ಬೆಂಗಳೂರು ನೀರಿನ ಬಿಕ್ಕಟ್ಟು: ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಕೆರೆಗಳಿಗೆ ಸಂಸ್ಕರಿಸಿದ ನೀರು: BWSSB ಮಹತ್ವದ ನಿರ್ಧಾರ

ಬೆಂಗಳೂರಿನ ನೀರಿನ ಬಿಕ್ಕಟ್ಟು (Bengaluru water crisis) ತೀವ್ರವಾಗಿರುವಂತೆಯೇ ನಗರದಲ್ಲಿನ ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಮಹತ್ವದ ಕ್ರಮ ಕೈಗೊಂಡಿರುವ ಬೆಂಗಳೂರು ಜಲ ಮಂಡಳಿ ಒಣಗಿರುವ ಕೆರೆಗಳಿಗೆ ಸಂಸ್ಕರಿಸಿದ ನೀರನ್ನು ಪೂರೈಕೆ ಮಾಡಲು ನಿರ್ಧರಿಸಿದೆ.
ಕೆರೆಗಳಿಗೆ ಸಂಸ್ಕರಿಸಿದ ನೀರು
ಕೆರೆಗಳಿಗೆ ಸಂಸ್ಕರಿಸಿದ ನೀರು

ಬೆಂಗಳೂರು: ಬೆಂಗಳೂರಿನ ನೀರಿನ ಬಿಕ್ಕಟ್ಟು (Bengaluru water crisis) ತೀವ್ರವಾಗಿರುವಂತೆಯೇ ನಗರದಲ್ಲಿನ ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಮಹತ್ವದ ಕ್ರಮ ಕೈಗೊಂಡಿರುವ ಬೆಂಗಳೂರು ಜಲ ಮಂಡಳಿ ಒಣಗಿರುವ ಕೆರೆಗಳಿಗೆ ಸಂಸ್ಕರಿಸಿದ ನೀರನ್ನು ಪೂರೈಕೆ ಮಾಡಲು ನಿರ್ಧರಿಸಿದೆ.

ಬೆಂಗಳೂರಿನ ಶೇ.50ರಷ್ಟು ಬೋರ್‌ವೆಲ್‌ಗಳು ಬತ್ತಿ ಹೋಗಿದ್ದು, ಹೀಗಾಗಿ ನಗರದ ಅಂತರ್ಜಲ ಮೂಲಗಳನ್ನು ಮರುಪೂರಣಗೊಳಿಸುವ ಉದ್ದೇಶದಿಂದ ಒಣಗುತ್ತಿರುವ ಕೆರೆಗಳಿಗೆ ದಿನಕ್ಕೆ 1,300 ಮಿಲಿಯನ್ ಲೀಟರ್ ಶುದ್ಧೀಕರಿಸಿದ ನೀರನ್ನು ತುಂಬಿಸಲು ಬೆಂಗಳೂರು ಜಲಮಂಡಳಿ ಅಧಿಕಾರಿಗಳು ನಿರ್ಧರಿಸಿದ್ದಾರೆ.

ಬೆಂಗಳೂರಿನ ನೀರಿನ ಬಿಕ್ಕಟ್ಟನ್ನು ನಿರ್ವಹಿಸುವ ಉದ್ದೇಶದಿಂದ, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಸಹ ಫಿಲ್ಟರ್ ಬೋರ್‌ವೆಲ್‌ಗಳನ್ನು ಸ್ಥಾಪಿಸುತ್ತಿದ್ದು, ಎಲ್ಲ ರೀತಿಯ ಪರೀಕ್ಷೆಯ ನಂತರ ನೀರನ್ನು ಪೂರೈಸಲು ಪುನಶ್ಚೇತನಗೊಂಡ ಕೆರೆಗಳ ಬಳಿ ವಿನೂತನ ತಂತ್ರಜ್ಞಾನವನ್ನು ಬಳಸಿಕೊಂಡು ನೀರಿನ ಸ್ಥಾವರಗಳನ್ನು ನಿರ್ಮಿಸುತ್ತೇವೆ ಎಂದು BWSSB ಅಧಿಕಾರಿಗಳು ತಿಳಿಸಿದ್ದಾರೆ.

ಕೆರೆಗಳಿಗೆ ಸಂಸ್ಕರಿಸಿದ ನೀರು
ಬೆಂಗಳೂರು ನಗರದಲ್ಲಿ ನೀರಿನ ಬಿಕ್ಕಟ್ಟು: ಈ ಉದ್ದೇಶಗಳಿಗೆ ಕುಡಿಯುವ ನೀರು ಬಳಸಿದರೆ ₹5000 ದಂಡ!

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IISc) ಸಹಯೋಗದೊಂದಿಗೆ ಈ ಉಪಕ್ರಮವನ್ನು ತೆಗೆದುಕೊಳ್ಳಲಾಗಿದ್ದು, ಇದು ಸುಮಾರು 2030 MLD ನೀರನ್ನು ವ್ಯವಸ್ಥೆಗೆ ಸೇರಿಸುವ ನಿರೀಕ್ಷೆಯಿದೆ ಎಂದು BWSSB ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಹೇಳಿದರು.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇರುವ ದೇವನಹಳ್ಳಿಯಲ್ಲಿ ನೀರಾವರಿ ಇಲಾಖೆಯು ಇದೇ ಉಪಕ್ರಮದಿಂದ ಕೋಟೆ ಕೆರೆಯ ನೀರನ್ನು ಸಂಸ್ಕರಿಸಿ ನೀರು ಪೂರೈಸುತ್ತಿದೆ. ಯೋಜನೆಯ ಭಾಗವಾಗಿ ಬೆಳ್ಳಂದೂರು, ವರ್ತೂರು, ನಾಯಂಡಹಳ್ಳಿ, ಹೇರೋಹಳ್ಳಿ, ಅತ್ತೂರು ಮತ್ತು ಜಕ್ಕೂರು ಕೆರೆಗಳಿಗೆ ಆರಂಭದಲ್ಲಿ ನೀರು ತುಂಬಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರಿಗೆ 2,100 ಎಂಎಲ್‌ಡಿ ಕುಡಿಯುವ ನೀರಿನ ಅಗತ್ಯವಿದ್ದು, ಅದರಲ್ಲಿ 1,450 ಎಂಎಲ್‌ಡಿ ಕಾವೇರಿ ನದಿಯಿಂದ ಬರುತ್ತದೆ. ನೀರಿನ ಬಿಕ್ಕಟ್ಟಿನ ಕುರಿತು ಜನತೆ ಆತಂಕ ಪಡುವ ಅಗತ್ಯವಿಲ್ಲ. ಜುಲೈವರೆಗೆ ಜಲಾಶಯಗಳಲ್ಲಿ ಸಾಕಷ್ಟು ನೀರು ಇದೆ. ನಗರಕ್ಕೆ ಮಾರ್ಚ್‌ನಿಂದ ಮೇ ವರೆಗೆ ಸುಮಾರು ಎಂಟು ಸಾವಿರ ದಶಲಕ್ಷ ಘನ ಅಡಿ (ಟಿಎಂಸಿ) ಅಗತ್ಯವಿದ್ದು, ಜಲಾಶಯಗಳಲ್ಲಿ 34 ಟಿಎಂಸಿ ನೀರಿದೆ. ನಗರಕ್ಕೆ ಅಗತ್ಯವಿರುವ ಉಳಿದ 650 ಎಂಎಲ್‌ಡಿ ನೀರು ಬೋರ್‌ವೆಲ್ ನೀರಿನಿಂದ ಬರುತ್ತದೆ. ಮಳೆಯ ಅಭಾವ, ಅಂತರ್ಜಲದ ಕುಸಿತ ಮತ್ತು ಅಂತರ್ಜಲದ ಶೋಷಣೆಯಿಂದಾಗಿ ಇಲ್ಲಿ 250 MLD ಕೊರತೆಯಿದೆ ಎಂದು ಅವರು ಹೇಳಿದರು.

ಟ್ಯಾಂಕರ್ ಮಾಲೀಕರ ನೋಂದಣಿ ಗಡುವು ವಿಸ್ತರಣೆ

ಏತನ್ಮಧ್ಯೆ, BWSSB ಹೆಚ್ಚಿನ ನೀರು ಸರಬರಾಜುದಾರರನ್ನು ಉತ್ತೇಜಿಸುವ ಉದ್ದೇಶದಿಂದ ಮಾರ್ಚ್ 15 ರವರೆಗೆ ನೀರಿನ ಟ್ಯಾಂಕರ್ ಮಾಲೀಕರ ನೋಂದಣಿ ಗಡುವನ್ನು ವಿಸ್ತರಿಸಿದೆ. ಇಲ್ಲಿಯವರೆಗೆ 1,530 ಟ್ಯಾಂಕರ್‌ಗಳು ನೋಂದಣಿಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಖಾಸಗಿ ನೀರಿನ ಟ್ಯಾಂಕರ್‌ಗಳ ಸ್ವಾಧೀನ

ನೀರಿನ ಮಾಫಿಯಾವನ್ನು ಎದುರಿಸಲು ಸರ್ಕಾರವು ಖಾಸಗಿ ನೀರಿನ ಟ್ಯಾಂಕರ್‌ಗಳನ್ನು ಸ್ವಾಧೀನಪಡಿಸಿಕೊಂಡಿದೆ ಎಂದು ಬೆಂಗಳೂರು ಅಭಿವೃದ್ಧಿಯ ಉಸ್ತುವಾರಿಯೂ ಆಗಿರುವ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದ್ದಾರೆ.

'ನಗರದಲ್ಲಿ ಶೇ 50 ರಷ್ಟು ಬೋರ್‌ವೆಲ್‌ಗಳು ಬತ್ತಿ ಹೋಗಿವೆ, ನಗರದ ಹೊರಗಿನ ಮೂಲಗಳಿಂದ ನೀರು ಸರಬರಾಜು ಮಾಡಲು ಸಾವಿರಾರು ಖಾಸಗಿ ನೀರಿನ ಟ್ಯಾಂಕರ್‌ಗಳನ್ನು (ನೋಂದಣಿ ಮಾಡಿಕೊಳ್ಳುವ ಮೂಲಕ) ನಿಯಂತ್ರಣಕ್ಕೆ ತೆಗೆದುಕೊಳ್ಳಲು ನಾವು ನಿರ್ಧರಿಸಿದ್ದೇವೆ. ನಾವು ಬೆಲೆಯನ್ನು ಅಧಿಕಾರಿಗಳಿಗೆ ಬಿಟ್ಟಿದ್ದೇವೆ. ಪ್ರಯಾಣದ ದೂರವು ವೆಚ್ಚವನ್ನು ನಿರ್ಧರಿಸುತ್ತದೆ. ಬಳಕೆಯಾಗದ ಹಾಲಿನ ಟ್ಯಾಂಕರ್‌ಗಳನ್ನು ನೀರನ್ನು ಸಾಗಿಸಲು ಬಳಸಲಾಗುವುದು" ಎಂದು ಶಿವಕುಮಾರ್ ಹೇಳಿದರು.

ಕೆರೆಗಳಿಗೆ ಸಂಸ್ಕರಿಸಿದ ನೀರು
ತಮಿಳುನಾಡಿಗೆ ಕಳ್ಳತನದಿಂದ ಕಾವೇರಿ ನೀರು: ವಿಡಿಯೋ ಹಂಚಿಕೊಂಡು ಬಿಜೆಪಿ ಟೀಕೆ

ಬಿಜೆಪಿ ಪ್ರತಿಭಟನೆ

ಏತನ್ಮಧ್ಯೆ, ಬೆಂಗಳೂರಿನ ನೀರಿನ ಸಮಸ್ಯೆಯ ದುರುಪಯೋಗವನ್ನು ವಿರೋಧಿಸಿ ಪ್ರತಿಪಕ್ಷ ಬಿಜೆಪಿ ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಲು ಯೋಜಿಸಿದೆ. ಇದಕ್ಕೆ ಪ್ರತಿಕ್ರಿಯಿಸಿದ ಶಿವಕುಮಾರ್, ‘ಅವರು ಯಾವುದೇ ರಚನಾತ್ಮಕ ಸಲಹೆಗಳನ್ನು ನೀಡಿದರೆ, ನಾವು ಖಂಡಿತವಾಗಿಯೂ ಅವುಗಳನ್ನು ಪರಿಗಣಿಸಲು ಸಿದ್ಧರಿದ್ದೇವೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com