ್ಕ ಮಾಡಲು ಪೊಲೀಸರು ಪ್ರಯತ್ನಿಸುತ್ತಿದ್ದು, ಈ ಹಿನ್ನಲೆ ಹೊಳೆನರಸೀಪುರ ಗ್ರಾಮಾಂತರ ಠಾಣೆಗೆ ಅರಕಲಗೂಡು ತಾಲ್ಲೂಕು ಮೂಲದ ಸಂತ್ರಸ್ಥ ದೂರು ನೀಡಿದ್ದಾರೆ.
ತನಿಖಾಧಿಕಾರಿ ನೇಮಕ
ಸೂರಜ್ ವಿರುದ್ಧ ಹೊಳೆನರಸೀಪುರ ಠಾಣೆಯಲ್ಲಿ ದೂರು ದಾಖಲಾದ ಬೆನ್ನಲ್ಲೇ ವಿಚಾರಣೆ ಪ್ರಾರಂಭಿಸಲಾಗಿದ್ದು, ಬಂಧನ ಸಾಧ್ಯತೆ ಇದೆ. ಸೂರಜ್ ರೇವಣ್ಣ ವಿರುದ್ಧ ದಾಖಲಾಗಿರುವ ಎಫ್ ಐಆರ್ ಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ತನಿಖಾಧಿಕಾರಿ ನೇಮಕ ಮಾಡಿದ್ದು, ಸಕಲೇಶ ಪುರ ಠಾಣೆಯ ಡಿವೈಎಸ್ ಪಿ ಪ್ರಮೋದ್ ಕುಮಾರ್ ರನ್ನು ನೇಮಿಸಲಾಗಿದೆ.
ಇನ್ನು ಪ್ರಕರಣ ಸಂಬಂಧ ತಾಂತ್ರಿಕ ಸಾಕ್ಷ್ಯ ಸಂಗ್ರಹಕ್ಕಾಗಿ ಸಿಇಎನ್ ಠಾಣೆಗೆ ಕರೆತಂದಿದ್ದು, ಮೊಬೈಲ್ ಆಡಿಯೋ ರಿಕವರಿ ಮಾಡಲಿದ್ದಾರೆ. ದೂರು ನೀಡುವ ಮುನ್ನ ಡಾ.ಸೂರಜ್ ರೇವಣ್ಣ ಅವರಿಗೆ ಸಂತ್ರಸ್ಥ ಕರೆ ಮಾಡಿದ್ದ, ಸಂತ್ರಸ್ತ ಮಾತನಾಡಿರುವ ಆಡಿಯೋ ತಮ್ಮ ಬಳಿ ಇರುವ ಬಗ್ಗೆ ಮಾಹಿತಿ ಸೂರಜ್ ಪೊಲೀಸರಿಗೆ ನೀಡಿದ್ದರು. ಈ ಹಿನ್ನಲೆ ಆಡಿಯೋ ರಿಕವರಿಗಾಗಿ ಸೂರಜ್ ರೇವಣ್ಣ ಅವರನ್ನು ಪೊಲೀಸರು ಕರೆದೊಯ್ದಿದ್ದಾರೆ.
Advertisement