
ಕೋಲಾರ: ಆನಂದ ಮಾರ್ಗ ಆಶ್ರಮದಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದು ಸ್ವಾಮೀಜಿಯೊಬ್ಬರ ಕೊಲೆಯಾಗಿರುವ ಘಟನೆ ಮಾಲೂರು ತಾಲೂಕಿನ ಸಂತಳ್ಳಿಯಲ್ಲಿ ನಡೆದಿದೆ.
ಘಟನೆ ಸಂಬಂಧ ಆಚಾರ್ಯ ಧರ್ಮಪ್ರಾಣಾನಂದ, ಪ್ರಾಣೇಶ್ವರಾನಂದ ಹಾಗೂ ಅರುಣ್ ಕುಮಾರ್ ಎಂಬ ಮೂವರು ಆರೋಪಿಗಳನ್ನು ಮಾಲೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಶನಿವಾರ ಬೆಳಗ್ಗೆ ಮಾಲೂರಿನ ಸಂತಳ್ಳಿ ಗೇಟ್ ಬಳಿಯ ಆಶ್ರಮದಲ್ಲಿ ಸ್ನಾನ ಮಾಡುತ್ತಿದ್ದ ಚಿನ್ಮಯಾನಂದ ಸ್ವಾಮೀಜಿ ಅವರನ್ನು ಹೊರಗೆ ಎಳೆದುಕೊಂಡು ಬಂದ ಆರೋಪಿಗಳು ದೊಣ್ಣೆಯಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಸ್ವಾಮೀಜಿಯನ್ನು ಸ್ಥಳೀಯರು ಕೂಡಲೇ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ, ಚಿಕಿತ್ಸೆ ಫಲಿಸದೆ ಸ್ವಾಮೀಜಿ ಮೃತಪಟ್ಟಿದ್ದಾರೆ. ಘಟನೆ ಬಳಿಕ ಆಶ್ರಮ ಹಾಗೂ ಆಸ್ಪತ್ರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಭೇಟಿ ನೀಡಿ ಪರಿಶೀಲಿಸಿದರು.
ಆಶ್ರಮಕ್ಕೆ ಸೇರಿದ ಪಾಲಿಟೆಕ್ನಿಕಲ್ ಕಾಲೇಜು ಸಂಬಂಧ ಚಿನ್ಮಯಾನಂದ ಮತ್ತು ಧರ್ಮಪ್ರಾಣಾನಂದ, ಪ್ರಾಣೇಶ್ವರಾನಂದ, ಅರುಣ್ ಕುಮಾರ್ ಗುಂಪುಗಳ ನಡುವೆ ಹಲವು ವರ್ಷಗಳಿಂದ ನ್ಯಾಯಾಲಯದಲ್ಲಿ ವ್ಯಾಜ್ಯ ನಡೆಯುತ್ತಿದೆ. ಇದೇ ವಿಚಾರವಾಗಿ ಹಿಂದೆಯೂ ಎರಡು ಗುಂಪುಗಳ ನಡುವೆ ಹಲವು ಬಾರಿ ಗಲಾಟೆ ನಡೆದಿತ್ತು. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ 30ಕ್ಕೂ ಹೆಚ್ಚು ಪ್ರಕರಣಗಳು ಸಹ ದಾಖಲಾಗಿವೆ.
Advertisement