ಶಿವಮೊಗ್ಗದಲ್ಲಿ PM Modi ಪ್ರಚಾರ, ಇನ್ನೆರಡು ದಿನಗಳಲ್ಲಿ ರಾಜ್ಯದಲ್ಲಿ ಮಳೆ ಮುನ್ಸೂಚನೆ ಹವಾಮಾನ ಇಲಾಖೆ: ಈ ದಿನದ ಸುದ್ದಿ ಮುಖ್ಯಾಂಶಗಳು!

ಲೋಕಸಭಾ ಚುನಾವಣೆ ಪ್ರಚಾರದಲ್ಲಿ ತೊಡಗಿರುವ ಪ್ರಧಾನಿ ನರೇಂದ್ರ ಮೋದಿ ಇಂದು ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಭೇಟಿ ನೀಡಿದ್ದರು.
(ಸಂಗ್ರಹ ಚಿತ್ರ)
(ಸಂಗ್ರಹ ಚಿತ್ರ)online Desk

ಬೆಂಗಳೂರು: ಲೋಕಸಭಾ ಚುನಾವಣೆ ಪ್ರಚಾರದಲ್ಲಿ ತೊಡಗಿರುವ ಪ್ರಧಾನಿ ನರೇಂದ್ರ ಮೋದಿ ಇಂದು ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಭೇಟಿ ನೀಡಿದ್ದರು. ಇಲ್ಲಿನ ಫ್ರೀಡಂ ಪಾರ್ಕ್ ಮೈದಾನದಲ್ಲಿ ಕಾರ್ಯಕರ್ತರ ಬೃಹತ್ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು ರಾಜ್ಯದಲ್ಲಿ ಒಬ್ಬರು ಸಿಎಂ ಇಲ್ಲ. ಇಲ್ಲಿ ಶ್ಯಾಡೋ ಸಿಎಂ, ಆಕಾಂಕ್ಷಿ ಸಿಎಂ, ಸೂಪರ್ ಸಿಎಂ ಗಳಿದ್ದಾರೆ. ದೆಹಲಿಯಲ್ಲಿ ಕಲೆಕ್ಷನ್ ಸಿಎಂ ಅಂತಾ ಒಬ್ಬರಿದ್ದಾರೆ. ಕರ್ನಾಟಕದ ಜನರು ಕಾಂಗ್ರೆಸ್ ಸರ್ಕಾರದಿಂದ ಬೇಸತ್ತಿದ್ದು, ಎನ್ಡಿಎ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದು ನಿರ್ಧರಿಸಿದ್ದಾರೆ. ಇಲ್ಲಿ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಕೇಂದ್ರದ ಯೋಜನೆಗಳ ಲಾಭ ಸಿಗುವಂತಾಗಬೇಕು ಎಂದರು.

(ಸಂಗ್ರಹ ಚಿತ್ರ)
ರಾಹುಲ್ ಗಾಂಧಿ 'ಶಕ್ತಿ' ಹೇಳಿಕೆ ವಿರುದ್ಧ ಪ್ರಧಾನಿ ವಾಗ್ದಾಳಿ; ರಾಜ್ಯದಲ್ಲಿ ಸೂಪರ್ ಸಿಎಂ ಗಳಿದ್ದಾರೆ- ಮೋದಿ ಟೀಕೆ

ಈ ಮಧ್ಯೆ ಶಿವಮೊಗ್ಗದಲ್ಲಿ ಬಿಜೆಪಿ ಅಧಿಕೃತ ಅಭ್ಯರ್ಥಿ ಬಿವೈ ರಾಘವೇಂದ್ರ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವ ನಿಲುವು ತೆಗೆದುಕೊಂಡಿರುವ ಕೆಎಸ್ ಈಶ್ವರಪ್ಪ ಮನವೊಲಿಕೆಯಲ್ಲಿ ಆರ್ ಎಸ್ಎಸ್ ಸಹ ವಿಫಲವಾಗಿದೆ. ತಮ್ಮ ಪಟ್ಟನ್ನು ಸಡಿಸಲು ನಿರಾಕರಿಸಿರುವ ಈಶ್ವರಪ್ಪ, ಶಿವಮೊಗ್ಗದಲ್ಲಿ ನಡೆದ ಮೋದಿ ಕಾರ್ಯಕ್ರಮಕ್ಕೆ ಗೈರಾಗಿದ್ದರು ಹಾಗೂ ಗೆದ್ದ ನಂತರ ಮೋದಿ ಅವರನ್ನು ಭೇಟಿ ಮಾಡುವುದಾಗಿ RSS ನಾಯಕರಿಗೆ ಹೇಳಿದ್ದಾರೆ. ಈಮಧ್ಯೆ, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ಕೈತಪ್ಪಿರುವುದಕ್ಕೆ ಮಾಜಿ ಕೇಂದ್ರ ಸಚಿವ ಡಿವಿ ಸದಾನಂದ ಗೌಡ ಸಹ ಅಸಮಾಧಾನ ವ್ಯಕ್ತಪಡಿಸಿದ್ದು, ಪಕ್ಷದಲ್ಲಿನ ಬೆಳವಣಿಗೆಗಳ ಬಗ್ಗೆ ಶೀಘ್ರವೇ ಮನದಾಳದ ಮಾತುಗಳನ್ನು ಹಂಚಿಕೊಳ್ಳುವುದಾಗಿ ತಿಳಿಸಿದ್ದಾರೆ. ನನ್ನನ್ನು ಬೇರೆಯವರು ಸಂಪರ್ಕಿಸಿದ್ದು ನಿಜ, ನಮ್ಮ ಪಕ್ಷದ ನಾಯಕರು ಕೂಡ ನನ್ನನ್ನು ಸಂಪರ್ಕಿಸಿ ಚರ್ಚಿಸಿದ್ದೂ ನಿಜ ಎಂದು ಸದಾನಂದ ಗೌಡ ತಿಳಿಸಿದ್ದಾರೆ.

(ಸಂಗ್ರಹ ಚಿತ್ರ)
ಹನುಮಾನ್‌ ಚಾಲೀಸ ಹಾಕಿದ್ದಕ್ಕೆ ಹಲ್ಲೆ: ಮೂವರ ಬಂಧನ; ಗಾಯಾಳು ಅಂಗಡಿ ಮಾಲೀಕ ಹೇಳಿದ್ದೇನು? ತೇಜಸ್ವಿ ಸೂರ್ಯ ಆಕ್ರೋಶ

ನಮಾಜ್‌ ಮಾಡುವ ಸಮಯದಲ್ಲಿ ಹನುಮಾನ್‌ ಚಾಲೀಸ್‌ ಹಾಕಿದರೆಂಬ ಕಾರಣಕ್ಕೆ ಮೊಬೈಲ್‌ ಅಂಗಡಿ ಮಾಲೀಕನ ಮೇಲೆ ಐವರು ಯುವಕರು ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಹಲಸೂರು ಗೇಟ್‌ ಠಾಣೆ ವ್ಯಾಪ್ತಿಯಲ್ಲಿರುವ ನಗರತ್‌ಪೇಟೆಯಲ್ಲಿ ಈ ಘಟನೆ ವರದಿಯಾಗಿದ್ದು, ಭಕ್ತಿಗೀತೆ ಹಾಡುಗಳನ್ನು ಹಾಕಿದ್ದಕ್ಕೆ ಐದಾರು ಮುಸ್ಲಿಂ ಯುವಕರು ಅಂಗಡಿಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಬಳಿಕ ಮಾಲಿಕ ಮುಖೇಶ್ ನನ್ನು ಅಂಗಡಿಯಿಂದ ಹೊರ ಎಳೆದು ಮನಸೋ ಇಚ್ಚೆ ಹಲ್ಲೆ ನಡೆಸಿದ್ದಾರೆ. ಅದರಿಂದ ಮುಖೇಶ್‌ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಘಟನೆ ಸಂಬಂಧ 3 ಯುವಕರನ್ನು ಬಂಧಿಸಲಾಗಿದೆ.

ಬಾಲ್ಯವಿವಾಹಕ್ಕೆ ತುತ್ತಾಗಿದ್ದ ಬಿಹಾರ ಮೂಲದ ಅಪ್ರಾಪ್ತ ಬಾಲಕಿಯೊಬ್ಬಳು ನಗರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಆಕೆಯ ಪತಿಯನ್ನು ಬಂಧಿಸಲಾಗಿದೆ. ನೀಲಂ ಕುಮಾರಿ ಆತ್ಮಹತ್ಯೆ ಮಾಡಿಕೊಂಡ ಬಾಲಕಿಯಾಗಿದ್ದು, ಆಕೆಯ ಪತಿ ಬಿಹಾರ ಮೂಲದ ವಿಶಾಲ್ ಕುಮಾರ್ ಸಹಾನಿ ಎಂಬಾತನನ್ನು ಅಪ್ರಾಪ್ತಳನ್ನು ಮದುವೆಯಾಗಿ, ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಬಂಧಿಸಲಾಗಿದೆ. ಆರೋಪಿ ಪತಿ ಒಂದು ವರ್ಷದ ಹಿಂದೆ ಬಿಹಾರದಿಂದ ಬೆಂಗಳೂರಿಗೆ ಬಂದು ಪೇಂಟರ್ ಕೆಲಸ ಮಾಡಿಕೊಂಡಿದ್ದ. 2023ರ ಫೆಬ್ರುವರಿಯಲ್ಲಿ ನೀಲಂ ಕುಮಾರಿಯನ್ನು ಮದುವೆಯಾಗಿದ್ದ ಆತ 20 ದಿನಗಳ ಹಿಂದಷ್ಟೇ ಬೆಂಗಳೂರಿಗೆ ಕರೆತಂದಿದ್ದ.

(ಸಂಗ್ರಹ ಚಿತ್ರ)
Ramzan: ದಾವಣಗೆರೆಯಲ್ಲಿ ಪಾನಿಪೂರಿ ಸೇವಿಸಿ ಅಸ್ವಸ್ಥನಾಗಿದ್ದ ಬಾಲಕ ಚಿಕಿತ್ಸೆ ಫಲಿಸದೆ ಸಾವು

ರಂಜಾನ್ ಹಬ್ಬ ಹಿನ್ನೆಲೆ ಉಪವಾಸ ಬಳಿಕ ಪಾನಿಪೂರಿ ಸೇವಿಸಿ 19 ಮಕ್ಕಳು ಅಸ್ವಸ್ಥರಾದ ಘಟನೆ ದಾವಣಗೆರೆಯಲ್ಲಿ ವರದಿಯಾಗಿದೆ. ಜಿಲ್ಲೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಬಾಲಕನೋರ್ವ ಇಂದು ಮೃತಪಟ್ಟಿದ್ದಾನೆ. ಮಾರ್ಚ್ 15ರಂದು ದಾವಣಗೆರೆಯ ಹರಿಹರ ತಾಲೂಕಿನ ಮಲೆಬೆನ್ನೂರಿನ ಜಾಮೀಯಾ ಮಸೀದಿ ಬಳಿ 19 ಮಂದಿ ಪಾನಿಪುರಿ ಸೇವಿಸಿದ್ದರು. ಘಟನೆ ಬಳಿಕ ಪಾನಿಪುರಿ ಅಂಗಡಿ‌ ಮಾಲೀಕ ಪರಾರಿ ಆಗಿದ್ದಾನೆ. ಮಲೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

(ಸಂಗ್ರಹ ಚಿತ್ರ)
2-3 ದಿನಗಳಲ್ಲಿ ದಕ್ಷಿಣ ಒಳನಾಡು, ಮಲೆನಾಡಿನಲ್ಲಿ ಮಳೆ ಸಾಧ್ಯತೆ: IMD

2-3 ದಿನಗಳಲ್ಲಿ ರಾಜ್ಯದ ಹಲವು ಭಾಗಗಳಲ್ಲಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ದಕ್ಷಿಣ ಒಳನಾಡು ಮತ್ತು ಮಲೆನಾಡು ಪ್ರದೇಶಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ತಮಿಳುನಾಡಿನ ಬಳಿ ಕಾಣಿಸಿಕೊಂಡಿರುವ ಟ್ರಫ್ (ವಾತಾವರಣದಲ್ಲಿ ಗಾಳಿಯ ಚಲನೆಯಿಂದ ಉಂಟಾಗುವ ಪರಿಣಾಮ) ಪರಿಣಾಮ ಕರ್ನಾಟಕದ ಮೇಲೂ ಬೀರಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com