
ಬೆಂಗಳೂರು: ಪೆರಿಫೆರಲ್ ರಿಂಗ್ ರಸ್ತೆಯಲ್ಲಿ ಹೊಸದಾಗಿ ಆರು ಲೇಔಟ್ ಅಭಿವೃದ್ಧಿಪಡಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನಿರ್ಧರಿಸಿದೆ. ಇವುಗಳಲ್ಲಿ ವಿವಿಧ ರೀತಿಯ 50,000 ನಿವೇಶನಗಳು ಬರಲಿದ್ದು, ಸುಮಾರು 3,500 ಎಕರೆ ಭೂಮಿಯನ್ನು ಬಿಡಿಎ ಸ್ವಾಧೀನಪಡಿಸಿಕೊಳ್ಳಲಿದೆ.
ನಗರದ ಸಂಚಾರ ದಟ್ಟಣೆ ನಿಯಂತ್ರಿಸುವ ಉದ್ದೇಶದೊಂದಿಗೆ ನಗರದ ಸುತ್ತ 73 ಕಿ.ಮಿವರೆಗೂ ಬರುವ 27,000 ಕೋಟಿ ರೂ. ವೆಚ್ಚದ ಪೆರಿಫೆರಲ್ ರಿಂಗ್ ರಸ್ತೆ ಎಂಟು ಪಥಗಳ ಪ್ರವೇಶ ನಿಯಂತ್ರಿತ ಎಕ್ಸ್‌ಪ್ರೆಸ್‌ವೇ ಆಗಿದ್ದು, ಬೆಂಗಳೂರು ಉತ್ತರ, ಬೆಂಗಳೂರು ಪೂರ್ವ ಮತ್ತು ಆನೇಕಲ್ ತಾಲ್ಲೂಕುಗಳ ಮೂಲಕ ಸಾಗುತ್ತದೆ.
ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಬಿಡಿಎ ಆಯುಕ್ತ ಎನ್.ಜಯರಾಂ, ಬಿಡಿಎ ನಿವೇಶಗಳಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ಹೊಸದಾಗಿ 50, 000 ನಿವೇಶನ ಅಭಿವೃದ್ಧಿಗೆ ನಿರ್ಧರಿಸಲಾಗಿದೆ. ಎರಡು ದಿನಗಳಿಂದ ಹಿಂದೆಯೇ ನಾವು ನಿರ್ಧರಿಸಿದ್ದು, ಬಿಡಿಎ ತಾತ್ವಿಕ ಒಪ್ಪಿಗೆ ನೀಡಿದೆ. ಸ್ವಾಧೀನಪಡಿಸಿಕೊಳ್ಳಬೇಕಾದ ಭೂಮಿ ಗುರುತಿಸುವಿಕೆಯೊಂದಿಗೆ ಪ್ರಾಥಮಿಕ ಕಾರ್ಯಗಳು ಈಗಾಗಲೇ ಆರಂಭಗೊಂಡಿದೆ ಎಂದು ತಿಳಿಸಿದರು.
ಭೂಮಿ ಕಳೆದುಕೊಂಡವರಿಗೆ 40:60 ಯೋಜನೆ ಆಧಾರದ ಮೇಲೆ ಪರಿಹಾರ ನೀಡಲಾಗುವುದು, ಈ ಯೋಜನೆಯಂತೆ ಬಿಡಿಎಗೆ ಭೂಮಿ ನೀಡುವವರಿಗೆ ಅದೇ ಲೇಔಟ್ ನಲ್ಲಿ ಅಭಿವೃದ್ಧಿಪಡಿಸಲಾದ ಶೇ. 40 ರಷ್ಟು ಭೂಮಿಯನ್ನು ನೀಡಲಾಗುವುದು, ಉಳಿದ ಶೇ.60ರಷ್ಟು ಭೂಮಿಯನ್ನು ಬಿಡಿಎ ಉಳಿಸಿಕೊಳ್ಳಲಿದೆ ಎಂದು ಬಿಡಿಎ ಆಯುಕ್ತರು ಹೇಳಿದರು. ನಿಖರವಾಗಿ ಹೇಳುವುದಾದರೆ ಸ್ವಾಧೀನಪಡಿಸಿಕೊಂಡ ಪ್ರತಿ ಎಕರೆ ಭೂಮಿಗೆ 9,583 ಚದರ ಅಡಿ ಅಭಿವೃದ್ಧಿ ಹೊಂದಿದ ಜಮೀನು ನೀಡಲಾಗುವುದು ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿದರು.
ಸೈಟ್‌ಗಳ ನಿರೀಕ್ಷಿತ ದರ: ಸೈಟ್‌ಗಳ ನಿರೀಕ್ಷಿತ ದರ ಹಿಂದಿನ ಎಲ್ಲಾ ಬಿಡಿಎ ಸೈಟ್‌ಗಳಂತೆ ಕೈಗೆಟುಕುವ ದರದಲ್ಲಿರುತ್ತವೆ. ಸುಮಾರು ಮೂರು ತಿಂಗಳ ಹಿಂದೆಯೇ ಇದನ್ನು ಯೋಜಿಸಿದ್ದೇವು. ಸಾರ್ವಜನಿಕರಿಗೆ ಕೈಗೆಟಕುವ ದರದಲ್ಲಿ ನಿವೇಶನಗಳು ಮತ್ತು ಮನೆಗಳನ್ನು ಪಡೆಯಲು ಸಹಾಯ ಮಾಡುವುದು ಬಿಡಿಎ ಉದ್ದೇಶವಾಗಿದೆ ಎಂದು ಜಯರಾಂ ಹೇಳಿದರು.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಇತ್ತೀಚಿನ ಡಾ.ಶಿವರಾಮ ಕಾರಂತ್ ಲೇಔಟ್ 34,000 ಸೈಟ್‌ಗಳನ್ನು ಹೊಂದಿದ್ದು, ಅದರಲ್ಲಿ 10,000 ಸೈಟ್‌ಗಳು ಸಾರ್ವಜನಿಕರಿಗೆ ಲಭ್ಯವಾಗಲಿವೆ. ಅಧಿಸೂಚನೆ ಹೊರಡಿಸಲು ಹೈಕೋರ್ಟ್‌ನ ಒಪ್ಪಿಗೆಗಾಗಿ ಬಿಡಿಎ ಕಾಯುತ್ತಿದೆ.
Advertisement