ನಗರತ್ ಪೇಟೆ ಹಲ್ಲೆ ಪ್ರಕರಣ
ನಗರತ್ ಪೇಟೆ ಹಲ್ಲೆ ಪ್ರಕರಣ

ನಗರತ್ ಪೇಟೆ ಹಲ್ಲೆ; ತೇಜಸ್ವಿ ಸೂರ್ಯ, ಶೋಭಾ ಕರಂದ್ಲಾಜೆ ವಶಕ್ಕೆ, ಕಾಂಗ್ರೆಸ್ ನಿಂದ ಕುಕ್ಕರ್, ಸೀರೆ ಹಂಚಿಕೆ: HDK ಆರೋಪ: ಈ ದಿನದ ಸುದ್ದಿ ಮುಖ್ಯಾಂಶಗಳು 19-03-2024

1. ನಗರತ್ ಪೇಟೆ ಹಲ್ಲೆ ಪ್ರಕರಣ; ಬಿಜೆಪಿ ಪ್ರತಿಭಟನೆ, ತೇಜಸ್ವಿ ಸೂರ್ಯ, ಶೋಭಾ ಕರಂದ್ಲಾಜೆ ಸೇರಿ ಹಲವರ ಬಂಧನ

ಬೆಂಗಳೂರಿನ ನಗರತ್ಪೇಟೆಯಲ್ಲಿ ಮೊಬೈಲ್ ಅಂಗಡಿಯಲ್ಲಿ ಹನುಮಾನ್ ಚಾಲಿಸಾ ಹಾಡು ಹಾಕಿದ್ದಕ್ಕೆ ಯುವಕನ ಮೇಲೆ ಹಲ್ಲೆ ನಡೆಸಿರುವ ಘಟನೆಗೆ ಸಂಬಂಧಿಸಿದಂತೆ ನಗರದಲ್ಲಿಂದು ಹಿಂದೂಪರ ಸಂಘಟನೆಗಳು ಮೆರವಣಿಗೆಯೊಂದಿಗೆ ಪ್ರತಿಭಟನೆ ನಡೆಸಿದವು. ಇದರಿಂದಾಗಿ ಕೆಲಹೊತ್ತು ಆ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ಬಿಜೆಪಿ ನಾಯಕರಾದ ಸುರೇಶ್ ಕುಮಾರ್, ಶೋಭಾ ಕರಂದ್ಲಾಜೆ, ತೇಜಸ್ವಿ ಸೂರ್ಯ ಕೂಡ ಮೆರವಣಿಗೆಯಲ್ಲಿ ಭಾಗಿಯಾಗಿದ್ದರು. ಪರಿಸ್ಥಿತಿ ಉದ್ವಿಗ್ನಗೊಳ್ಳುತ್ತಿದ್ದಂತೆಯೇ ಪೊಲೀಸರು ಬಿಜೆಪಿ ನಾಯಕರು ಸೇರಿದಂತೆ ಹಲವು ಹಿಂದೂಪರ ಸಂಘಟನೆಗಳ ಕಾರ್ಯಕರ್ತರನ್ನು ವಶಕ್ಕೆ ಪಡೆದರು. ಘಟನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸುರೇಶ್ ಕುಮಾರ್, ಇದು ಉದ್ದೇಶ ಪೂರ್ವಕವಾಗಿ ಮಾಡಿರುವ ಹಲ್ಲೆಯಾಗಿದೆ. ಒಟ್ಟಾರೆಯಾಗಿ ಸಮಾಜದ ಶಾಂತಿ ಕದಡಿದಂತಾಗಿದೆ. ಹಲ್ಲೆ ಮಾಡಿದವರಿಗೆ ಸೂಕ್ತ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದರು. ಈ ಮಧ್ಯೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ನಿನ್ನೆ ಮೂವರನ್ನು ಬಂಧಿಸಲಾಗಿತ್ತು.

2. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಕುಕ್ಕರ್, ಸೀರೆ ಹಂಚಿಕೆ: ಎಚ್ಡಿಕೆ ಗಂಭೀರ ಆರೋಪ

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಮತದಾರರಿಗೆ ಕಾಂಗ್ರೆಸ್ ಪಕ್ಷ ಕುಕ್ಕರ್ ಆಮಿಷವೊಡ್ಡುತ್ತಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್. ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ. ಕ್ಷೇತ್ರದಲ್ಲಿ ನ್ಯಾಯಯುತ ಮತದಾನಕ್ಕಾಗಿ ಅರಸೇನಾ ಪಡೆ ನಿಯೋಜಿಸಬೇಕೆಂದು ಅವರು ಒತ್ತಾಯಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಡಿಕೆ ಸುರೇಶ್ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, ನ್ಯಾಯಯುತವಾಗಿ ಚುನಾವಣೆ ನಡೆಸಲು ಧೈರ್ಯವಿಲ್ಲದ ಜಿಲ್ಲಾಧಿಕಾರಿ, ಸಿಇಒ ಹಾಗೂ ಎಸ್ ಪಿಯನ್ನು ತೆಗೆದುಹಾಕಬೇಕು ಎಂದು ಚುನಾವಣಾ ಆಯೋಗಕ್ಕೆ ಒತ್ತಾಯಿಸಿದರು. ಈಗಾಗಲೇ ಒಂದು ಸುತ್ತಿನ ಕುಕ್ಕರ್, ಸೀರೆ ಸೇರಿದಂತೆ ಇತರೆ ವಸ್ತುಗಳ ವಿತರಣೆ ಪೂರ್ಣಗೊಂಡಿದೆ ಎಂದು ಅವರು ಆರೋಪಿಸಿದರು. ಮತದಾರರಿಗೆ ಕುಕ್ಕರ್ ವಿತರಿಸುತ್ತಿರುವ ವಿಡಿಯೋಗಳು ಮತ್ತು ಫೋಟೋಗಳನ್ನು ತೋರಿಸಿದ ಕುಮಾರಸ್ವಾಮಿ, ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಈ ಬಾರಿಯ ಚುನಾವಣೆಯಲ್ಲಿ ಒಂದೆಡೆ ಅಧಿಕಾರ ದುರುಪಯೋಗ, ಮತ್ತೊಂದೆಡೆ ಹಣಬಲ, ಹಣಬಲ, ಅಧಿಕಾರಿಗಳ ನೆರವಿನಿಂದ ಚುನಾವಣೆ ಗೆಲ್ಲಲು ಕಾಂಗ್ರೆಸ್‌ ಮುಂದಾಗಿದೆ. ಈ ಬಗ್ಗೆ ಪರಿಶೀಲಿಸುವಂತೆ ಮುಖ್ಯ ಚುನಾವಣಾ ಆಯುಕ್ತರು ಒತ್ತಾಯಿಸುವುದಾಗಿ ತಿಳಿಸಿದರು. ಒಕ್ಕಲಿಗ ಪ್ರಾಬಲ್ಯವಿರುವ ಈ ಭಾಗದಲ್ಲಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಅಳಿಯ, ಖ್ಯಾತ ಹೃದಯ ಶಸ್ತ್ರಚಿಕಿತ್ಸಕ ಸಿ ಎನ್ ಮಂಜುನಾಥ್ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿದ್ದಾರೆ.

ನಗರತ್ ಪೇಟೆ ಹಲ್ಲೆ ಪ್ರಕರಣ
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರಿಗೆ ಆಮಿಷ; ಕಾಂಗ್ರೆಸ್ ನಿಂದ ಕುಕ್ಕರ್ ವಿತರಣೆ: HD ಕುಮಾರಸ್ವಾಮಿ ಆರೋಪ

3. Loksabha Election 2024: ಹುಬ್ಬಳ್ಳಿ, ಮಂಡ್ಯದಲ್ಲಿ ನೀತಿ ಸಂಹಿತೆ, ಅಧಿಕಾರಿಗಳಿಂದ 1 ಕೋಟಿ ರೂ ವಶ

ಲೋಕಸಭಾ ಚುನಾವಣೆ ಸಮೀಪದಲ್ಲಿರುವಂತೆಯೇ ಅಕ್ರಮ ಹಣ ಸಾಗಾಟದ ವಿರುದ್ದ ಚುನಾವಣಾ ಅಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದು, ಮಂಡ್ಯ ಜಿಲ್ಲೆಯಲ್ಲಿ ದಾಖಲೆ ಇಲ್ಲದೆ ಸಾಗಿಸಲಾಗುತ್ತಿದ್ದ 1 ಕೋಟಿ ರೂ. ನಗದು ಹಣ ಜಪ್ತಿ ಮಾಡಿದ್ದಾರೆ. ಮದ್ದೂರು ತಾಲೂಕಿನ ಕೊಂಗಬೋರನದೊಡ್ಡಿ ಬಳಿಯಲ್ಲಿ ಗಿರೀಶ್ ಎಂಬುವರ ಕಾರನ್ನು ತಪಾಸಣೆ ನಡೆಸಿದಾಗ ಒಂದು ಕೋಟಿ ರೂಪಾಯಿ ಪತ್ತೆಯಾಗಿದೆ. ಈ ಬಗ್ಗೆ ಗಿರೀಶ್ ಅವರು ಸೂಕ್ತ ಉತ್ತರ, ದಾಖಲೆ ನೀಡದ ಕಾರಣ ಹಣವನ್ನು ಜಪ್ತಿ ಮಾಡಿದ್ದಾರೆ. ಮತ್ತೊಂದೆಡೆ ಹುಬ್ಬಳ್ಳಿಯ ಸುಳ್ಯ ರಸ್ತೆ ಚೆಕ್ ಪೋಸ್ಟ್‌ ನಲ್ಲಿ 3 ಲಕ್ಷಕ್ಕೂ ಅಧಿಕ ಮೌಲ್ಯದ ನಗದು ವಶಪಡಿಸಿಕೊಳ್ಳಲಾಗಿದೆ. ಸೋಮವಾರ ಸಂಜೆ 6 ಗಂಟೆ ಸುಮಾರಿಗೆ ಸುಳ್ಯ ರಸ್ತೆಯಲ್ಲಿ ಕಾರೊಂದನ್ನು ಪರಿಶೀಲಿಸಿದಾಗ ಓಂ ಪ್ರಕಾಶ್ ಎಂಬುವವರಿಗೆ ಸೇರಿದ 3.82,000 ರೂ. ನಗದು ಪತ್ತೆಯಾಗಿದೆ ಎಂದು ಹುಬ್ಬಳ್ಳಿ ಧಾರವಾಡ ಕೇಂದ್ರ ಸಹಾಯಕ ಚುನಾವಣಾಧಿಕಾರಿ ಈಶ್ವರ ಉಳ್ಳಾಗಡ್ಡಿ ತಿಳಿಸಿದ್ದಾರೆ.

4. ಮೇಘನಾ ಫುಡ್ಸ್ ಗ್ರೂಪ್ ಮೇಲೆ ಐಟಿ ದಾಳಿ

ಮೇಘನಾ ಫುಡ್ಸ್ ಗ್ರೂಪ್ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ಮಂಗಳವಾರ ದಾಳಿ ನಡೆಸಿದ್ದು, ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ. ನಗರದ ಕೋರಮಂಗಲ, ಇಂದಿರಾನಗರ, ಜಯನಗರ ಸೇರಿ ಹಲವೆಡೆ ಇರುವ ಕಚೇರಿಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ, ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಮೇಘನಾ ಫುಡ್ಸ್ ಹೆಸರಿನಲ್ಲಿ ಹೋಟೆಲ್ ಮತ್ತು ರೆಸ್ಟೋರೆಂಟ್ ಉದ್ಯಮ ನಡೆಸುತ್ತಿರುವ ಕಂಪನಿಯ ಆದಾಯ ತೆರಿಗೆ ಪಾವತಿಯಲ್ಲಿ ಭಾರೀ ವ್ಯತ್ಯಾಸ ಕಂಡು ಬಂದ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com