
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೈಲು ಪಾಲಾಗಿದ್ದು, ದರ್ಶನ್ ಈಗ ವಿಚಾರಣಾಧೀನ ಕೈದಿ ನಂಬರ್ 6106 ಆಗಿದ್ದಾರೆ.
13 ವರ್ಷಗಳ ಹಿಂದೆ ತಮ್ಮ ಪತ್ನಿ ಮೇಲೆ ಹಲ್ಲೆ ನಡೆಸಿದ ಆರೋಪ ಹೊತ್ತು 52 ದಿನಗಳ ಕಾಲ ವಿಚಾರಣಾಧೀನ ಕೈದಿಯಾಗಿ ಸೆರೆಮನೆ ವಾಸ ಅನುಭವಿಸಿದ್ದ ದರ್ಶನ್ ಈಗ 2ನೇ ಬಾರಿ ಕೊಲೆ ಆರೋಪದಲ್ಲಿ ಜೈಲು ಸೇರಿದ್ದಾರೆ.
ಪೊಲೀಸ್ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ ನಗರದ ಎಸಿಎಂಎಂ ನ್ಯಾಯಾಲಯಕ್ಕೆ ದರ್ಶನ್, ಅವರ ಆಪ್ತರಾದ ವಿನಯ್, ಪ್ರದೂಷ್ ಹಾಗೂ ಧನರಾಜ್ ಅಲಿಯಾಸ್ ರಾಜನನ್ನು ಶನಿವಾರ ಮಧ್ಯಾಹ್ನ ಪೊಲೀಸರು ಹಾಜರುಪಡಿಸಿದರು.
ಆ ವೇಳೆ ಆರೋಪಿಗಳು ಭಾರಿ ಪ್ರಭಾವಿಗಳಾಗಿದ್ದಾರೆ. ಯಾವ ಕಾರಣಕ್ಕೂ ಜಾಮೀನು ಕೊಡಬಾರದು ಎಂದು ಎಸ್'ಪಿಪಿ ಪ್ರಸನ್ನಕುಮಾರ್ ವಾದಿಸಿದರು. ಬಳಿಕ ನಾಲವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಿ ನ್ಯಾಯಾಲವಯು ಆದೇಶಿಸಿತು. ಅಂತೆಯೇ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಸಂಜೆ 5.30ರ ಸುಮಾರಿಗೆ ದರ್ಶನ್ ಹಾಗೂ ಸಹಚರರನ್ನು ಬಿಗಿ ಬಂದೋಬಸ್ತ್ ನಲ್ಲಿ ಕರೆದೊಯ್ದು ಪೊಲೀಸರು ಬಿಟ್ಟರು.
ದರ್ಶನ್ ಜೊತೆ ಜೈಲು ಪಾಲಾಗಿರುವ ಧನರಾಜ್ - ವಿಚಾರಣಾಧೀನ ಕೈದಿ ನಂಬರ್ 6107, ವಿನಯ್ - ವಿಚಾರಣಾಧೀನ ಕೈದಿ ನಂಬರ್ 6108, ಪ್ರದೂಶ್‌ಗೆ - ವಿಚಾರಣಾಧೀನ ಕೈದಿ ನಂಬರ್ 6109 ಕೊಡಲಾಗಿದೆ.
ಪರಪ್ಪನ ಅಗ್ರಹಾರ ಸೇರಿರುವ ದರ್ಶನ್‌ಗೆ ಜೈಲಿನಲ್ಲಿ ವಿಶೇಷ ಬ್ಯಾರಕ್ ವ್ಯವಸ್ಥೆ ಮಾಡಲಾಗಿದೆ. ಭದ್ರತಾ ದೃಷ್ಟಿಯಿಂದಾಗಿ ದರ್ಶನ್ ಅನ್ನು ವಿಶೇಷ ಬ್ಯಾರಕ್‌ನಲ್ಲಿ ಇರಿಸಲಾಗಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಮೂರು ವಿಶೇಷ ಬ್ಯಾರಕ್‌ಗಳಿವೆ. ಇತರೆ ಕೈದಿಗಳಿಂದ ಅಪಾಯವಿರುವ ಆರೋಪಿಗಳನ್ನು ವಿಶೇಷ ಬ್ಯಾರಕ್‌ನಲ್ಲಿ ಇರಿಸಲಾಗುತ್ತದೆ. ದರ್ಶನ್ ಸದ್ಯ ಮೂರನೇ ಬ್ಯಾರಕ್ ನೀಡಲಾಗಿದೆ.
ಜೂನ್ 20 ರಂದು ಪವಿತ್ರಾ ಗೌಡ ಹಾಗೂ ಇತರೆ ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿತ್ತು. ಅಂದರೆ, ಜುಲೈ 4 ರವರೆಗೂ ಪವಿತ್ರಾ ಗೌಡ ಮತ್ತು ಆರೋಪಿಗಳು ಜೈಲಿನಲ್ಲಿಯೇ ಇರಬೇಕಿದೆ. ಇಂದು (ಜೂನ್ 22) ದರ್ಶನ್ ಮತ್ತು ಮೂವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ಜುಲೈ 4 ರವರೆಗೂ ರೇಣುಕಾ ಸ್ವಾಮಿ ಹತ್ಯೆ ಕೇಸ್‌ಗೆ ಸಂಬಂಧಿಸಿದ ಎಲ್ಲಾ ಆರೋಪಿಗಳಿಗೂ ಜೈಲೇ ಗತಿ. ಜುಲೈ 4ರ ನಂತರ ಎಲ್ಲರ ಭವಿಷ್ಯ ನಿರ್ಧಾರವಾಗಲಿದೆ.
Advertisement