ಬೆಂಗಳೂರು ನಗರದಲ್ಲಿ ನೀರಿನ ಬಿಕ್ಕಟ್ಟು: ಈ ಉದ್ದೇಶಗಳಿಗೆ ಕುಡಿಯುವ ನೀರು ಬಳಸಿದರೆ ₹5000 ದಂಡ!

ಬೆಂಗಳೂರು ನಗರದಲ್ಲಿ ದಿನದಿಂದ ದಿನಕ್ಕೆ ನೀರಿನ ಬಿಕ್ಕಟ್ಟು ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಕುಡಿಯುವ ನೀರನ್ನು ಇತರೆ ಉದ್ದೇಶಗಳಿಗೆ ಬಳಸುವುದನ್ನು ನಿಷೇಧಿಸಿದ್ದು, ನಿಯಮ ಉಲ್ಲಂಘನೆಯಾದರೆ 5 ಸಾವಿರ ದಂಡ ವಿಧಿಸುವುದಾಗಿ ಹೇಳಿದೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಬೆಂಗಳೂರು: ಬೆಂಗಳೂರು ನಗರದಲ್ಲಿ ದಿನದಿಂದ ದಿನಕ್ಕೆ ನೀರಿನ ಬಿಕ್ಕಟ್ಟು ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಕುಡಿಯುವ ನೀರನ್ನು ಇತರೆ ಉದ್ದೇಶಗಳಿಗೆ ಬಳಸುವುದನ್ನು ನಿಷೇಧಿಸಿದ್ದು, ನಿಯಮ ಉಲ್ಲಂಘನೆಯಾದರೆ 5 ಸಾವಿರ ದಂಡ ವಿಧಿಸುವುದಾಗಿ ಹೇಳಿದೆ.

ಮಳೆ ಕೊರತೆ ಮತ್ತು ಹೆಚ್ಚುತ್ತಿರುವ ತಾಪಮಾನದಿಂದಾಗಿ ನಗರದಲ್ಲಿ ನೀರಿನ ಸಮಸ್ಯೆ ತಲೆದೋರುತ್ತಲೇ ಇದೆ. ಹೀಗಾಗಿ, ಕಾರು ತೊಳೆಯಲು, ಕೈದೋಟ, ನಿರ್ಮಾಣ ಕಾಮಗಾರಿ, ನೀರಿನ ಕಾರಂಜಿ ಮತ್ತು ರಸ್ತೆ ನಿರ್ಮಾಣ ಮತ್ತು ನಿರ್ವಹಣೆಗೆ ಕುಡಿಯುವ ನೀರಿನ ಬಳಕೆಯನ್ನು ನಿಷೇಧಿಸಿದೆ. ಈ ಆದೇಶ ಉಲ್ಲಂಘಿಸಿದರೆ 5,000 ರೂಪಾಯಿ ದಂಡವನ್ನೂ ವಿಧಿಸಿದೆ.

ಬೆಂಗಳೂರು ನಗರದಲ್ಲಿ ಕಾಯಂ ನಿವಾಸಿಗಳು ಹಾಗೂ ಬಂದು ಹೋಗುವವರನ್ನು ಸೇರಿಸಿ ಸುಮಾರು 1 ಕೋಟಿ 40 ಲಕ್ಷ ಜನರಿದ್ದು, ಎಲ್ಲರಿಗೂ ಕುಡಿಯುವ ನೀರು ಪೂರೈಕೆ ಮಾಡುವುದು ಅಗತ್ಯವಾಗಿದೆ. ನಗರದಲ್ಲಿ ನೀರಿನ ಬಿಕ್ಕಟ್ಟು ತಲೆದೋರಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರನ್ನು ಸಾರ್ವಜನಿಕರು ಮಿತವಾಗಿ ಬಳಸುವಂತೆ ತಿಳಿಸಲಾಗಿದೆ.

ಪ್ರಾತಿನಿಧಿಕ ಚಿತ್ರ
ವೇಗವಾಗಿ ಬೆಳೆಯುತ್ತಿರುವ ಬೆಂಗಳೂರಿಗೆ ಕುಡಿಯುವ ನೀರು ಪೂರೈಸುವುದು ದೊಡ್ಡ ಸವಾಲು: ಸದನದಲ್ಲಿ ಡಿಸಿಎಂ

ಸಾರ್ವಜನಿಕ ಹಿತದೃಷ್ಟಿಯಿಂದ ವಾಹನಗಳ ಸ್ವಚ್ಛತೆಗೆ, ಕೈದೋಟಕ್ಕೆ, ಕಟ್ಟಡ ನಿರ್ಮಾಣಕ್ಕೆ, ಕಾರಂಜಿ ವ್ಯವಸ್ಥೆಗೆ, ಕುಡಿಯುವ ನೀರು ಹೊರತುಪಡಿಸಿ ಚಿತ್ರಮಂದಿರಗಳು ಮತ್ತು ಮಾಲ್‌ಗಳಲ್ಲಿ ಇತರ ಬಳಕೆಗೆ ಮತ್ತು ರಸ್ತೆ ನಿರ್ಮಾಣ ಮತ್ತು ಸ್ವಚ್ಛತೆಗೆ ಕುಡಿಯುವ ನೀರನ್ನು ಬಳಸುವುದನ್ನು ನಿಷೇಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಈ ಆದೇಶದ ಉಲ್ಲಂಘನೆಯಾದರೆ ಅಂತವರ ವಿರುದ್ಧ ಜಲಮಂಡಳಿಯು 5 ಸಾವಿರ ರೂ.ಗಳ ದಂಡ ವಿಧಿಸಲಾಗುವುದು. ಈ ಉಲ್ಲಂಘನೆ ಮತ್ತೆ ಮರುಕಳಿಸಿದರೆ, 5 ಸಾವಿರದ ಜೊತೆಗೆ ಪ್ರತಿದಿನಕ್ಕೆ 500 ರೂ. ಹೆಚ್ಚುವರಿ ದಂಡ ವಿಧಿಸಲಾಗುವುದು ಎಂದು ತಿಳಿಸಿದೆ.

ನಗರದಲ್ಲಿ ಟ್ಯಾಂಕರ್ ಮಾಲೀಕರು ಗ್ರಾಹಕರನ್ನು ಸುಲಿಗೆ ಮಾಡುತ್ತಿದ್ದಾರೆ ಎಂಬ ನಿರಂತರ ಆರೋಪದ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಜಿಲ್ಲಾಡಳಿತ ಗುರುವಾರ ಟ್ಯಾಂಕರ್ ನೀರಿನ ದರ ನಿಗದಿಪಡಿಸಿ ಆದೇಶ ಹೊರಡಿಸಿದೆ.

ಪ್ರಾತಿನಿಧಿಕ ಚಿತ್ರ
ಬೆಂಗಳೂರು: ವಾಟರ್ ಟ್ಯಾಂಕರ್ ಮಾಫಿಯಾ’ಗೆ ಸರ್ಕಾರ ಬ್ರೇಕ್; ಹೊಸ ದರ ನಿಗದಿ ಮಾಡಿ ಜಿಲ್ಲಾಡಳಿತ ಆದೇಶ!

ಬೆಂಗಳೂರು ಮಹಾನಗರ ಪಾಲಿಕೆ ಪರವಾಗಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆಎ ದಯಾನಂದ್ ಅವರು ಸುತ್ತೋಲೆ ಹೊರಡಿಸಿದ್ದಾರೆ. ತಾಂತ್ರಿಕ ಸಮಿತಿ ಶಿಫಾರಸು ಆಧರಿಸಿ ಈ ದರ ನಿಗದಿ ಮಾಡಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಬೆಂಗಳೂರು ಜಿಲ್ಲಾಡಳಿತದ ಪ್ರಕಾರ, 5 ಕಿಮೀವರೆಗೆ 6,000 ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕರ್‌ಗೆ 600 ರೂ., 8000 ಲೀಟರ್ ನೀರಿನ ಸಾಮರ್ಥ್ಯದ ಟ್ಯಾಂಕರ್‌ಗೆ 700 ರೂ., 12,000 ಲೀಟರ್ ನೀರಿನ ಟ್ಯಾಂಕರ್‌ಗೆ 1000 ರೂ. ನಿಗಧಿಪಡಿಸಿದೆ.

5 ರಿಂದ 10 ಕಿಮೀ ಅಂತರದಲ್ಲಿದ್ದರೆ 6,000 ಲೀಟರ್ ನೀರಿನ ಟ್ಯಾಂಕರ್‌ಗೆ 750 ರೂ., 8,000 ಲೀಟರ್ ನೀರಿನ ಟ್ಯಾಂಕರ್‌ಗೆ 850 ರೂ. ಮತ್ತು 12,000 ಲೀಟರ್ ಸಾಮರ್ಥ್ಯದ ವಾಟರ್ ಟ್ಯಾಂಕರ್‌ಗೆ 1200 ರೂ. ನಿಗಧಿಪಡಿಸಿ ಆದೇಶ ಹೊರಡಿಸಿದೆ.

ಬೆಂಗಳೂರು ನಗರ ಜಿಲ್ಲೆಯ ಎಲ್ಲಾ ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಿರುವ ಜಿಲ್ಲಾಧಿಕಾರಿಗಳು, ನೀರು ಸರಬರಾಜು ಮಾಡುವ ಖಾಸಗಿ ಟ್ಯಾಂಕರ್‌ಗಳು ಜಿಎಸ್‌ಟಿ ವ್ಯಾಪ್ತಿಗೆ ಬರುತ್ತವೆ ಮತ್ತು ಈ ದರಗಳಿಗೆ ಜಿಎಸ್‌ಟಿಯನ್ನು ಸೇರಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com