ರಾಜ್ಯದಲ್ಲಿ ಗೋಬಿ ಮಂಚೂರಿ, ಕಾಟನ್ ಕ್ಯಾಂಡಿ, ಕಬಾಬ್ ಬ್ಯಾನ್: ಇಂದು ಸರ್ಕಾರದಿಂದ ಅಧಿಕೃತ ಘೋಷಣೆ ಸಾಧ್ಯತೆ

ಪುದುಚೇರಿ ಮತ್ತು ತಮಿಳುನಾಡಿನ ನಂತರ, ಕರ್ನಾಟಕದಲ್ಲಿಯೂ ಜನಪ್ರಿಯ ಬೀದಿ ಆಹಾರ ಪದಾರ್ಥಗಳ ಗೋಬಿ ಮಂಚೂರಿ, ಕಾಟನ್ ಕ್ಯಾಂಡಿ, ಕಬಾಬ್ ನಿಷೇಧವಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಪುದುಚೇರಿ ಮತ್ತು ತಮಿಳುನಾಡಿನ ನಂತರ, ಕರ್ನಾಟಕದಲ್ಲಿಯೂ ಜನಪ್ರಿಯ ಬೀದಿ ಆಹಾರ ಪದಾರ್ಥಗಳ ಗೋಬಿ ಮಂಚೂರಿ, ಕಾಟನ್ ಕ್ಯಾಂಡಿ, ಕಬಾಬ್ ನಿಷೇಧವಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಈ ಆಹಾರ ಪದಾರ್ಥಗಳಲ್ಲಿ ರೋಡಮೈನ್ ಬಿ, ಬಣ್ಣಗಳನ್ನು ಬಳಸಲಾಗುತ್ತಿದ್ದು, ಇದು ಕ್ಯಾನ್ಸರ್ ರೋಗವನ್ನು ಮಾಡುವ ರಾಸಾಯನಿಕಗಳಾಗಿವೆ.

ರೋಡಮೈನ್‌-ಬಿ ಅಥವಾ ಆರ್‌ಎಚ್‌ಬಿ ಎಂದು ಕರೆಯುವ ರಾಸಾಯನಿಕವನ್ನು ಜವಳಿ, ಕಾಗದ, ಚರ್ಮ ಮತ್ತು ಬಣ್ಣಗಳ ಉದ್ಯಮದಲ್ಲಿ ಕೆಂಪು ಮತ್ತು ಗುಲಾಬಿ ಬಣ್ಣಕ್ಕಾಗಿ ಬಳಸಲಾಗುತ್ತದೆ. ಈ ರಾಸಾಯನಿಕವು ಆಹಾರದ ಮೂಲಕ ದೇಹ ಸೇರಿದರೆ ಕ್ಯಾನ್ಸರ್‌ ಕಾಯಿಲೆಗೆ ತುತ್ತಾಗಬೇಕಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.

ಇದು ಕೇವಲ ಹತ್ತಿ ಕ್ಯಾಂಡಿಯಲ್ಲಿಮಾತ್ರವಲ್ಲ; ಸಿಹಿ ತಿಂಡಿಗಳು, ಬಣ್ಣದ ಮಿಠಾಯಿಗಳು, ಕೆಂಪು ಮೆಣಸಿನಕಾಯಿಗಳು, ಮೆಣಸಿನ ಪುಡಿ ಇನ್ನೂ ಅನೇಕ ಸಂಸ್ಕರಿಸಿದ ಆಹಾರಗಳಲ್ಲಿ ಕಂಡು ಬರುತ್ತದೆ. ರೋಡಮೈನ್‌-ಬಿ ನಿಯಮಿತವಾಗಿ ಸೇವಿಸಿದರೆ ಮೆದುಳಿನಲ್ಲಿರುವ ಸೆರೆಬೆಲ್ಲಮ್‌ ಅಂಗಾಂಶಕ್ಕೆ ಮತ್ತು ಮಿದುಳನ್ನು ಬೆನ್ನು ಹುರಿಗೆ ಸಂಪರ್ಕಿಸುವ ಮೆದುಳಿನ ಕಾಂಡಕ್ಕೆ ತೀವ್ರ ಹಾನಿ ಉಂಟುಮಾಡುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.

ಸಂಗ್ರಹ ಚಿತ್ರ
ನಿಯಮ ಮೀರಿ ನಮ್ಮ ಮೆಟ್ರೋದಲ್ಲಿ ಗೋಬಿ ಸವಿದ ವ್ಯಕ್ತಿಗೆ ರೂ.500 ದಂಡ!

ಕರ್ನಾಟಕ ರಾಜ್ಯ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ವಿಭಾಗವು, ಕಾಟನ್‌ ಕ್ಯಾಂಡಿ ಮತ್ತು ಗೋಬಿ ಮಂಚೂರಿ ಹಾಗೂ ಕಬಾಬ್ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆ ನಡೆಸಿದ್ದು, ಇವುಗಳಲ್ಲಿ ಕೃತಕ ಬಣ್ಣಗಳ ಬಳಸಿರುವುದು ಪತ್ತೆಯಾಗಿದೆ.

ರಾಜ್ಯಾದ್ಯಂತ 170ಕ್ಕೂ ಹೆಚ್ಚು ಕಡೆ ಗೋಬಿ ಮಂಚೂರಿ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, 100ಕ್ಕೂ ಹೆಚ್ಚು ಕಡೆ ಗೋಬಿ ಮಂಚೂರಿಗಳು ಅಸುರಕ್ಷಿತ ಎಂದು ವರದಿಯಲ್ಲಿ ಉಲ್ಲೇಖಿಸಿದ್ದಾಗಿ ತಿಳಿದು ಬಂದಿದೆ.

ಗೋಬಿ ಮಂಚೂರಿ ಮಾದರಿಯಲ್ಲಿಯೇ ಚಿಕನ್‌ ಕಬಾಬ್‌ ಅನ್ನು ಸಿದ್ಧಪಡಿಸಲಾಗುತ್ತದೆ. ಕಬಾಬ್‌ನ ರುಚಿ ಹೆಚ್ಚಿಸಲು, ಆಕರ್ಷಕವಾಗಿ ಕಾಣುವಂತೆ ಮಾಡಲು ಪೌಡರ್‌ ಬಳಸಲಾಗುತ್ತದೆ. ಇದು ಕೂಡ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಹೀಗಾಗ ಈ ಮೂರೂ ಆಹಾರ ಪದಾರ್ಥಗಳನ್ನು ನಿಷೇಧ ಮಾಡುವ ಕುರಿತು ಚಿಂತನೆಗಳು ನಡೆಯುತ್ತಿವೆ.

ಮದುವೆ ಮನೆಗಳು, ಶಾಪಿಂಗ್ ಮಾಲ್‌ಗಳು, ಉದ್ಯಾನವನಗಳು ಮತ್ತು ವ್ಯಾಪಾರ ಮೇಳಗಳಂತಹ ವಿವಿಧ ಮಾರಾಟ ಕೇಂದ್ರಗಳಿಂದ ಕಾಟನ್ ಕ್ಯಾಂಡಿ, ಗೋಬಿ ಮಂಚೂರಿಯ ಮಾದರಿಗಳನ್ನು ಸಂಗ್ರಹಿಸಿದ್ದೆವು. ಇವುಗಳಲ್ಲಿ ರಾಸಾಯನಿಕ ಪದಾರ್ಥಗಳು ಕಂಡು ಬಂದಿವೆ. ಈ ರಾಸಾಯನಿಕಗಳನ್ನು ಸೇವಿಸಿದಾಗ ಗಂಟಲಿನ ಕಿರಿಕಿರಿ, ಹೊಟ್ಟೆ ನೋವಿನಿಂದ ಹಿಡಿದು ವಿವಿಧ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಅಲ್ಲದೆ, ಕ್ಯಾನ್ಸರ್ ರೋಗಕ್ಕೂ ಕಾರಣವಾಗುತ್ತವೆ ಎಂದು FSSAI ಮೂಲಗಳು ತಿಳಿಸಿವೆ.

ಈ ಸಂಬಂಧ ಇಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಸುದ್ಧಿಗೋಷ್ಠಿ ನಡೆಸಲಿದ್ದು, ಈ ಆಹಾರ ಪದಾರ್ಥಗಳು ಕುರಿತು ಮಹತ್ವದ ಘೋಷಣೆ ಮಾಡುವ ಸಾಧ್ಯತೆಗಳಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com