
ಮಡಿಕೇರಿ: ಕರ್ನಾಟಕ ದಕ್ಷಿಣ ಒಳನಾಡಿನಲ್ಲಿ ವ್ಯಾಪಕ ಮಳೆ ಮುಂದುವರೆದಿದ್ದು, ಕಾವೇರಿ ಕೊಳ್ಳದಲ್ಲಿ ಸುರಿಯುತ್ತಿರುವ ಭಾರಿ ಮಳೆ ರಾಜ್ಯದ ಜಲಾಶಯಗಳ ಒಳಹರಿವಿನ ಮಟ್ಟ ಹೆಚ್ಚಾಗುವಂತೆ ಮಾಡಿದೆ.
ಕೊಡಗಿನ ವಿವಿಧೆಡೆ ಗುರುವಾರ ಬೆಳಗ್ಗೆ ಧಾರಾಕಾರ ಮಳೆ ಸುರಿದಿದ್ದು, ಈ ಭಾಗದ ಎಲ್ಲಾ ಜಲಾನಯನ ಪ್ರದೇಶಗಳಲ್ಲಿ ಒಳಹರಿವು ಗಣನೀಯವಾಗಿ ಹೆಚ್ಚಾಗುತ್ತಿದೆ.
ಕಾವೇರಿ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳವಾಗುತ್ತಿರುವ ಪರಿಣಾಮ ಹಾರಂಗಿ ಅಣೆಕಟ್ಟಿನ ಒಳಹರಿವು ಕೂಡ ಹೆಚ್ಚಾಗ ತೊಡಗಿದೆ. ಮಡಿಕೇರಿ ತಾಲ್ಲೂಕಿನಲ್ಲಿ ಗುರುವಾರ ಬೆಳಗಿನ ಜಾವದವರೆಗಿನ 24 ಗಂಟೆಗಳಲ್ಲಿ 160.07 ಮಿ.ಮೀ ಮಳೆಯಾಗಿದ್ದು, ಇದು ದಾಖಲೆಯಾಗಿದೆ.
ಇನ್ನು ಮಳೆ ಮತ್ತು ಪ್ರವಾಹ ಪರಿಸ್ಥಿತಿಯಿಂದಾಗಿ ನಗರ ವ್ಯಾಪ್ತಿಯಲ್ಲಿ, ತ್ಯಾಗರಾಜನಗರದಲ್ಲಿ ಸಣ್ಣ ಭೂಕುಸಿತ ದಾಖಲಾಗಿದ್ದು, ಕೆಲವು ಮನೆಗಳ ಕಾಂಪೌಂಡ್ ಗೋಡೆಗಳಿಗೆ ಹಾನಿಯಾಗಿದೆ. ಮಳೆಯ ಹಿನ್ನೆಲೆಯಲ್ಲಿ ಮೂರ್ನಾಡು ಬಳಿಯ ಬೇತ್ರಿ ಎಂಬಲ್ಲಿ ಕಾವೇರಿ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು, ಭಾರೀ ಮಳೆ ಮುಂದುವರಿದರೆ ಸೇತುವೆಗೆ ನೀರು ನುಗ್ಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಧಾರಾಕಾರ ಮಳೆಯಿಂದಾಗಿ ಕುಶಾಲನಗರದ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿದ್ದು, ನಾಪೋಕ್ಲು ಸಮೀಪದ ಯೆಮ್ಮೆಮಾಡುವಿನಲ್ಲಿ ಅಲ್ಪ ಭೂಕುಸಿತ ಸಂಭವಿಸಿದೆ.
ದುಬಾರೆಗೆ ಆಗಮಿಸದಂತೆ ಪ್ರವಾಸಿಗರಿಗೆ ನಿರ್ಬಂಧ
ಇನ್ನು ಕಾವೇರಿ ನದಿ ನೀರಿನ ಮಟ್ಟ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ಸೂಚನೆಯವರೆಗೂ ಪ್ರವಾಸಿಗರು ದುಬಾರೆಗೆ ಭೇಟಿ ನೀಡುವುದನ್ನು ನಿಷೇಧಿಸಲಾಗಿದೆ.
ವಿದ್ಯುತ್ ಕಂಬ ಉರುಳಿ ಕಾರು ಜಖಂ
ಇನ್ನು ದಕ್ಷಿಣ ಕೊಡಗಿನ ಅಮ್ಮತ್ತಿ ಎಂಬಲ್ಲಿ ವಿದ್ಯುತ್ ಕಂಬ ಉರುಳಿ ಬಿದ್ದು ಕಾರು ಜಖಂಗೊಂಡಿದೆ. ಇಲ್ಲಿನ ನಿವಾಸಿ ನವೀನ್ ತನ್ನ ಮಕ್ಕಳನ್ನು ಶಾಲೆಯಿಂದ ಕರೆದುಕೊಂಡು ಬರಲು ಕಾರು ಚಾಲನೆ ಮಾಡುತ್ತಿದ್ದಾಗ ಮರವೊಂದು ಉರುಳಿಬಿದ್ದು ಕಾರಿನ ಮುಂದೆ ಬಿದ್ದಿದೆ. ಅದೃಷ್ಟವಶಾತ್ ಯಾರಿಗೂ ಯಾವುದೇ ಹಾನಿಯಾಗಿಲ್ಲ. ಧಾರಾಕಾರ ಮಳೆಯಿಂದಾಗಿ ಹಲವು ವಿದ್ಯುತ್ ತಂತಿಗಳು ಹಾನಿಗೀಡಾದ ಹಿನ್ನೆಲೆಯಲ್ಲಿ ಗೋಣಿಕೊಪ್ಪಲಿನಾದ್ಯಂತ ವಿದ್ಯುತ್ ಕಡಿತಗೊಂಡಿದೆ. ಹಾತೂರು ಪಂಚಾಯಿತಿ ವ್ಯಾಪ್ತಿಯ ಜನವಸತಿ ಬಡಾವಣೆಗೆ ಸಂಪರ್ಕ ಕಲ್ಪಿಸುವ ಸೇತುವೆ ಮೇಲೆ ಬ್ಯಾರಿಕೇಡ್‌ಗಳನ್ನು ಹಾಕಿದ್ದರೂ ನೀರು ತುಂಬಿಕೊಂಡಿದೆ.
ಹಾರಂಗಿ ಒಳಹರಿವು ಹೆಚ್ಚಳ
ನಿರಂತರ ಮಳೆಯಿಂದಾಗಿ ಹಾರಂಗಿ ಜಲಾಶಯದ ಒಳಹರಿವು ಹೆಚ್ಚಳವಾಗಿದೆ. ಒಳಹರಿವು 1,400 ಕ್ಯೂಸೆಕ್‌ಗೆ ಏರಿಕೆಯಾಗಿದ್ದು, ಜಲಾಶಯವು ಈಗಾಗಲೇ 2,832.65 ಕ್ಕೆ ಭರ್ತಿಯಾಗಿದ್ದು, ಅದರ ಸಾಮರ್ಥ್ಯ 2,859 ಅಡಿ ಇದೆ. ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ ಹಾರಂಗಿ ಜಲಾನಯನ ಪ್ರದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 47.50 ಮಿ.ಮೀ ಮಳೆ ದಾಖಲಾಗಿದ್ದು, ಇದು ಜಲಾಶಯದ ಒಳಹರಿವು ಹೆಚ್ಚಳಕ್ಕೆ ಕಾರಣ ಎನ್ನಲಾಗಿದೆ.
ಹೀಗಾಗಿ ಜಲಾಶಯದಿಂದ 200 ಕ್ಯೂಸೆಕ್ ನೀರನ್ನು ನದಿಗಳಿಗೆ ಬಿಡಲಾಗುತ್ತಿದೆ. ಮಡಿಕೇರಿ ತಾಲ್ಲೂಕಿನ ಭಾಗಮಂಡಲದಲ್ಲಿ ಗುರುವಾರ 212 ಮಿ.ಮೀ ಮಳೆ ದಾಖಲಾಗಿದೆ. ಪರಿಣಾಮ ಕಾವೇರಿ ನದಿ ತುಂಬಿ ಹರಿಯುತ್ತಿದೆ. ಒಟ್ಟಾರೆ ಜಿಲ್ಲೆಯಲ್ಲಿ 24 ಗಂಟೆಗಳಲ್ಲಿ 92.22 ಮಿ.ಮೀ ಮಳೆ ದಾಖಲಾಗಿದ್ದರೆ, ಕಳೆದ ವರ್ಷ ಇದೇ ಅವಧಿಯಲ್ಲಿ 3.91 ಮಿ.ಮೀ ಮಳೆಯಾಗಿತ್ತು.
Advertisement