ಬಿವೈ ವಿಜಯೇಂದ್ರ ಮತ್ತು ಆರ್ ಅಶೋಕ್ ಸುದ್ದಿಗೋಷ್ಠಿ
ಬಿವೈ ವಿಜಯೇಂದ್ರ ಮತ್ತು ಆರ್ ಅಶೋಕ್ ಸುದ್ದಿಗೋಷ್ಠಿ

ರಾಮೇಶ್ವರಂ ಕೆಫೆ ಸ್ಫೋಟ: 'ಪೊಲೀಸರ ಗುಪ್ತಚರ ವೈಫಲ್ಯ'.. ಸಿದ್ದು ಸರ್ಕಾರದ ವಿರುದ್ದ ಬಿಜೆಪಿ ಆಕ್ರೋಶ

ನಗರದ ಜನಪ್ರಿಯ ಉಪಹಾರ ಗೃಹ ರಾಮೇಶ್ವರಂ ಕೆಫೆಯಲ್ಲಿ ಶುಕ್ರವಾರ ಸಂಭವಿಸಿದ ಸ್ಫೋಟಕ್ಕೆ ಸಂಬಂಧಿಸಿದಂತೆ ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಪಕ್ಷ ಬಿಜೆಪಿ ತೀವ್ರ ಕಿಡಿಕಾರಿದ್ದು, ರಾಜ್ಯ ಪೊಲೀಸರ ಗುಪ್ತಚರ ವೈಫಲ್ಯ ಸ್ಪಷ್ಟವಾಗಿದ್ದು, ಕೂಡಲೇ ಪ್ರಕರಣವನ್ನು ಎನ್ಐಎ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದೆ.
Published on

ಬೆಂಗಳೂರು: ನಗರದ ಜನಪ್ರಿಯ ಉಪಹಾರ ಗೃಹ ರಾಮೇಶ್ವರಂ ಕೆಫೆಯಲ್ಲಿ ಶುಕ್ರವಾರ ಸಂಭವಿಸಿದ ಸ್ಫೋಟಕ್ಕೆ ಸಂಬಂಧಿಸಿದಂತೆ ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಪಕ್ಷ ಬಿಜೆಪಿ ತೀವ್ರ ಕಿಡಿಕಾರಿದ್ದು, ರಾಜ್ಯ ಪೊಲೀಸರ ಗುಪ್ತಚರ ವೈಫಲ್ಯ ಸ್ಪಷ್ಟವಾಗಿದ್ದು, ಕೂಡಲೇ ಪ್ರಕರಣವನ್ನು ಎನ್ಐಎ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದೆ.

ಈ ಕುರಿತು ಮಲ್ಲೇಶ್ವರದ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮತ್ತು ವಿಪಕ್ಷ ನಾಯಕ ಆರ್ ಅಶೋಕ್ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಈ ವೇಳೆ ಮಾತನಾಡಿದ ಬಿವೈ ವಿಜಯೇಂದ್ರ, 'ಈ ಘಟನೆಯಲ್ಲಿ ಸರ್ಕಾರ ಮತ್ತು ಪೊಲೀಸ್ ಗುಪ್ತಚರ ವೈಫಲ್ಯವು ಸ್ಪಷ್ಟವಾಗಿದೆ. ಕಾಂಗ್ರೆಸ್ ಪಕ್ಷದ ಅಲ್ಪ ಸಂಖ್ಯಾತರ ಅತೀವ ಒಲೈಕೆಯಿಂದಾಗಿ ರಾಜ್ಯದಲ್ಲಿ ಇಂತಹ ಘಟನೆಗಳು ನಡೆಯುತ್ತಿದ್ದು, ರಾಜ್ಯದ ಕಾನೂನು ಸುವ್ಯವಸ್ಥೆ ಹಳ್ಳ ಹಿಡಿಯುತ್ತಿದೆ. ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ ಬೆನ್ನಲ್ಲೇ ಇಂದು ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ಸಂಭವಿಸಿದೆ. ಇದು ಸಮಾಜವಿರೋಧಿಗಳಿಗೆ ಸುರಕ್ಷಿತ ಸ್ವರ್ಗವಾಗುತ್ತಿದೆ ಎಂದರು.

ಬಿವೈ ವಿಜಯೇಂದ್ರ ಮತ್ತು ಆರ್ ಅಶೋಕ್ ಸುದ್ದಿಗೋಷ್ಠಿ
ಬೆಂಗಳೂರು: ರಾಮೇಶ್ವರಂ ಕೆಫೆಯಲ್ಲಿ ಆಗಿರುವುದು ಬಾಂಬ್ ಸ್ಫೋಟ, ಒಂಬತ್ತು ಜನರಿಗೆ ಗಾಯ- ಡಿಜಿಪಿ

ಅಂತೆಯೇ "ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಸ್ಫೋಟದ ಬಗ್ಗೆ ಕೇಳಿ ತೀವ್ರ ಆಘಾತವಾಯಿತು. ಘಟನೆಯಲ್ಲಿ ಗಾಯಗೊಂಡವರೆಲ್ಲರೂ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ. ರಾಜ್ಯ ಸರ್ಕಾರವು ವಿವರವಾದ ತನಿಖೆಗೆ ಆದೇಶಿಸಬೇಕು ಮತ್ತು ಘಟನೆಗೆ ಕಾರಣರಾದ ದುಷ್ಕರ್ಮಿಗಳನ್ನು ಬಂಧಿಸಲು ಎಲ್ಲ ಪ್ರಯತ್ನಗಳನ್ನು ಮಾಡಬೇಕು. ಈ ಘಟನೆಯಲ್ಲಿ ಪೊಲೀಸ್ ಗುಪ್ತಚರ ವೈಫಲ್ಯವೂ ಎದ್ದು ಕಾಣುತ್ತಿದೆ. ಯಾವುದೇ ರಾಜಕೀಯ ಒತ್ತಡಗಳಿಗೆ ಮಣಿಯದೆ ಸಮಗ್ರ ತನಿಖೆಯನ್ನು ನಡೆಸಿ ಈ ಅಂಶಗಳನ್ನು ಮೂಲದಿಂದ ನಿರ್ಮೂಲನೆ ಮಾಡುವಂತೆ ನಾವು ಪೊಲೀಸರನ್ನು ಬಲವಾಗಿ ಒತ್ತಾಯಿಸುತ್ತೇವೆ ಎಂದು ಅವರು ಹೇಳಿದರು.

ಅಲ್ಲದೆ ಈ ಪ್ರಕರಣದ ತನಿಖೆಯನ್ನು ಕೂಡಲೇ ಎನ್‌ಐಎಗೆ ವಹಿಸಬೇಕು, ಸ್ಫೋಟದ ಜವಾಬ್ದಾರಿ ಹೊತ್ತು ಸಿಎಂ ಸಿದ್ದರಾಮಯ್ಯ ತಕ್ಷಣ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ: ಆರ್ ಅಶೋಕ್

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಕರ್ನಾಟಕದಲ್ಲಿ "ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ" ಎಂಬುದಕ್ಕೆ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಫೋಟ ಮತ್ತೊಂದು ಜ್ವಲಂತ ಉದಾಹರಣೆಯಾಗಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಮತ್ತು ಬಿಜೆಪಿ ನಾಯಕ ಆರ್ ಅಶೋಕ ಹೇಳಿದ್ದಾರೆ.

"ಕಾಂಗ್ರೆಸ್ ಎಲ್ಲಿ ಅಧಿಕಾರಕ್ಕೆ ಬಂದರೂ, ಭಯೋತ್ಪಾದಕರು ಮತ್ತು ದೇಶವಿರೋಧಿಗಳು ಅದರ ನಿರ್ಲಜ್ಜ ಮತ್ತು ಕಡಿವಾಣವಿಲ್ಲದ ಓಲೈಕೆಯ ನೀತಿಯಿಂದಾಗಿ ಧೈರ್ಯಶಾಲಿಗಳಾಗುತ್ತಾರೆ. ಕಾಂಗ್ರೆಸ್ ಸರ್ಕಾರವು ಮೊದಲು ಕರ್ನಾಟಕದ ಜನರಿಗೆ ಸುರಕ್ಷತೆ ಮತ್ತು ಭದ್ರತೆಯ 'ಖಾತರಿ'ಯನ್ನು ಖಚಿತಪಡಿಸಿಕೊಳ್ಳಬೇಕು'' ಎಂದು ಹೇಳಿದರು.

ಪೊಲೀಸರಿಗೆ 'ಫ್ರೀ ಹ್ಯಾಂಡ್' ನೀಡಿ: ಸಂಸದ ತೇಜಸ್ವಿ ಸೂರ್ಯ ಆಗ್ರಹ

ಘಟನೆ ಕುರಿತು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿರುವ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ, 'ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಘಟನೆಯ ಬಗ್ಗೆ ತನಿಖೆ ನಡೆಸಲು ಮತ್ತು ಬೆಂಗಳೂರಿನ ಜನರಿಗೆ ಸ್ಪಷ್ಟ ಉತ್ತರವನ್ನು ನೀಡಲು ಪೊಲೀಸರು ಮತ್ತು ತನಿಖಾ ಸಂಸ್ಥೆಗಳಿಗೆ ಮುಕ್ತ ಹಸ್ತ (ಫ್ರೀ ಹ್ಯಾಂಡ್) ನೀಡಬೇಕು. ಮೊದಲಿಗೆ ಅವರು ಸಿಲಿಂಡರ್ ಸ್ಫೋಟದ ನಿರೂಪಣೆ ನೀಡಲು ಯತ್ನಿಸಿದರು. ಈಗ ವ್ಯಾಪಾರ ಪೈಪೋಟಿಯ ನಿರೂಪಣೆ ನೀಡಲು ಯತ್ನಿಸುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರವು ತನಿಖಾ ಸಂಸ್ಥೆಗಳಿಗೆ ಅವರ ಕೆಲಸವನ್ನು ಮಾಡಲು ಏಕೆ ಅನುಮತಿಸುವುದಿಲ್ಲ? ಎಂದು ಪ್ರಶ್ನಿಸಿದರು.

ಘಟನೆ ರಾಜಕೀಯಗೊಳಿಸಬೇಡಿ: ಸಿಎಂ ಸಿದ್ದರಾಮಯ್ಯ ಮನವಿ

ಇದಕ್ಕೂ ಮುನ್ನ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಘಟನೆಯನ್ನು ರಾಜಕೀಯಗೊಳಿಸಬೇಡಿ. ಎಲ್ಲರೂ ಸಹಕರಿಸಬೇಕು. ಸ್ಫೋಟಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com