ಮಧುರೈ ನಲ್ಲಿ ಶೋಭಾ ಕರಂದ್ಲಾಜೆ ವಿರುದ್ಧ ಕೇಸ್; ಧಾರ್ಮಿಕ, ಧರ್ಮಾದಾಯ ದತ್ತಿಗಳ ಮಸೂದೆ ವಾಪಸ್: ಈ ದಿನದ ಸುದ್ದಿ ಮುಖ್ಯಾಂಶಗಳು 20-03-2024

ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಶಂಕಿತ ಆರೋಪಿ ತಮಿಳುನಾಡಿನವನು ಎಂದು ಹೇಳಿಕೆ ನೀಡಿದ್ದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಮದುರೈ ನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರonline desk

ಬೆಂಗಳೂರು: ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಶಂಕಿತ ಆರೋಪಿ ತಮಿಳುನಾಡಿನವನು ಎಂದು ಹೇಳಿಕೆ ನೀಡಿದ್ದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಮದುರೈ ನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ತಮಿಳುನಾಡು ಸಿಎಂ ಸ್ಟಾಲಿನ್ ಶೋಭಾ ಕರಂದ್ಲಾಜೆ ಅವರ ಹೇಳಿಕೆಯನ್ನು ಖಂಡಿಸಿದ್ದರು. ತಮ್ಮ ಹೇಳಿಕೆ ವಿವಾದದ ಸ್ವರೂಪ ಪಡೆಯುತ್ತಿದ್ದಂತೆಯೇ ಶೋಭಾ ಕರಂದ್ಲಾಜೆ ಕ್ಷಮೆ ಕೋರಿದ್ದಾರೆ. 'ಆಜಾನ್' ಸಮಯದಲ್ಲಿ ಹನುಮಾನ್ ಚಾಲೀಸಾ ಹಾಡು ಹಾಕಿದ್ದ ಅಂಗಡಿ ಮಾಲಿಕನ ಮೇಲೆ ಹಲ್ಲೆ ನಡೆಸಿದ ಪ್ರಕರಣದ ಸಂಬಂಧ ಬಿಜೆಪಿ ಸಂಸದರು ನಿನ್ನೆ ನಗರದ ನಗರ್ತಪೇಟೆಯಲ್ಲಿ ನಡೆಸಿದ ಪ್ರತಿಭಟನೆ ವೇಳೆ ಶೋಭಾ ಕರಂದ್ಲಾಜೆ ಈ ಹೇಳಿಕೆ ನೀಡಿದ್ದರು.

ಸಂಗ್ರಹ ಚಿತ್ರ
ಬೆಂಗಳೂರು: ಬೆಡ್‌ರೂಂ ಕಿಟಕಿ ಹಾಕದೆ ಕಾಮಕೇಳಿ; ದಂಪತಿ ವಿರುದ್ಧ ಮಹಿಳೆ ಪೊಲೀಸರಿಗೆ ದೂರು!

ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಮಸೂದೆಯನ್ನು ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ವಾಪಸ್ ಕಳುಹಿಸಿದ್ದಾರೆ. ‘ಹೈಕೋರ್ಟ್‌ನ ಧಾರವಾಡ ಪೀಠ ರಿಟ್‌ ಅರ್ಜಿಯೊಂದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಕಾಯ್ದೆ –1997 ಮತ್ತು ಅದಕ್ಕೆ ತಂದಿರುವ ತಿದ್ದುಪಡಿಗಳನ್ನು ಈಗಾಗಲೇ ವಜಾ ಮಾಡಿದೆ. ಹೈಕೋರ್ಟ್‌ ನೀಡಿದ್ದ ಈ ತೀರ್ಪು ಪ್ರಶ್ನಿಸಿ ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ. ಹೈಕೋರ್ಟ್‌ ನೀಡಿದ್ದ ತೀರ್ಪಿಗೆ ಸುಪ್ರೀಂ ಕೋರ್ಟ್‌ ತಡೆಯಾಜ್ಞೆ ನೀಡಿದ್ದು, ಅಂತಿಮ ವಿಚಾರಣೆ ಬಾಕಿ ಇದೆ. ಈ ಹಂತದಲ್ಲಿ ತಿದ್ದುಪಡಿ ಮಾಡಬಹುದೇ ಎಂಬ ಬಗ್ಗೆ ಹೆಚ್ಚಿನ ಸ್ಪಷ್ಟೀಕರಣದ ಅಗತ್ಯವಿದೆ’ ಎಂದು ರಾಜ್ಯಪಾಲರು ಕಾರಣ ನೀಡಿದ್ದಾರೆ.

ಸಂಗ್ರಹ ಚಿತ್ರ
ನಮ್ಮ ಮೆಟ್ರೋ ಅಧಿಕಾರಿಯಿಂದ ಮಹಿಳಾ ಸೆಕ್ಯೂರಿಟಿಗಳಿಗೆ ಲೈಂಗಿಕ ಕಿರುಕುಳ ಆರೋಪ; ಎಫ್ಐಆರ್ ದಾಖಲು

ನಮ್ಮ ಮೆಟ್ರೋದಲ್ಲಿ ಮತ್ತೊಂದು ಲೈಂಗಿಕ ಕಿರುಕುಳ ಪ್ರಕರಣ ವರದಿಯಾಗಿದ್ದು, ಸಿಬ್ಬಂದಿಯೊಬ್ಬ ಮಹಿಳೆ ಎದುರು ಫ್ಲಾಟ್ ಫಾರ್ಮ್ ನಲ್ಲೇ ಅಸಭ್ಯವಾಗಿ ವರ್ತಿಸಿರುವ ದೃಶ್ಯಗಳು ಸ್ಥಳೀಯರ ಮೊಬೈಲ್ನಲ್ಲಿ ಸೆರೆಯಾಗಿದೆ. ಜಾಲಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಮಹಿಳೆ ನಮ್ಮ ಮೆಟ್ರೋಗೆ ದೂರು ನೀಡಿದ್ದಾರೆ. ಆದರೆ ನಮ್ಮ ಮೆಟ್ರೋ ಸಿಬ್ಬಂದಿ ಯಾವುದೇ ಕ್ರಮಕೈಗೊಳ್ಳದ ಹಿನ್ನೆಲ್ಲೆಯಲ್ಲಿ ಮಹಿಳೆ ಪೊಲೀಸರಿಗೆ ಟ್ಯಾಗ್ ಮಾಡಿ ಕ್ರಮಕ್ಕೆ ಆಗ್ರಹಿಸಿದ್ದಾರೆ. ದೂರಿಗೆ ಪ್ರತಿಕ್ರಿಯಿಸಿರುವ ಬಿಎಂಆರ್ ಸಿಎಲ್, ಘಟನೆ ಕುರಿತು ವಿವರವಾದ ತನಿಖೆಗಾಗಿ ಭದ್ರತಾ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಮಹಿಳಾ ಪ್ರಯಾಣಿಕರ ಸುರಕ್ಷತೆ ಮತ್ತು ಭದ್ರತೆಗೆ ಸಂಸ್ಥೆ ಒತ್ತು ನೀಡುತ್ತದೆ ಎಂದು ಹೇಳಿದೆ.

ಸಂಗ್ರಹ ಚಿತ್ರ
ನಕಲಿ ದಾಖಲೆ ಮೇಲೆ ಸಾಲ ನೀಡಿಕೆ: ಸಿಂಡಿಕೇಟ್ ಬ್ಯಾಂಕ್ ವ್ಯವಸ್ಥಾಪಕ ಸೇರಿ ಐವರಿಗೆ 5 ವರ್ಷ ಕಠಿಣ ಜೈಲು, 62 ಲಕ್ಷ ರೂ. ದಂಡ!

ಖಾಸಗಿ ಬ್ಯಾಂಕ್ ಸಿಬ್ಬಂದಿ ಕಿರುಕುಳಕ್ಕೆ ಮನನೊಂದ ಒಂದೇ ಕುಟುಂಬದ ಮೂವರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಜೆಪಿ ನಗರದಲ್ಲಿ ನಡೆದಿದೆ. ಉಡುಪಿ ಜಿಲ್ಲೆಯ ಅಂಬಲಪಾಡಿ ಮೂಲದ ಕುಟುಂಬ ಬೆಂಗಳೂರಿನಲ್ಲಿ ವಾಸವಾಗಿತ್ತು. ನಿನ್ನೆ ಸಂಜೆ ಬ್ಯಾಂಕ್ ಸಿಬ್ಬಂದಿಗಳು ಮನೆಗೆ ಆಗಮಿಸಿ ಸಾಲದ ಹಣ ಮರುಪಾವತಿಸುವಂತೆ ಒತ್ತಡ ಹೇರಿದ್ದರು. ಗಂಡ ಮನೆಯಲ್ಲಿರದ ವೇಳೆ ಬ್ಯಾಂಕ್ ಸಿಬ್ಬಂದಿ ಬಂದಿದ್ದರು. ಸಿಬ್ಬಂದಿಯ ಬೆದರಿಕೆಗೆ ಹೆದರಿ ಇಬ್ಬರು ಮಕ್ಕಳೊಂದಿಗೆ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮತ್ತೊಂದು ಪ್ರಕರಣದಲ್ಲಿ, ಸಿಂಡಿಕೇಟ್ ಬ್ಯಾಂಕ್ ವ್ಯವಸ್ಥಾಪಕ ನಕಲಿ ದಾಖಲೆಗೆ ಸಾಲ ನೀಡಿದ್ದ ಪ್ರಕರಣದಲ್ಲಿ ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ನೀಡಿದ್ದು, ಪ್ರಕರಣದ ಪ್ರಮುಖ ಅಪರಾಧಿಗಳಾದ ವ್ಯವಸ್ಥಾಪಕ ಸೇರಿ ಐವರಿಗೆ 5 ವರ್ಷ ಕಠಿಣ ಕಾರಾಗೃಹ ಜೈಲು ಶಿಕ್ಷೆ ವಿಧಿಸಿ, 62.30 ಲಕ್ಷ ರೂ ದಂಡ ವಿಧಿಸಿದೆ. ಹಿರಿಯ ವ್ಯವಸ್ಥಾಪಕ ಸತ್ಯಬಾಬು, ಇತರ ಅಪರಾಧಿಗಳೊಂದಿಗೆ ಸೇರಿಕೊಂಡು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ನಕಲಿ ದಾಖಲೆ ಪಡೆದು ಸಾಲ ಮಂಜೂರು ಮಾಡಿದ್ದರು.

ಸಂಗ್ರಹ ಚಿತ್ರ
ಧಾರವಾಡ: ಅಡುಗೆ ಮನೆಯಲ್ಲಿ ಗ್ಯಾಸ್ ಸೋರಿಕೆ; ಗೃಹಿಣಿ ಸಜೀವ ದಹನ

ಅಡುಗೆ ಮನೆಯಲ್ಲಿದ್ದ ಗ್ಯಾಸ್‌ ಸಿಲಿಂಡರ್‌ನಿಂದ ಅನಿಲ ಸೋರಿಕೆಯಾಗಿ ಮನೆಗೆ ಬೆಂಕಿ ಹತ್ತಿಕೊಂಡು ಆ ಬೆಂಕಿಯಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ಧಾರವಾಡದಲ್ಲಿ ವರದಿಯಾಗಿದೆ. ಬೆಳಗ್ಗೆ ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಗೆ ಹೊರಗೆ ಬರಲು ಸಾಧ್ಯವಾಗದೇ ಆಕೆ ಮೃತಪಟ್ಟಿದ್ದಾರೆ. ಆಕೆಯನ್ನು ರಕ್ಷಿಸಲು ಇನ್ನೂ ಕೆಲವು ಮಹಿಳೆಯರು ಮುಂದಾಗಿದ್ದು, ಅವರಿಗೂ ಸುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಂಗ್ರಹ ಚಿತ್ರ
Weather Forecast: ನಾಳೆ, ನಾಡಿದ್ದು ಬೆಂಗಳೂರಿನಲ್ಲಿ ಮಳೆ; ಬಿಸಿಲಿನ ಬೇಗೆಗೆ ತಂಪೆರೆವ ಸೂಚನೆ

ನಗರದಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ಝಳ ಏರುತ್ತಿದ್ದು, ಮಾರ್ಚ್ 21 ಮತ್ತು 22 ರಂದು ಲಘು ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ನೈಋತ್ಯ ಮುಂಗಾರು ಅವಧಿಯಲ್ಲಿ ಮೇ ತಿಂಗಳಿನಿಂದ ಭಾರಿ ಮಳೆಯಾಗುವ ನಿರೀಕ್ಷೆಯಿದೆ. ಹವಾಮಾನ ಇಲಾಖೆ ಪ್ರಕಾರ, ಮಾರ್ಚ್ 21 ರಿಂದ 23ರ ನಡುವೆ ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣವಿರಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com