ಬೆಂಗಳೂರು: ರಾಮೇಶ್ವರಂ ಕೆಫೆಯಲ್ಲಿ ಆಗಿರುವುದು ಬಾಂಬ್ ಸ್ಫೋಟ, ಒಂಬತ್ತು ಜನರಿಗೆ ಗಾಯ- ಡಿಜಿಪಿ

ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಶುಕ್ರವಾರ ಸಂಭವಿಸಿದ ಸ್ಫೋಟವನ್ನು ಬಾಂಬ್ ಸ್ಫೋಟ ಎಂದು ಸ್ಪಷ್ಟಪಡಿಸಿರುವ ಡಿಜಿಪಿ ಅಲೋಕ್ ಮೋಹನ್, ತನಿಖೆ ನಡೆಯುತ್ತಿದ್ದು, ಘಟನೆ ಹಿಂದಿರುವವರು ಶೀಘ್ರದಲ್ಲಿಯೇ ಪೊಲೀಸರು ಬಂಧಿಸಲಿದ್ದಾರೆ ಎಂದು ತಿಳಿಸಿದರು.
ಘಟನೆ ನಡೆದ ರಾಮೇಶ್ವರಂ ಕೆಫೆಯಲ್ಲಿ ಡಿಜಿಪಿ ಡಾ.ಅಲೋಕ್ ಮೋಹನ್
ಘಟನೆ ನಡೆದ ರಾಮೇಶ್ವರಂ ಕೆಫೆಯಲ್ಲಿ ಡಿಜಿಪಿ ಡಾ.ಅಲೋಕ್ ಮೋಹನ್ANI

ಬೆಂಗಳೂರು: ನಗರದ ಪ್ರಸಿದ್ಧ ಹೋಟೆಲ್ ಗಳಲ್ಲಿ ಒಂದಾದ ರಾಮೇಶ್ವರಂ ಕೆಫೆಯಲ್ಲಿ ಶುಕ್ರವಾರ ಸಂಭವಿಸಿದ ಸ್ಫೋಟವನ್ನು ಬಾಂಬ್ ಸ್ಫೋಟ ಎಂದು ಸ್ಪಷ್ಟಪಡಿಸಿರುವ ಡಿಜಿಪಿ ಅಲೋಕ್ ಮೋಹನ್, ತನಿಖೆ ನಡೆಯುತ್ತಿದ್ದು, ಘಟನೆ ಹಿಂದಿರುವವರು ಶೀಘ್ರದಲ್ಲಿಯೇ ಪೊಲೀಸರು ಬಂಧಿಸಲಿದ್ದಾರೆ ಎಂದು ತಿಳಿಸಿದರು.

ಮಧ್ಯಾಹ್ನ 1 ಗಂಟೆ ಸುಮಾರಿಗೆ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ 9 ಜನರು ಗಾಯಗೊಂಡಿದ್ದಾರೆ. ಈ ಪೈಕಿ ಒಬ್ಬರ ಪರಿಸ್ಥಿತಿ ಗಂಭೀರವಾಗಿದೆ. ತನಿಖೆ ನಡೆಸುತ್ತಿದ್ದೇವೆ. ವಿಧಿ ವಿಜ್ಞಾನ ಪ್ರಯೋಗಾಲಯ ತಂಡ ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದೆ. ನಗರ ಪೊಲೀಸ್ ಆಯುಕ್ತರು ಮತ್ತಿತರ ಅಧಿಕಾರಿಗಳು ಸ್ಥಳದಲ್ಲಿದ್ದಾರೆ. ಈ ಕೃತ್ಯವೆಸಗಿರುವ ದುಷ್ಕರ್ಮಿಗಳನ್ನು ಖಂಡಿತವಾಗಿಯೂ ಪತ್ತೆ ಹಚ್ಚಲಾಗುವುದು ಎಂದರು.

ಘಟನೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರಿಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ. ಘಟನೆಯಲ್ಲಿ 9 ಮಂದಿ ಗಾಯಗೊಂಡಿದ್ದಾರೆ. ತನಿಖೆ ನಡೆಯುತ್ತಿದೆ. ಎಫ್ಎಸ್ ಎಲ್ ತಂಡದಲ್ಲಿ ವರದಿ ಸ್ವೀಕಾರದ ಬಳಿಕ ಹೆಚ್ಚಿನ ಮಾಹಿತಿ ನೀಡಲಾಗುವುದು ಎಂದರು.

ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸ್ ,ಅಗ್ನಿಶಾಮಕ ತಂಡಗಳು ಸ್ಫೋಟದ ಸ್ಥಳಕ್ಕೆ ಧಾವಿಸಿದ್ದು, ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿವೆ. ಒಡೆದ ಗಾಜು ಮತ್ತು ಪೀಠೋಪಕರಣಗಳು ಚೆಲ್ಲಾಪಿಲ್ಲಿಯಾಗಿ ಕೆಫೆಯ ನೆಲದ ಮೇಲೆ ಬಿದ್ದಿದ್ದು, ವಿಧಿ ವಿಜ್ಞಾನ ಪ್ರಯೋಗಾಲಯ ತಂಡವು ಸ್ಫೋಟದ ಸ್ಥಳದಿಂದ ಪುರಾವೆಗಳನ್ನು ಸಂಗ್ರಹಿಸಲು ಪ್ರಾರಂಭಿಸಿದೆ. ಸ್ಥಳದಲ್ಲಿ ಹೆಚ್ಚಿನ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಹಾಗೂ ಶ್ವಾನ ದಳವನ್ನು ನಿಯೋಜಿಸಲಾಗಿದೆ.

ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ, ಹಲವರಿಗೆ ಗಾಯ

ಘಟನೆ ನಡೆದಾಗ ಸ್ಥಳದಲ್ಲಿದ್ದ ಕೆಫೆಯ ಸೆಕ್ಯೂರಿಟಿ ಗಾರ್ಡ್, ಘಟನೆ ಕುರಿತು ವಿವರಿಸಿದರು. ಕೆಫೆ ಹೊರಗಡೆ ನಿಂತಿದಾಗ, ಅನೇಕ ಗ್ರಾಹಕರು ಹೋಟೆಲ್ ಗೆ ಬಂದಿದ್ದರು.ಇದ್ದಕ್ಕಿದ್ದಂತೆ ದೊಡ್ಡ ಶಬ್ದ ಹಾಗೂ ಬೆಂಕಿ ಕಾಣಿಸಿಕೊಂಡಿತ್ತು. ನೋಡನೋಡುತ್ತಿದ್ದಂತೆ ಹೋಟೆಲ್ ಒಳಗಿದ್ದ ಗ್ರಾಹಕರು ಗಾಯಗೊಂಡರು ಎಂದು ತಿಳಿಸಿದರು.

ಘಟನೆ ಕುರಿತು ಆತಂಕ ವ್ಯಕ್ತಪಡಿಸಿರುವ ಸ್ಥಳೀಯ ಸಂಸದ ಪಿಸಿ ಮೋಹನ್, ನಿಗೂಢ ಸ್ಫೋಟ ಕುರಿತು ತನಿಖೆ ನಡೆಸಿ, ನಾಗರಿಕರಿಗೆ ಸುರಕ್ಷತೆ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ, ಘಟನೆ ಕುರಿತು ಮುಖ್ಯಮಂತ್ರಿ ಉತ್ತರ ನೀಡುವಂತೆ ಜನರು ಒತ್ತಾಯಿಸುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿದ್ದಾರೆ.

ಈ ಮಧ್ಯೆ ಮೈಸೂರಿನಲ್ಲಿ ಘಟನೆ ಕುರಿತು ಪ್ರತಿಕ್ರಿಸಿರುವ ಸಿಎಂ ಸಿದ್ದರಾಮಯ್ಯ, ಸ್ಫೋಟದ ಕಾರಣ ಮತ್ತು ಸ್ವರೂಪವನ್ನು ಪತ್ತೆಹಚ್ಚಲು ತನಿಖೆ ನಡೆಸಲಾಗುತ್ತಿದೆ. ಮತ್ತು ಇದು ಸುಧಾರಿತ ಸ್ಫೋಟಕ ಸಾಧನದಿಂದ ಸ್ಫೋಟ ಸಂಭವಿಸಿರುವ ಸಾಧ್ಯತೆ ಕಂಡುಬಂದಿದ್ದು, ಇದರಲ್ಲಿ ಭಾಗಿಯಾಗಿರುವವರನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.

ಮಧ್ಯಾಹ್ನ 12 ಗಂಟೆಯ ನಂತರ ಯಾರೋ ಒಬ್ಬರು ಬ್ಯಾಗ್ ಇಟ್ಟು ಹೋಗಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದ್ದು, ಘಟನೆ ಬಗ್ಗೆ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಯುತ್ತಿದ್ದು, ಗಾಯಾಳುಗಳೆಲ್ಲರೂ ಅಪಾಯದಿಂದ ಪಾರಾಗಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com