ವೆಚ್ಚ ಪರಿಗಣಿಸಿ ಪತ್ನಿಗೆ ನೀಡುವ ಜೀವನಾಂಶ ಕಡಿತಗೊಳಿಸಲಾಗದು: ಹೈಕೋರ್ಟ್

ಪತಿಯ ವೇತನದಲ್ಲಿ ಭವಿಷ್ಯನಿಧಿ, ಮನೆ ಬಾಡಿಗೆ, ಪೀಠೋಪಕರಣಗಳ ಖರೀದಿಗೆ ಆಗುತ್ತಿರುವ ವೆಚ್ಚ ಪರಿಗಣಿಸಿ ಪತ್ನಿಗೆ ನೀಡುವ ಜೀವನಾಂಶ ಮೊತ್ತವನ್ನು ಕಡಿತಗೊಳಿಸಲಾಗದು ಎಂದು ಹೈಕೊರ್ಟ್ ಸೋಮವಾರ ಅಭಿಪ್ರಾಯಪಟ್ಟಿದೆ
ಕರ್ನಾಟಕ ಹೈಕೋರ್ಟ್
ಕರ್ನಾಟಕ ಹೈಕೋರ್ಟ್
Updated on

ಬೆಂಗಳೂರು: ಪತಿಯ ವೇತನದಲ್ಲಿ ಭವಿಷ್ಯನಿಧಿ, ಮನೆ ಬಾಡಿಗೆ, ಪೀಠೋಪಕರಣಗಳ ಖರೀದಿಗೆ ಆಗುತ್ತಿರುವ ವೆಚ್ಚ ಪರಿಗಣಿಸಿ ಪತ್ನಿಗೆ ನೀಡುವ ಜೀವನಾಂಶ ಮೊತ್ತವನ್ನು ಕಡಿತಗೊಳಿಸಲಾಗದು ಎಂದು ಹೈಕೊರ್ಟ್ ಸೋಮವಾರ ಅಭಿಪ್ರಾಯಪಟ್ಟಿದೆ.

ಈ ಕುರಿತು ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿದ್ದರ ಪರಿಣಾಮ ಅರ್ಜಿದಾರರರಿಗೆ (ಪತಿ) 15 ಸಾವಿರ ದಂಡ ವಿಧಿಸಿ, ಪತ್ನಿಗೆ ಪಾವತಿ ಮಾಡುವಂತೆ ಸೂಚನೆ ನೀಡಿದೆ.

ಪತ್ನಿಯ ಜೀವನಾಂಶಕ್ಕಾಗಿ ಮಾಸಿಕ 15 ಸಾವಿರ ಮತ್ತು ಮಕ್ಕಳ ಪೋಷಣೆಗೆ 10 ಸಾವಿರ ರೂಪಾಯಿಗಳನ್ನು ಪಾವತಿಸುವಂತೆ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಮೈಸೂರು ಜಿಲ್ಲೆಯ ಎಸ್‌ಬಿಐ ಬ್ಯಾಂಕ್ ಮ್ಯಾನೇಜರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹಂಚಾಟೆ ಸಂಜೀವ್ ಕುಮಾರ್ ಅವರಿದ್ದ ನ್ಯಾಯಪೀಠ ಈ ಆದೇಶ ಪ್ರಕಟಿಸಿತು.

ಅಲ್ಲದೆ, ಅರ್ಜಿದಾರರಿಗೆ ವೇತನದಿಂದ ವೃತ್ತಿಪರ ತೆರಿಗೆ ಮತ್ತು ಆದಾಯ ತೆರಿಗೆ ಮಾತ್ರ ಕಡ್ಡಾಯವಾಗಿ ಕಡಿತವಾಗುತ್ತದೆ. ಇನ್ನುಳಿದ ಎಲ್‌ಐಸಿ, ಪೀಠೋಪಕರಣಗಳ ಖರೀದಿಗಳು ಎಲ್ಲವೂ ಅರ್ಜಿದಾರರ ಪ್ರಯೋಜನಕ್ಕಾಗಿ ಕಡಿತವಾಗುತ್ತಿವೆ. ಹೀಗಾಗಿ ಪತ್ನಿಗೆ ಜೀವನಾಂಶ ನೀಡುವ ಸಂದರ್ಭದಲ್ಲಿ ಈ ಮೊತ್ತಗಳನ್ನು ಪರಿಗಣಿಸಿ ಜೀವನಾಂಶವನ್ನು ಕಡಿತಗೊಳಿಸುವುದಕ್ಕೆ ಅವಕಾಶವಿಲ್ಲ ಎಂದು ತಿಳಿಸಿದೆ.

ಅರ್ಜಿದಾರರ ವಾದವನ್ನು ಪುರಸ್ಕರಿಸಿದಲ್ಲಿ ಸಿಆರ್‌ಪಿಸಿಯ ಸೆಕ್ಷನ್ 125ರ (ಜೀವನಾಂಶ) ಅಡಿಯಲ್ಲಿ ಸಲ್ಲಿಸಲಾದ ಅರ್ಜಿಯ ಪ್ರತಿಯೊಂದು ಪ್ರಕರಣದಲ್ಲೂ, ಪತಿ ಕೃತಕ ಕಡಿತಗಳನ್ನು ರಚಿಸುವ ಪ್ರವೃತ್ತಿ ಇರುತ್ತದೆ. ಜೀವನಾಂಶವನ್ನು ನಿರಾಕರಿಸುವ ಸಲುವಾಗಿ ನ್ಯಾಯಾಲಯಗಳನ್ನು ದಾರಿತಪ್ಪಿಸುವ ಉದ್ದೇಶದಿಂದ ಕಡಿಮೆ (ಟೇಕ್ ಹೋಮ್) ಸಂಬಳವನ್ನು ತೋರಿಸುವ ಪ್ರಯತ್ನ ಮಾಡುತ್ತಾರೆ ಎಂದು ಪೀಠ ಹೇಳಿದೆ. ಅಲ್ಲದೆ, ಪ್ರಸ್ತುತ ಸಂದರ್ಭದಲ್ಲಿ, ಕಡಿತಗಳು ಶೇ.50ಕ್ಕಿಂತ ಹೆಚ್ಚಾಗಿದೆ ಎಂದು ಕೋರ್ಟ್ ಗಮನಿಸಿದೆ. ಆದ್ದರಿಂದ, ಕಡಿಮೆ ಮೊತ್ತದ ಜೀವನಾಂಶವನ್ನು ಪಾವತಿಸುವ ಉದ್ದೇಶದಿಂದ ಪತಿ ಹೆಚ್ಚಿನ ಕಡಿತಗಳನ್ನು ತೋರಿಸುವ ವ್ಯವಸ್ಥೆ ಮಾಡಿದ್ದಾರೆ ಎಂಬುದು ಗೊತ್ತಾಗಲಿದೆ.

ಕರ್ನಾಟಕ ಹೈಕೋರ್ಟ್
ಜ್ಞಾನವಾಪಿ ಪ್ರಕರಣ: '8 ವಾರಗಳಲ್ಲಿ ಶಿವಲಿಂಗ ಪೂಜೆ ಕುರಿತು ನಿರ್ಧರಿಸಿ'; ವಾರಣಾಸಿ ಕೋರ್ಟ್ ಗೆ ಹೈಕೋರ್ಟ್

ಆದ್ದರಿಂದ, ಮೇಲೆ ಚರ್ಚಿಸಿದ ಈ ಕಡಿತಗಳು ಹೆಂಡತಿಗೆ ಕಡಿಮೆ ಪ್ರಮಾಣದ ಜೀವನಾಂಶವನ್ನು ನೀಡುವ ಅಂಶವಾಗಬಾರದು. ಪ್ರಸ್ತುತ ಪ್ರಕರಣದಲ್ಲಿ, ಅರ್ಜಿದಾರರಾದ ಪತಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕೆಲಸ ಮಾಡುತ್ತಿರುವ ಶಾಖಾ ವ್ಯವಸ್ಥಾಪಕರಾಗಿದ್ದು, ತಿಂಗಳಿಗೆ 1,00,000 ರೂ.ಗಿಂತ ಹೆಚ್ಚಿನ ಸಂಬಳ ಪಡೆಯುತ್ತಿದ್ದಾರೆ. ಆಗ ಕೌಟುಂಬಿಕ ನ್ಯಾಯಾಲಯವು ಜೀವನಾಂಶ ನೀಡುವಂತೆ ಸೂಚನೆ ನೀಡಿರುವುದರಲ್ಲಿ ದೋಷಗಳು ಕಂಡುಬಂದಿಲ್ಲ.

ವಿಚಾರಣೆ ವೇಳೆ, ಅರ್ಜಿದಾರರು ಆಗಿರುವ ಎಸ್‌ಬಿಐ ಮ್ಯಾನೇಜರ್ ತಾವು ಪಡೆದುಕೊಳ್ಳುತ್ತಿರುವ ವೇತನದ ರಸೀದಿ ಸಲ್ಲಿಸಿದ್ದರು. ಅಲ್ಲದೆ, ವೇತನದಿಂದ ಆಗುತ್ತಿರುವ ಕಡಿತಗಳನ್ನು ಗಮನದಲ್ಲಿಟ್ಟುಕೊಂಡು ಜೀವನಾಂಶ ನೀಡುವುದಕ್ಕೆ ಹೆಚ್ಚಾಗಲಿದೆ. ಆದ ಕಾರಣ ಜೀವನಾಂಶ ಕಡಿಮೆ ಮಾಡಬೇಕು ಎಂದು ಕೋರಿದ್ದರು. ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಪೀಠ, ಅರ್ಜಿದಾರರ ಮನವಿಯನ್ನು ತಿರಸ್ಕರಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com