ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್‌ ಘೋಷಣೆ: ಕೊನೆಗೂ ಮೂವರು ಆರೋಪಿಗಳ ಬಂಧನ

ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ಪೊಲೀಸರು ಸೋಮವಾರ ಮೂವರನ್ನು ಬಂಧಿಸಿದ್ದಾರೆ.
ನಾಸೀರ್ ಹುಸೇನ್ ಹಾಗೂ ಬೆಂಬಲಿಗರು
ನಾಸೀರ್ ಹುಸೇನ್ ಹಾಗೂ ಬೆಂಬಲಿಗರು

ಬೆಂಗಳೂರು: ಇತ್ತೀಚಿಗೆ ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ನಾಸೀರ್ ಹುಸೇನ್ ಅವರ ಬೆಂಬಲಿಗರು ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ಪೊಲೀಸರು ಸೋಮವಾರ ಮೂವರನ್ನು ಬಂಧಿಸಿದ್ದಾರೆ.

ವಿಧಾನಸೌಧದಲ್ಲಿ ಕರ್ತವ್ಯದಲ್ಲಿದ್ದ ಸಹಾಯಕ ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ಶಿವಕುಮಾರ್‌ ಅವರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದ ವಿಧಾನಸೌಧ ಪೊಲೀಸ್ ಠಾಣೆಯ ಪೊಲೀಸರು ಇಂದು ಸಂಜೆ ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ದೆಹಲಿ ಮೂಲದ ಇಲ್ತಿಯಾಜ್, ಆರ್‌.ಟಿ. ನಗರದ ಮುನಾವರ್ ಹಾಗೂ ಹಾವೇರಿ ಜಿಲ್ಲೆ ಬ್ಯಾಡಗಿಯ ಮೊಹಮದ್ ಶಫಿ ನಾಶಿಪುಡಿ ಎಂದು ಗುರುತಿಸಲಾಗಿದ್ದು, ಸದ್ಯ ಈ ಮೂವರು ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿ ಬಳಿಕ ನ್ಯಾಯಾಲಕ್ಕೆ ಹಾಜರುಪಡಿಸಿದ್ದಾರೆ.

ನಾಸೀರ್ ಹುಸೇನ್ ಹಾಗೂ ಬೆಂಬಲಿಗರು
ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್‌ ಘೋಷಣೆ: ಸ್ವಯಂಪ್ರೇರಿತ ಕೇಸ್‌ ದಾಖಲಿಸಿದ ಪೊಲೀಸರು

ಪಾಕಿಸ್ತಾನ ಪರ ಘೋಷಣೆ ಕೂಗಿದ್ದ ಮೂವರು ಆರೋಪಿಗಳ ಬಂಧನವನ್ನು ಖಚಿತಪಡಿಸಿರುವ ಬೆಂಗಳೂರಿನ ಕೇಂದ್ರ ವಿಭಾಗದ ಪೊಲೀಸರು, ಈ ಸಂಬಂಧ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಎಫ್ಎಸ್ಎಲ್ ವರದಿ, ಸಾಂದರ್ಭಿಕ ಸಾಕ್ಷ್ಯಗಳು, ಆರೋಪಿಗಳ ಹೇಳಿಕೆ ಹಾಗೂ ತನಿಖೆ ವೇಳೆ ಸಿಕ್ಕ ಸಾಕ್ಷ್ಯಗಳನ್ನು ಆಧರಿಸಿ ಆರೋಪಿಗಳನ್ನು ಬಂಧಿಸಿದ್ದೇವೆ. ಸದ್ಯ ಆರೋಪಿಗಳ ವೈದ್ಯಕೀಯ ಪರೀಕ್ಷೆ ನಡೀತಾ ಇದೆ. ವೈದ್ಯಕೀಯ ಪರೀಕ್ಷೆ ಬಳಿಕ ಕೋರಮಂಗಲದ ನ್ಯಾಯಾಧೀಶರ ಮನೆಯಲ್ಲಿ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ತಮ್ಮ ವಶಕ್ಕೆ ಪಡೆಯುವುದಾಗಿ ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com