PPP ಮಾದರಿಯಲ್ಲಿ ಭೂಗತ ಸಬ್‌ಸ್ಟೇಷನ್‌ಗಳ ಅಭಿವೃದ್ಧಿಪಡಿಸಲು ಇಂಧನ ಇಲಾಖೆ ಮುಂದು!

ಬೆಂಗಳೂರಿನಲ್ಲಿರುವ ವಿದ್ಯುತ್ ಸಬ್​ಸ್ಟೇಷನ್​ಗಳ ಜಾಗದಲ್ಲಿ ಹೊಸ ಕಟ್ಟಡಗಳು ತಲೆಎತ್ತಲಿವೆ. ಪಿಪಿಪಿ ಮಾದರಿಯಲ್ಲಿ ಭೂಗತ ಸಬ್​ಸ್ಟೇಷನ್​ಗಳನ್ನು ಅಭಿವೃದ್ಧಿಗೊಳಿಸಿ ಅದರ ಮೇಲೆ ವಾಣಿಜ್ಯ ಕಟ್ಟಡ ನಿರ್ಮಾಣ ಮಾಡುವ ಹೊಸ ಪ್ರಯೋಗಕ್ಕೆ ಇಂಧನ ಇಲಾಖೆ ಮುಂದಾಗಿದೆ.
ಕೆಜೆ ಜಾರ್ಜ್
ಕೆಜೆ ಜಾರ್ಜ್
Updated on

ಬೆಂಗಳೂರು: ಬೆಂಗಳೂರಿನಲ್ಲಿರುವ ವಿದ್ಯುತ್ ಸಬ್​ಸ್ಟೇಷನ್​ಗಳ ಜಾಗದಲ್ಲಿ ಹೊಸ ಕಟ್ಟಡಗಳು ತಲೆಎತ್ತಲಿವೆ. ಪಿಪಿಪಿ ಮಾದರಿಯಲ್ಲಿ ಭೂಗತ ಸಬ್​ಸ್ಟೇಷನ್​ಗಳನ್ನು ಅಭಿವೃದ್ಧಿಗೊಳಿಸಿ ಅದರ ಮೇಲೆ ವಾಣಿಜ್ಯ ಕಟ್ಟಡ ನಿರ್ಮಾಣ ಮಾಡುವ ಹೊಸ ಪ್ರಯೋಗಕ್ಕೆ ಇಂಧನ ಇಲಾಖೆ ಮುಂದಾಗಿದೆ.

ಮುಂಬರಲಿರುವ ದಿನಗಳಲ್ಲಿ ಬೆಂಗಳೂರಿನ ವಿದ್ಯುತ್ ಬೇಡಿಕೆ ಪೂರೈಕೆಗೆ ವಿದ್ಯುತ್ ಸಬ್​ಸ್ಟೇಷನ್ ಕೊರತೆ ತಪ್ಪಿಸಲು ಈಗಿರುವ ಸಬ್​​​ಸ್ಟೇಷನ್​ಗಳನ್ನು ಖಾಸಗಿ ಸಾರ್ವಜನಿಕ ಸಹಭಾಗಿತ್ವದಲ್ಲಿ ಅಂಡರ್ ಗ್ರೌಂಡ್ ಸಬ್ ಸ್ಟೇಷನ್​ಗಳಾಗಿ ಪರಿವರ್ತಿಸಿ, ಆ ಜಾಗವನ್ನು ಡೆವಲಪರ್​ಗಳಿಗೆ ಗುತ್ತಿಗೆ ನೀಡುವ ಚಿಂತನೆ ಮಾಡಿದ್ದು, ಈ ಬಗ್ಗೆ ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಿದ ನಂತರ, ಪ್ರಸ್ತಾವನೆಯನ್ನು ಸಚಿವ ಸಂಪುಟದ ಮುಂದಿಡಲಾಗುತ್ತದೆ ಎಂದು ಇಂಧನ ಸಚಿವ ಕೆ ಜೆ ಜಾರ್ಜ್ ಅವರು ಹೇಳಿದ್ದಾರೆ.

ದೇಶದಲ್ಲಿ ವಿನೂತನ ಪ್ರಯೋಗವನ್ನು ನಮ್ಮ ಇಂಧನ ಇಲಾಖೆ ಮಾಡುತ್ತಿದೆ. ಸಂಪುಟಕ್ಕೆ ಪ್ರಸ್ತಾವನೆ ಕಳಿಸುವ ಮೊದಲು ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದ್ದೇವೆ. ಬೆಂಗಳೂರಿನಲ್ಲಿ ವಿದ್ಯುತ್ ಬೇಡಿಕೆ ದಿನೇ ದಿನೆ ಹೆಚ್ಚಾಗುತ್ತಿದೆ. ಇವಿ ವಾಹನ ಬಂದಷ್ಟು ಬೇಡಿಕೆ ಮತ್ತಷ್ಟು ಹೆಚ್ಚಾಗಲಿದೆ. ಹೆಚ್ಚುವರಿ ವಿದ್ಯುತ್ ಸರಬರಾಜು ಮಾಡಲು ಮತ್ತಷ್ಟು ಸಬ್​ ಸ್ಟೇಷನ್​ಗಳು ಬೇಕು. ಆದರೆ, ಈಗ ಹೊಸದಾಗಿ ಸಬ್ ಸ್ಟೇಷನ್ ಸ್ಥಾಪಿಸಲು ನಮ್ಮಲ್ಲಿ ಸ್ಥಳ ಇಲ್ಲ. ಆದರೆ, ಸದ್ಯ ನಮ್ಮಲ್ಲಿ ಪ್ರೈಮ್ ಲ್ಯಾಂಡ್​ಗಳು ಇವೆ. ಆನಂದರಾವ್ ವೃತ್ತದಲ್ಲಿ ಐದು ಎಕರೆ ಇದೆ. ಆ ರೀತಿ ಇನ್ನು ಹಲವು ಕಡೆ ಸಬ್​ ಸ್ಟೇಷನ್​ಗಳಿವೆ. ಅಲ್ಲಿನ ಸಬ್​ ಸ್ಟೇಷನ್​ಗಳನ್ನು ಅಂಡರ್ ಗ್ರೌಂಡ್ ಮಾಡಬೇಕು. ಈಗಾಗಲೇ ಹಲವು ದೇಶದಲ್ಲಿ ಈ ರೀತಿ ಅಂಡರ್ ಗ್ರೌಂಡ್ ಸಬ್ ಸ್ಟೇಷನ್ ಮಾಡುವ ಕಾರ್ಯ ಆಗಿದೆ.

ಕೆಜೆ ಜಾರ್ಜ್
ಇಂಧನ ದಕ್ಷತೆ ಸೂಚ್ಯಂಕದಲ್ಲಿ ಕರ್ನಾಟಕಕ್ಕೆ ಅಗ್ರಸ್ಥಾನ; ಯುಪಿ, ಮಹಾರಾಷ್ಟ್ರದಲ್ಲಿ ಗಮನಾರ್ಹ ಸುಧಾರಣೆ

ನಮ್ಮಲ್ಲೂ ಈ ಪ್ರಯೋಗ ಮಾಡಲು ಚಿಂತನೆ ನಡೆಸಿದ್ದೇವೆ. ಪಿಪಿಪಿ ಮಾದರಿಯಲ್ಲಿ ಸಬ್ ಸ್ಟೇಷನ್ ಜಾಗವನ್ನು ಡೆವಲಪರ್​ಗಳಿಗೆ 35 ವರ್ಷ ಗುತ್ತಿಗೆ ಆಧಾರದಲ್ಲಿ ನೀಡಲಿದ್ದೇವೆ. ಡೆವಲಪರ್​ಗಳು ಅಲ್ಲಿ ಹೂಡಿಕೆ ಮಾಡಲಿದ್ದಾರೆ. ನಮ್ಮ ಸಬ್ ಸ್ಟೇಷನ್ ಅಂಡರ್ ಗ್ರೌಂಡ್ ಮಾಡಿ, ಅದರ ಮೇಲೆ ವಾಣಿಜ್ಯ ಕಟ್ಟಡ ನಿರ್ಮಿಸಿಕೊಳ್ಳಬಹುದು. ಈ ಪ್ರಸ್ತಾವನೆ ಕುರಿತು ಅಭಿಪ್ರಾಯ ಸಂಗ್ರಹಿಸಿ ನಂತರ ಸಂಪುಟದ ಮುಂದಿಡಲಿದ್ದೇವೆ ಎಂದು ಹೇಳಿದರು.

ಈಗಿರುವ ಸಬ್​ ಸ್ಟೇಷನ್​ಗಳು ಹಳೆಯ ತಂತ್ರಜ್ಞಾನ ಮತ್ತು ಉಪಕರಣದ್ದಾಗಿವೆ. ಅವುಗಳನ್ನು ಹೊಸ ತಂತ್ರಜ್ಞಾನಕ್ಕೆ ಪರಿವರ್ತಿಸಿದಲ್ಲಿ ಹೆಚ್ಚುವರಿ ವಿದ್ಯುತ್ ಸರಬರಾಜು ಮಾಡುವ ಸಾಮರ್ಥ್ಯ ಹೊಂದಲಿವೆ. ಇದರಿಂದಾಗಿ ಹೊಸ ಸಬ್ ಸ್ಟೇಷನ್ ಸ್ಥಾಪಿಸುವ ಸಮಸ್ಯೆ ತಪ್ಪಲಿದೆ. ಬೇಡಿಕೆಯಂತೆ ವಿದ್ಯುತ್ ಪೂರೈಕೆಯನ್ನೂ ಮಹಾನಗರಕ್ಕೆ ಮಾಡಲು ಸಾಧ್ಯವಾಗಲಿದೆ. ಹಾಗಾಗಿ ಈ ಚಿಂತನೆ ಮಾಡಿದ್ದೇವೆ ಎಂದು ತಿಳಿಸಿದರು.

ಹಿಂದೆ ಸ್ಟೀಲ್ ಬ್ರಿಡ್ಜ್ ಮಾಡಲು ಮುಂದಾದಾಗ ವಿರೋಧ ವ್ಯಕ್ತವಾಗಿತ್ತು. ಯೋಜನೆ ಕುರಿತು ಎಲ್ಲಾ ಸಿದ್ಧತೆ ನಡೆಸಿ ಸಂಪುಟದ ಅನುಮೋದನೆ ಪಡೆದ ಜನರಿಂದ ವಿರೋಧ ವ್ಯಕ್ತವಾಗಿತ್ತು. ಹಾಗಾಗಿ ಇದೀಗ ಮೊದಲೇ ಜನರ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದ್ದೇವೆ. ನಮ್ಮ ದೇಶದಲ್ಲಿ ನಾವೇ ಮೊದಲು ಅಂಡರ್ ಗ್ರೌಂಡ್ ಜಿಐಎಸ್ ಸ್ಟೇಷನ್ ಮಾಡುತ್ತಿರುವುದು. ಶಿವನಸಮುದ್ರದಲ್ಲಿ ದೇಶದ ಮೊದಲ ಜಲವಿದ್ಯುತ್ ಉತ್ಪಾದನೆಯಾಯಿತು. ಹಾಗಾಗಿ ನಾವೇ ಇದಕ್ಕೂ ಮುಂದಡಿ ಇಡುತ್ತಿದ್ದೇವೆ. ದೂರದೃಷ್ಟಿ ಇರಿಸಿಕೊಂಡು ಈ ಪ್ರಯೋಗ ಮಾಡುತ್ತಿದ್ದೇವೆ. ಹೊಸ ಸಬ್ ಸ್ಟೇಷನ್ ಮಾಡಲು ಜಾಗ ಇಲ್ಲ. ಇರುವ ಸಬ್ ಸ್ಟೇಷನ್ ಅಪ್ ಗ್ರೇಡ್ ಮಾಡಬೇಕು. ಹಾಗಾಗಿ ಪಿಪಿಪಿ ಮಾದರಿಯಲ್ಲಿ ಅಂಡರ್ ಗ್ರೌಂಡ್ ಮಾಡುವ ಚಿಂತನೆ ಮಾಡಿದ್ದೇವೆ ಎಂದರು.

ಕೆಜೆ ಜಾರ್ಜ್
ನಗರ, ರಾಜ್ಯದಲ್ಲಿ ವಿದ್ಯುತ್ ಕಡಿತವಿಲ್ಲ: ರಾಜ್ಯ ಸರ್ಕಾರ

ಮಾ.9ಕ್ಕೆ ರೈತ ಸೌರ ಶಕ್ತಿ ಮೇಳಕ್ಕೆ ಸಿಎಂ ಚಾಲನೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾರ್ಚ್ 9 ರಂದು ರೈತ ಸೌರ ಶಕ್ತಿ ಮೇಳಕ್ಕೆ ಚಾಲನೆ ನೀಡಲಿದ್ದು, ಇದರ ಅಡಿಯಲ್ಲಿ ನೀರಾವರಿಗೆ ಸಾಂಪ್ರದಾಯಿಕ ವಿದ್ಯುತ್‌ ಅವಲಂಬನೆ ಕಡಿಮೆ ಮಾಡಿ, ಸೌರಶಕ್ತಿಯ ಬಳಕೆ ಮೂಲಕ ರೈತರು ಸ್ವಾವಲಂಬನೆ ಸಾಧಿಸಬಹುದಾಗಿದೆ.

ನಮ್ಮ ಸರ್ಕಾರ 'ಕುಸುಮ್‌ ಬಿ' ಯೋಜನೆಯ ಅನುಷ್ಠಾನಕ್ಕೆ ಒತ್ತು ನೀಡುತ್ತಿದೆ. ನವೀನ ಮಾದರಿಯ ಸೌರ ಪಂಪ್‌ಸೆಟ್‌ಗಳ ಪ್ರಾತ್ಯಕ್ಷಿಕೆಯನ್ನು ನೋಡಿ, ಈ ವಿಚಾರವಾಗಿ ಇರುವ ಗೊಂದಲಗಳನ್ನು ಪರಿಹರಿಸಿಕೊಳ್ಳಲು ಮೇಳ ಅತ್ಯುತ್ತಮ ವೇದಿಕೆಯಾಗಲಿದೆ. ಸೌರ ಪಂಪ್‌ಸೆಟ್‌ಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದ ರೈತರು ತಮ್ಮ ಜಮೀನುಗಳಲ್ಲಿ ಇದನ್ನು ಅಳವಡಿಸಿಕೊಳ್ಳುವಂತಾಗಬೇಕು ಎಂದರು.

ಸೌರ ಪಂಪ್​ಸೆಟ್‌ ಅಳವಡಿಕೆಯನ್ನು ರೈತರ ಸಮೂಹಗಳಲ್ಲಿ ಉತ್ತೇಜಿಸಲು ರಾಜ್ಯ ಸರ್ಕಾರದಿಂದ ಈವರೆಗೆ ನೀಡಲಾಗುತ್ತಿದ್ದ ಶೇ. 30 ರಷ್ಟು ಸಹಾಯಧನವನ್ನು ಶೇ. 50 ಕ್ಕೆ ಹೆಚ್ಚಿಸಿದೆ. ಒಟ್ಟಾರೆ ಮೊತ್ತದಲ್ಲಿ ಶೇ. 20 ರಷ್ಟನ್ನು ಮಾತ್ರ ರೈತರು ಭರಿಸಬೇಕಾಗಿರುತ್ತದೆ. ಇದಲ್ಲದೇ, ಯೋಜನೆಯಡಿ ರೈತರಿಗೆ ಪಂಪ್, ಮೀಟರ್, ಪೈಪ್‌ಗಳನ್ನು ಒದಗಿಸಲಿದೆ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com