
ಮೈಸೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿರುವ ನಟ ದರ್ಶನ್ ಬಿಡುಗಡೆಗೆ ಅವರ ಅಭಿಮಾನಿಗಳು ಪ್ರಾರ್ಥನೆಯಲ್ಲಿ ತೊಡಗಿದ್ದು, ಈ ನಡುವೆ ಜೈಲಿನಲ್ಲಿ ದರ್ಶನ್‌ಗೆ ನೀಡಲಾಗಿರುವ ಕೈದಿ ನಂಬರ್ ಅಭಿಮಾನಿಗಳಿಗೆ ಇದೀಗ ಲಕ್ಕಿ ನಂಬರ್ ಆಗುತ್ತಿದೆ. ಸದ್ಯ ಹೀಗೊಂದು ಟ್ರೆಂಡಿಂಗ್ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.
ಮೈಸೂರು ಹತ್ತಿರದ ಬನ್ನೂರಿನ ಧನುಷ್ ಎಂಬ ಅಭಿಮಾನಿ ನಟ ದರ್ಶನ್‌ಗೆ ಜೈಲಲ್ಲಿ ನೀಡಲಾಗಿರುವ ಕೈದಿ ನಂಬರ್ 6106 ನನಗೆ ಲಕ್ಕಿ ನಂಬರ್ ಎಂದು ಹೇಳಿಕೊಂಡಿದ್ದಾರೆ. ಜೊತೆಗೆ ಇದೇ ನಂಬರ್ ನನ್ನ ಗಾಡಿ ಮೇಲೆ ಇರುತ್ತದೆ ಎಂದು ಹೇಳಿದ್ದಾರೆ. ಅಷ್ಟೆ ಅಲ್ಲದೇ ಆರ್‌ಟಿಓ ಕಚೇರಿಯಲ್ಲಿ ಕೈದಿ ನಂಬರ್ 6106 ನ್ನು ರಿಜಿಸ್ಟರ್ ಮಾಡಿಸಲು ಮುಂದಾಗಿದ್ದಾರೆ.
ದರ್ಶನ್ ನೆನೆದು ಕಣ್ಣೀರಿಟ್ಟಿರುವ ಧನುಷ್, ದರ್ಶನ್ ಬಿಡುಗಡೆಗೆ ಹರಕೆ ಹೊತ್ತು, ನಾಡ ದೇವತೆ ಚಾಮುಂಡೇಶ್ವರಿಯಲ್ಲಿ 101 ತೆಂಗಿನಕಾಯಿ ಒಡೆಯುತ್ತೇನೆ ಎಂದು ಹರಕೆ ಹೊತ್ತಿದ್ದಾರೆ. ನಮ್ಮ ಬಾಸ್ ಏನು ತಪ್ಪು ಮಾಡಿಲ್ಲ. ನಮ್ಮ ಬಾಸ್‌ನ್ನು ನಾವು ಬಿಟ್ಟುಕೊಡುವುದಿಲ್ಲ. ಕಾನೂನು ಎಲ್ಲರಿಗೆ ಒಂದೇ. ತಪ್ಪು ಮಾಡಿಲ್ಲ ಅಂದರೆ ರಾಜಾರೋಷವಾಗಿ ಬಿಡುಗಡೆಯಾಗಿ ಬರುತ್ತಾರೆ ಎಂದು ಹೇಳಿದ್ದಾರೆ.
ದರ್ಶನ್ ಗೆಳತಿ ಪವಿತ್ರಾ ಗೌಡಗೆ ಇನ್‌ಸ್ಟಾಗ್ರಾಂನಲ್ಲಿ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ ಆರೋಪದ ಮೇಲೆ ಚಿತ್ರದುರ್ಗದ ರೇಣುಕಾಸ್ವಾಮಿ ಅವರನ್ನು ಜೂನ್ 8ರಂದು ಬೆಂಗಳೂರಿಗೆ ಕರೆಸಿ, ಪಟ್ಟಣಗೆರೆಯ ನಿರ್ಜನ ಪ್ರದೇಶದಲ್ಲಿ ಅವರ ಮೇಲೆ ಹಲ್ಲೆ ಮಾಡಿ ಕೊಲೆಗೈಯ್ಯಲಾಗಿದೆ. ಆನಂತರ ಶವವನ್ನು ತಡರಾತ್ರಿ ಕಾಮಾಕ್ಷಿ ಪಾಳ್ಯ ಸಮೀಪದ ರಾಜಕಾಲುವೆಯಲ್ಲಿ ಎಸೆಯಲಾಗಿತ್ತು ಎಂದು ಆರೋಪಿಲಾಗಿದೆ.
ಸ್ಥಳೀಯರಿಂದ ಅನಾಥ ಶವದ ಬಗ್ಗೆ ಕಾಮಾಕ್ಷಿ ಪಾಳ್ಯ ಪೊಲೀಸರಿಗೆ ಮಾಹಿತಿ ದೊರೆತಿತ್ತು. ಸ್ಥಳಕ್ಕೆ ಧಾವಿಸಿದ ಪೊಲೀಸರು ಪ್ರಕರಣ ಭೇದಿಸಿ, ಇಂದು ಬೆಳಿಗ್ಗೆ ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿದ್ದ ದರ್ಶನ್ ಅವರನ್ನು ಬಂಧಿಸಿದ್ದರು. ಮಧ್ಯಾಹ್ನದ ವೇಳೆಗೆ ಪವಿತ್ರಾ ಗೌಡರನ್ನು ಬಂಧಿಸಿದ್ದರು. ಸಂಜೆ ವೇಳೆಗೆ ಎಲ್ಲಾ ಆರೋಪಿಗಳನ್ನು ಬಂಧಿಸಿದ್ದರು.
ಪ್ರಕರಣದ ಸಂಬಂಧ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಪವಿತ್ರಾ ಗೌಡ, ದರ್ಶನ್ ಅಲಿಯಾಸ್ ಡಿ ಬಾಸ್, ಪುಟ್ಟಸ್ವಾಮಿ ಅಲಿಯಾಸ್ ಪವನ್, ರಾಘವೇಂದ್ರ, ನಂದೀಶ್, ಜಗದೀಶ್ ಅಲಿಯಾಸ್ ಜಗ್ಗ, ಅನುಕುಮಾರ್, ರವಿ ಶಂಕರ್ ಅಲಿಯಾಸ್ ರವಿ, ಧನರಾಜ್ ಡಿ ಅಲಿಯಾಸ್ ರಾಜು, ವಿನಯ್ ವಿ, ನಾಗರಾಜು, ಲಕ್ಷ್ಮಣ, ದೀಪಕ್, ಪ್ರದೂಷ್, ಕಾರ್ತಿಕ್ ಅಲಿಯಾಸ್ ಕಪ್ಪೆ, ಕೇಶವಮೂರ್ತಿ, ನಿಖಿಲ್ ನಾಯಕ್ ಆರೋಪಿಗಳಾಗಿದ್ದು, ಐಪಿಸಿ ಸೆಕ್ಷನ್‌ಗಳಾದ 302 (ಕೊಲೆ), 201 (ಸಾಕ್ಷ್ಯ ನಾಶ), 120 (ಬಿ) (ಕ್ರಿಮಿನಲ್ ಪಿತೂರಿ), 364 (ಅಪಹರಣ), 355 (ಕ್ರಿಮಿನಲ್ ಉದ್ದೇಶದಿಂದ), 384 (ಸುಲಿಗೆ), 143 (ಅಕ್ರಮ ಕೂಟ), 147 (ದೊಂಬಿ), 148 (ಮಾರಕಾಸ್ಟ್ರ ಬಳಕೆ) ಜೊತೆಗೆ 149 (ಏಕೈಕ ಉದ್ದೇಶದಿಂದ ಎಲ್ಲರೂ ಒಟ್ಟುಗೂಡಿ ಕೃತ್ಯ ಎಸಗಿರುವುದು) ಅಡಿ ಪ್ರಕರಣ ದಾಖಲಿಸಲಾಗಿದೆ.
Advertisement