
ಬೆಳಗಾವಿ: ಸಾವಿನ ನಂತರ ದೇಹ ದಾನ ಅಥವಾ ಅಂಗಾಂಗ ದಾನ ಮಾಡುವುದರಿಂದ ಅಗತ್ಯವಿರುವ ರೋಗಿಗಳು ಮತ್ತು ಎಂಬಿಬಿಎಸ್ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನುಕೂಲವಾಗಲಿದೆ. ಸಾವಿನ ನಂತರ ದೇಹವನ್ನು ಚಿತೆಗೆ ಹಾಕದೆ ಅಥವಾ ಹೂಳದೆ ಅಪಘಾತ ಮತ್ತಿತರ ಕಾರಣಗಳಿಂದ ಅಂಗಾಂಗ ಕಳೆದುಕೊಂಡ ಎರಡರಿಂದ ಮೂವರ ಜೀವವನ್ನು ಉಳಿಸುವುದರಿಂದ ಎಲ್ಲಾರೂ ದೇಹ, ಅಂಗಾಂಗ ದಾನ ಮಾಡಲು ಪ್ರತಿಜ್ಞೆ ಸ್ವೀಕರಿಸಬೇಕು ಎಂದು ಮಾಜಿ ವಿಧಾನಪರಿಷತ್ ಸದಸ್ಯ ಹಾಗೂ ಕೆಎಲ್ ಇ ಸೊಸೈಟಿ ನಿರ್ದೇಶಕ ಮಹಾಂತೇಶ್ ಕವಾಟಗಿಮಠ ಹೇಳಿದರು.
ಮೊದಾಗ ಗ್ರಾಮದ ರಾಧಾಸ್ವಾಮಿ ಸತ್ಸಂಗದಲ್ಲಿ ಭಾನುವಾರ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಫೌಂಡೇಷನ್ ಕಾರ್ಯವನ್ನು ಶ್ಲಾಘಿಸಿದರು. ಸಮಾಜ ಸೇವೆಯನ್ನು ಕಾರ್ಯವನ್ನು ಮುಂದುವರೆಸುವಂತೆ ಅವರು ಮನವಿ ಮಾಡಿದರು. ಇದೇ ಸಂದರ್ಭದಲ್ಲಿ 75 ಜನರು ದೇಹ ಹಾಗೂ ಅಂಗಾಂಗ ದಾನ ಮಾಡುವುದಾಗಿ ಪ್ರತಿಜ್ಞೆ ಮಾಡಿದರು.
ರಾಧಾಸ್ವಾಮಿ ಸತ್ಸಂಗದ ಶಿವಾಜಿ ರಾವ್ ಕೆದನೂರಕರ್ ಮಾತನಾಡಿ, ಈ ಕಾರ್ಯಕ್ರಮಗಳು ಅಂಗಾಂಗ ದಾನಕ್ಕಾಗಿ ಜನರಲ್ಲಿ ಯಶಸ್ವಿಯಾಗಿ ಜಾಗೃತಿ ಮೂಡಿಸುತ್ತದೆ ಎಂದು ಹೇಳಿದರು. ಕಳೆದ ವರ್ಷ ಸುಮಾರು 70 ಶಿಕ್ಷಕರು ವೇದಾಂತ್ ಫೌಂಡೇಶನ್ ಮೂಲಕ ಕೆಎಲ್‌ಇ ಆಸ್ಪತ್ರೆಯಲ್ಲಿ ದೇಹದಾನಕ್ಕೆ ಪ್ರತಿಜ್ಞೆ ಮಾಡಿದ್ದರು. ಈ ದಾಖಲೆಯನ್ನು ಮುರಿದು ಇಂದು ಸುಮಾರು 75 ಜನರು ವೇದಾಂತ್ ಫೌಂಡೇಶನ್ ಮೂಲಕ ತಮ್ಮ ದೇಹ ಮತ್ತು ಅಂಗಾಂಗ ದಾನ ಮಾಡಲು ವಾಗ್ದಾನ ಮಾಡಿದರು.
ಇದೇ ವೇಳೆ ಕೆಎಲ್ ಇ ಸಂಸ್ಥೆ ಆಯೋಜಿಸಿದ್ದ ಆರೋಗ್ಯ ತಪಾಸಣೆ ಕಾರ್ಯಕ್ರಮದಲ್ಲಿ ಸುಮಾರು 500 ಮಂದಿ ಪಾಲ್ಗೊಂಡಿದ್ದರು. ರೋಗಿಗಳಿಗೆ ಉಚಿತ ತಪಾಸಣೆಯೊಂದಿಗೆ ಉಚಿತ ಔಷಧಗಳನ್ನು ವಿತರಿಸಲಾಯಿತು.
Advertisement