ಹಣಕಾಸು ಆಯೋಗ ಶಿಫಾರಸ್ಸಿನಂತೆ 11,495 ಕೋಟಿ ರೂ. ಅನುದಾನ ಬಿಡುಗಡೆಗೆ ಕೇಂದ್ರಕ್ಕೆ ಒತ್ತಾಯ: ಕೃಷ್ಣ ಬೈರೇಗೌಡ
ಬೆಂಗಳೂರು: ಹಣಕಾಸು ಆಯೋಗ ಶಿಫಾರಸು ಮಾಡಿರುವ ರೂ.11,495 ಕೋಟಿ ಅನುದಾನ ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಕೇಂದ್ರ ಬಜೆಟ್ ಪೂರ್ವಭಾವಿ ಸಮಾಲೋಚನಾ ಸಭೆಗೆ ರಾಜ್ಯದ ಪ್ರತಿನಿಧಿಯಾಗಿರುವ ಕೃಷ್ಣ ಬೈರೇಗೌಡ, ಭದ್ರಾ ಮೇಲ್ದಂಡೆ ನೀರಾವರಿ ಯೋಜನೆಗೆ ಈಗಾಗಲೇ ಘೋಷಿಸಲಾಗಿರುವ ರೂ. 5, 300 ಕೋಟಿ ನೆರವನ್ನು ಬಿಡುಗಡೆ ಮಾಡಿ ಅದನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಬೇಕು ಎಂದು ಒತ್ತಾಯಿಸಿರುವುದಾಗಿ ಹೇಳಿಕೆಯಲ್ಲಿ ಮಾಹಿತಿ ನೀಡಿದ್ದಾರೆ.
ಸೆಸ್ ಮತ್ತು ಸರ್ ಚಾರ್ಜ್ ಗಳನ್ನು ಪೂಲ್ ಗೆ ಸೇರಿಸಬೇಕು. ಇದರಿಂದ ರಾಜ್ಯಗಳು ಕೇಂದ್ರ ತೆರಿಗೆಗಳಲ್ಲಿ ತಮ್ಮ ಸರಿಯಾದ ಪಾಲನ್ನು ಪಡೆಯಬಹುದು ಎಂದು ತಿಳಿಸಲಾಗಿದೆ. ಅಲ್ಲದೇ ಬೆಂಗಳೂರು ಅಭಿವೃದ್ಧಿ ಮತ್ತು ಕಲ್ಯಾಣ ಕರ್ನಾಟಕ ಅಭಿವೃದ್ಧಿಗಾಗಿ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಒತ್ತಾಯಿಸಿರುವುದಾಗಿ ತಿಳಿಸಿದ್ದಾರೆ.
ಅಂಗನವಾಡಿ, ಆಶಾ ಮತ್ತು ಮಧ್ಯಾಹ್ನದ ಊಟದ ಕಾರ್ಯಕರ್ತೆಯರಿಗೆ ಗೌರವಧನವನ್ನು ಹೆಚ್ಚಿಸಬೇಕು, ವಸತಿ ಯೋಜನೆಗಳಲ್ಲಿ ಫಲಾನುಭವಿಗಳಿಗೆ ನೀಡಲಾಗುವ ಕೇಂದ್ರ ಸರ್ಕಾರದ ಪಾಲನ್ನು ನಗರ ಪ್ರದೇಶದಲ್ಲಿ ₹ 1.5 ರಿಂದ ₹ 5 ಲಕ್ಷಕ್ಕೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ₹ 1.2 ರಿಂದ ₹ 3 ಲಕ್ಷಕ್ಕೆ ಹೆಚ್ಚಿಸಬೇಕು, ರಾಯಚೂರಿಗೆ AIIMS ಘೋಷಿಸುವುದು ಸೇರಿದಂತೆ ಮುಖ್ಯಮಂತ್ರಿಯವರ ವಿವರವಾದ ಟಿಪ್ಪಣಿಯನ್ನು ಸಹ ದಾಖಲೆಯಲ್ಲಿ ಇರಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ