ಅಂತಾರಾಷ್ಟ್ರೀಯ ವಿಧವೆಯರ ದಿನ: ಕಲಬುರಗಿಯಲ್ಲಿ ಐವರು ವಿಧವೆಯರಿಗೆ ಸನ್ಮಾನ!
ಕಲಬುರಗಿ: ಬಸವೇಶ್ವರ ಸಮಾಜ ಸೇವಾ ಬಳಗ ಮತ್ತು ಸುಜಯ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆ ಸಹಯೋಗದಲ್ಲಿ ಭಾನುವಾರ ನಗರದ ಗುಳ್ಳಬಾವಾಡಿ ಬಡಾವಣೆಯಲ್ಲಿರುವ ಸಮುದಾಯ ಭವನದಲ್ಲಿ ‘ಅಂತಾರಾಷ್ಟ್ರೀಯ ವಿಧವೆಯರ ದಿನಾಚರಣೆ’ ಆಯೋಜಿಸಲಾಗಿತ್ತು. ಐವರು ವಿಧವೆಯರಿಂದ ಕಾರ್ಯಕ್ರಮ ಉದ್ಘಾಟಿಸಿ, ಅವರನ್ನು ಸನ್ಮಾನಿಸಲಾಯಿತು. ಲಕ್ಷ್ಮಿ ಹೊಸಮನಿ, ಆಶಾಮ್ಮ ಗುಡ್ಡಪಾಪ, ಬನ್ನೆಮ್ಮ ಹೊಸಮನಿ, ಶರಣಮ್ಮ ಅಲೀಪುರ ಮತ್ತು ರತ್ನಮ್ಮ ಭೀಮನಳ್ಳಿ ಅವರು ಸನ್ಮಾನಿತರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಸಾಮಾಜಿಕ ಹೋರಾಟಗಾರ ಹಾಗೂ ನ್ಯಾಯವಾದಿ ಸುನೀಲಕುಮಾರ ಎಚ್.ವಂತಿ ಮಾತನಾಡಿ, ಯಾವುದೇ ಅಡೆತಡೆ ಮತ್ತು ವಿಳಂಬವಿಲ್ಲದೆ ಸರ್ಕಾರ ವಿಧವಾ ಪಿಂಚಣಿ ನೀಡಬೇಕು. ವಿಧವೆಯರಿಗಾಗಿಯೇ ಮನೆಗಳನ್ನು ನಿರ್ಮಿಸಿ ಸ್ವಯಂ ಉದ್ಯೋಗಾವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಅಧ್ಯಕ್ಷತೆ ವಹಿಸಿದ್ದ ಬಳಗದ ಅಧ್ಯಕ್ಷ ಎಚ್.ಬಿ.ಪಾಟೀಲ್ ಮಾತನಾಡಿ, ವಿಧವೆಯರಲ್ಲಿ ಭೇದ ಭಾವ ಬೇಡ, ಅವರ ಭಾವನೆಗಳಿಗೆ ಧಕ್ಕೆ ತರುವುದು ಅಮಾನವೀಯ ಹಾಗೂ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಮಹಾತ್ಮ ಗೌತಮ ಬುದ್ಧ, ಬಸವಣ್ಣ, ಡಾ.ಬಿ.ಆರ್.ಅಂಬೇಡ್ಕರ್, ಮಹಾತ್ಮ ಜ್ಯೋತಿಬಾ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ ಅವರು ಎಲ್ಲರಿಗೂ ನ್ಯಾಯ ಮತ್ತು ಮಹಿಳೆಯರಿಗೆ ಸಮಾನ ಹಕ್ಕುಗಳಿಗಾಗಿ ಹೋರಾಡಿದರು ಎಂದು ಹೇಳಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ