ಕುಮಟಾ: ಅಘನಾಶಿನಿ ನದಿಗೆ ಅಡ್ಡಲಾಗಿ ನಿರ್ಮಿಸುತ್ತಿದ್ದ ಸೇತುವೆ ಕುಸಿತ, ಅಧಿಕಾರಿಗಳಿಗೆ ಗ್ರಾಮಸ್ಥರ ಹಿಡಿಶಾಪ!

ಕುಮಟಾ ತಾಲ್ಲೂಕಿನ ಮಿರ್ಜಾನ್–ಹೆಗಡೆ ತಾರಿಬಾಗಿಲ ಗ್ರಾಮಗಳನ್ನು ಸಂಪರ್ಕಿಸಲು ಅಘನಾಶಿನಿ ನದಿಗೆ ಅಡ್ಡಲಾಗಿ ನಿರ್ಮಿಸುತ್ತಿದ್ದ ಸೇತುವೆಯ ಕುಸಿದು ಬಿದ್ದಿದ್ದು, ಈ ಮೂಲಕ ಜನರ ಬಹುವರ್ಷಗಳ ಬೇಡಿಕೆ ಮಣ್ಣು ಪಾಲಾಗಿದೆ.
ಕುಸಿತಿರುವ ಸೇತುವೆ.
ಕುಸಿತಿರುವ ಸೇತುವೆ.
Updated on

ಕುಮಟಾ (ಉತ್ತರ ಕನ್ನಡ): ಕುಮಟಾ ತಾಲ್ಲೂಕಿನ ಮಿರ್ಜಾನ್–ಹೆಗಡೆ ತಾರಿಬಾಗಿಲ ಗ್ರಾಮಗಳನ್ನು ಸಂಪರ್ಕಿಸಲು ಅಘನಾಶಿನಿ ನದಿಗೆ ಅಡ್ಡಲಾಗಿ ನಿರ್ಮಿಸುತ್ತಿದ್ದ ಸೇತುವೆಯ ಕುಸಿದು ಬಿದ್ದಿದ್ದು, ಈ ಮೂಲಕ ಜನರ ಬಹುವರ್ಷಗಳ ಬೇಡಿಕೆ ಮಣ್ಣು ಪಾಲಾಗಿದೆ.

ಹೆಗಡೆ, ತಾರಿಬಾಗಿಲು ಸೇರಿ ನಾನಾ ಭಾಗದ ಜನರ ಹಲವು ವರ್ಷಗಳ ಬೇಡಿಕೆಯ ನಂತರ ಹೆಗಡೆ-ತಾರಿಬಾಗಿಲು ಗ್ರಾಮಗಳ ಸಂಪರ್ಕಿಸಲು ಸೇತುವೆ ಕಾಮಗಾರಿಯನ್ನು ಒಂದು ವರ್ಷದ ಹಿಂದೆ ಆರಂಭಿಸಲಾಗಿತ್ತು. ಆದರೆ, ಬುಧವಾರ ಮಧ್ಯಾಹ್ನ ಸೇತುವೆಯ ಮಧ್ಯಭಾಗ ಏಕಾಏಕಿ ಕುಸಿದು ಬಿದ್ದಿದೆ.

ಪಿಲ್ಲರ್‌ಗಳ ನಡುವೆ ಸೇತುವೆಗೆ ಹಾಕಲಾಗಿದ್ದ ಸ್ಲ್ಯಾಬ್‌ಗಳು ಕುಸಿತವಾಗಿವೆ. ನಿರ್ಮಾಣ ಕಾರ್ಯ ನಡೆಯುತ್ತಿದ್ದ ವೇಳೆಯೇ ಕುಸಿದುಬಿದ್ದ ಪರಿಣಾಮ ಸೇತುವೆ ಕೆಳಗಿದ್ದ ಟ್ರಕ್, ಜೆಸಿಬಿ ಹಾಗೂ ಕಾರು ಜಖಂ ಆಗಿವೆ. ಆದರೆ, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸೇತುವೆಯ ಕಳಪೆ ಕಾಮಗಾರಿಯಿಂದಲೇ ಸೇತುವೆ ಕುಸಿತಗೊಂಡಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ಥಳೀಯ ಕನ್ನಡಪರ ಹೋರಾಟಗಾರ ಭಾಸ್ಕರ್ ಪಟಗಾರ್ ಮಾತನಾಡಿ, ಮೂರು ಗರ್ಡರ್‌ಗಳು ಕುಸಿದು ಸೇತುವೆಯೂ ಕುಸಿದಿದೆ. ಅದೃಷ್ಟವಶಾತ್, ಈ ಸಮಯದಲ್ಲಿ ಸೇತುವೆಯ ಮೇಲೆ ಕೆಲಸ ಮಾಡುವ ಕಾರ್ಮಿಕರು ಊಟಕ್ಕೆ ಹೋಗಿದ್ದರು. ಒಂದು ವೇಳೆ ಈ ಸಮಯದಲ್ಲಿ ಕೆಲಸ ಮಾಡುತ್ತಿದ್ದರೆ, ಪ್ರಾಣ ಹಾನಿಗಳು ಸಂಭವಿಸುತ್ತಿತ್ತು. ಗುಣಮಟ್ಟವಿಲ್ಲದ ಕಾಮಗಾರಿಗೆ ಅಮಾಯಕರು ಪ್ರಾಣ ತೆರಬೇಕಿತ್ತು ಎಂದು ಗುತ್ತಿಗೆದಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಹಲವಾರು ಸೇತುವೆಗಳನ್ನು ನಿರ್ಮಿಸಿರುವ ಕುಂದಾಪುರದ ಡಿ'ಕೋಸ್ಟಾ ಕಂಪನಿಯು ಈ ಯೋಜನೆಯನ್ನು ಕೈಗೆತ್ತಿಕೊಂಡಿತ್ತು ಎಂದು ತಿಳಿದುಬಂದಿದೆ.

ಸೇತುವೆ ನಿರ್ಮಾಣಕ್ಕಾಗಿ ಹಲವು ಬಾರಿ ಪ್ರತಿಭಟಿಸಿ, ಆಂದೋಲನ ನಡೆಸಿ ಸರ್ಕಾರಕ್ಕೆ ಮನವಿಗಳನ್ನು ಸಲ್ಲಿಸಿದ್ದೆವು. ಕೋಟ ಶ್ರೀನಿವಾಸ ಪೂಜಾರಿ ಅವರು ಜಿಲ್ಲಾ ಸಚಿವರಾದಾಗ ಸೇತುವೆಗೆ 18.20 ಕೋಟಿ ರೂ. ಮಂಜೂರು ಮಾಡಿದ್ದರು ಎಂದು ಹೆಗಡೆ ನಿವಾಸಿ ಮಂಜುನಾಥ ಪಟಗಾರ ಹೇಳಿದ್ದಾರೆ.

ಕುಸಿತಿರುವ ಸೇತುವೆ.
Kosi Bridge Collapse: ಬಿಹಾರದಲ್ಲಿ ನಿರ್ಮಾಣ ಹಂತದ ಸೇತುವೆ ಕುಸಿತ, 1 ಸಾವು, 9 ಮಂದಿಗೆ ಗಾಯ

ಮತ್ತೋರ್ವ ಹೋರಾಟಗಾರ ರಾಘವೇಂದ್ರ ಗುಂಗಾ ಮಾತನಾಡಿ, ಸೇತುವೆ ನಿರ್ಮಾಣವಾದರೆ ಕುಮಟಾದಿಂದ ಮಿರ್ಜಾನ್ ವರೆಗಿನ ಸುಮಾರು 11 ಕಿ.ಮೀ ನಡೆದು ಹೋಗುವ ಸಂಕಷ್ಟ ದೂರಾಗುತ್ತಿತ್ತು. ನಿರ್ಮಾಣ ಕಾಮಗಾರಿ ಕಳಪೆಯಾಗಿದೆ ಎಂದು ನಮ್ಮ ಗ್ರಾಮಸ್ಥರು ಹೇಳುತ್ತಲೇ ಇದ್ದರು. ಅನಾಹುತ ಸಂಭವಿಸುತ್ತದೆ ಎಂದೂ ಎಚ್ಚರಿಕೆ ನೀಡಿತ್ತು. ಗ್ರಾಮಸ್ಥರ ಮಾತಿಗೆ ಕಿವಿಗೊಡದ ಅಧಿಕಾರಿಗಳು ಕಾಮಗಾರಿ ಮುಂದುವರಸಿದ್ದರು ಎಂದು ಕಿಡಿಕಾರಿದ್ದಾರೆ.

ಸೇತುವೆ ಕುಸಿತದಿಂದಾಗಿ ಕೆಳಗೆ ನಿಂತಿದ್ದ ಬೃಹತ್ ಗಾತ್ರದ ಕ್ರೇನ್, ಹಿಟಾಚಿ, ದ್ವಿಚಕ್ರ ವಾಹನ ಸೇರಿದಂತೆ ಕೋಟ್ಯಂತರ ಮೌಲ್ಯದ ಪರಿಕರಕ್ಕೆ ಹಾನಿಯಾಗಿದೆ.

ಘಟನೆ ಬಳಿಕ ಸೇತುವೆಯ ಗುಣಮಟ್ಟ ಪರೀಕ್ಷೆ ನಡೆಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಈ ನಡುವೆ ಘಟನಾ ಸ್ಥಳಕ್ಕೆ ಸ್ಥಳೀಯ ಅಧಿಕಾರಿಗಳು ಹಾಗೂ ಕುಮಟಾ ಶಾಸಕ ದಿನಕರ ಶೆಟ್ಟಿ ಭೇಟಿ ನೀಡಿ, ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com