ಚುನಾವಣಾ ಬಾಂಡ್ ಬಳಿಕ ಪಿಎಂ ಕೇರ್ಸ್ ಫಂಡ್ ಮೇಲೂ ಅನುಮಾನ: ತನಿಖೆಗೆ ಆಗ್ರಹ

ಚುನಾವಣಾ ಬಾಂಡ್‌ಗಳು ಅಸಂವಿಧಾನಿಕ ಎಂದು ಘೋಷಿಸಲ್ಪಟ್ಟ ಬೆನ್ನಲ್ಲೇ, ಪಿಎಂ ಕೇರ್ಸ್ ಫಂಡ್ ಬಗ್ಗೆಯೂ ಇದೀಗ ಅನುಮಾನಗಳು ಮೂಡತೊಡಗಿದ್ದು, ಇದರ ಬಗ್ಗೆಯೂ ತನಿಖೆ ನಡಸಬೇಕೆಂದು ಹಲವರು ಆಗ್ರಹಿಸುತ್ತಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಚುನಾವಣಾ ಬಾಂಡ್‌ಗಳು ಅಸಂವಿಧಾನಿಕ ಎಂದು ಘೋಷಿಸಲ್ಪಟ್ಟ ಬೆನ್ನಲ್ಲೇ, ಪಿಎಂ ಕೇರ್ಸ್ ಫಂಡ್ ಬಗ್ಗೆಯೂ ಇದೀಗ ಅನುಮಾನಗಳು ಮೂಡತೊಡಗಿದ್ದು, ಇದರ ಬಗ್ಗೆಯೂ ತನಿಖೆ ನಡಸಬೇಕೆಂದು ಹಲವರು ಆಗ್ರಹಿಸುತ್ತಿದ್ದಾರೆ.

ಚುನಾವಣಾ ಬಾಂಡ್‌ಗಳ ಮೂಲಕ ಪಾರದರ್ಶಕತೆಯನ್ನು ತಂದಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು, ಆದರೆ, ಹಗರಣ ಬಯಲಿಗೆ ಬಂದಿದೆ. ಇದೀಗ ಪಿಎಂ ಕೇರ್ಸ್ ನಿಧಿಯನ್ನು ಯಾವುದಕ್ಕೆ ಬಳಸಲಾಗುತ್ತಿದೆ, ಯಾವ ಉದ್ದೇಶಕ್ಕೆ ಎಷ್ಟು ಖರ್ಚು ಮಾಡಲಾಗಿದೆ ಎಂಬುದನ್ನು ತಿಳಿದುಕೊಳ್ಳುವ ಹಕ್ಕು ಸಾರ್ವಜನಿಕರಿಗೆ ಇದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದಾರೆ.

ಕಲ್ಯಾಣ ಯೋಜನೆಗಳ ಹಣ ಆರ್‌ಎಸ್‌ಎಸ್‌ಗೆ ಹೋಗಿವೆ. ಇಂದು, ಆರ್‌ಎಸ್‌ಎಸ್ ಸೈನಿಕ ಶಾಲೆಗಳು ಮತ್ತು ಕೇಂದ್ರೀಯ ವಿದ್ಯಾಲಯಗಳ ಮೇಲೆ ನೇರ ಅಥವಾ ಪರೋಕ್ಷ ನಿಯಂತ್ರಣವನ್ನು ಹೊಂದಿದೆ. ಸರಕಾರ ಹಲವಾರು ಶಾಲೆಗಳನ್ನು ಅವರಿಗೆ ಹಸ್ತಾಂತರಿಸಿದೆ. ಅದು ಯಾರ ಆಸ್ತಿ? ಖಾಸಗಿ ಸಂಸ್ಥೆಗಳಿಗೆ ಶಾಲೆಗಳ ನಿಯಂತ್ರಣವನ್ನು ನೀಡಿದರೆ, ಮೀಸಲಾತಿ ಏನಾಗುತ್ತದೆ? ಇಂತಹ ಶಾಲೆಗಳಲ್ಲಿ ಬಡವರಿಗೆ ಸೀಟು ಕೊಡುತ್ತಾರೆಯೇ? ಮೋದಿಯವರು ಬಡವರ ಆಶಾಭಾವನೆಗಳನ್ನು ನಾಶಮಾಡಿ ಈ ದೇಶವನ್ನು ಶ್ರೀಮಂತರ ಕೈಗೆ ಕೊಡುತ್ತಿದ್ದಾರೆ. ಇಲ್ಲಿಯವರೆಗೆ, ಅವರು ಎಷ್ಟು ಖರ್ಚು ಮಾಡಿದ್ದಾರೆ ಎಂಬುದಕ್ಕೆ ಯಾವುದೇ ಲೆಕ್ಕವನ್ನು ತೋರಿಸಿಲ್ಲ, ಯಾರು ಎಷ್ಟು ಕೊಡುಗೆ ನೀಡಿದ್ದಾರೆ ಎಂಬುದು ಯಾರಿಗೂ ತಿಳಿದಿಲ್ಲ. ಎಲೆಕ್ಟೋರಲ್ ಬಾಂಡ್‌ಗಳಂತೆ ಯಾವುದೇ ಮಾಹಿತಿಗಳಿಲ್ಲದಂತಾಗಿದೆ ಎಂದು ತಿಳಿಸಿದ್ದಾರೆ.

ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶ ಜಸ್ಟಿಸ್ ಮದನ್ ಲೋಕೂರ್ ಅವರು ಮಾತನಾಡಿ, ಪಾರದರ್ಶಕತೆ ಇರಬೇಕು. ಖಾಸಗಿ ಟ್ರಸ್ಟ್‌ಗಳೊಂದಿಗೆ ವ್ಯವಹರಿಸುವ ಸಕ್ಷಮ ಪ್ರಾಧಿಕಾರವು ಇದನ್ನು ಈ ಕೆಲಸವನ್ನು ಮಾಡಬೇಕು ಎಂದು ಹೇಳಿದ್ದಾರೆ.

ರಾಜ್ಯಸಭಾ ಸಂಸದ ಮತ್ತು ಮಾಜಿ ಕೇಂದ್ರ ಸಚಿವ ಕಪಿಲ್ ಸಿಬಲ್ ಅವರೂ ಕೂಡ ಪಿಎಂ ಕೇರ್ಸ್ ಫಂಡ್ ಕುರಿತು ಟೀಕೆ ಮಾಡಿದ್ದಾರೆ.

ಇದು ಸಾರ್ವಜನಿಕ ಹಣ, ಸಾರ್ವಜನಿಕ ವೆಚ್ಚಕ್ಕಾಗಿ, ಮತ್ತು ಸಾರ್ವಜನಿಕ ಪರಿಶೀಲನೆಗೆ ಒಳಪಟ್ಟಿರಬೇಕು. ಆದರೆ, ಎಲೆಕ್ಟೋರಲ್ ಬಾಂಡ್‌ಗಳಂತೆ ಅದನ್ನು ಮುಚ್ಚಿಡಲಾಗಿದೆ. ದಾನಿಗಳ ಹೆಸರನ್ನು ಸಾರ್ವಜನಿಕಗೊಳಿಸಿದರೆ ಏನು ಬಹಿರಂಗಗೊಳ್ಳುತ್ತದೆ ಎಂಬುದು ನನ್ನಲ್ಲಿ ಮೂಡಿರುವ ಪ್ರಶ್ನೆ ಎಂದು ಹೇಳಿದ್ದಾರೆ.

ಸಂಗ್ರಹ ಚಿತ್ರ
ಚುನಾವಣಾ ಬಾಂಡ್, ಪಿಎಂ ಕೇರ್ಸ್ ದೊಡ್ಡ ಹಗರಣಗಳು: ಪರಕಾಲ ಪ್ರಭಾಕರ್ ಟೀಕೆ

ಇದು ಪ್ರಧಾನಿಮಂತ್ರಿಗಳ ಅತ್ಯಂತ ಭ್ರಷ್ಟ ಚಟುವಟಿಕೆಯಾಗಿದೆ. ಖಾತೆಯನ್ನು ರಚಿಸುವ ಮತ್ತು ನಿರ್ವಹಿಸುವ ವಿಧಾನವು ಭ್ರಷ್ಟಚಾರದಿಂದ ಕೂಡಿದೆ ಎಂಬುದನ್ನು ಇದು ತೋರಿಸುತ್ತದೆ ಎಂದು ಸಂವಿಧಾನದ ನಡವಳಿಕೆ ಗುಂಪಿನ ಭಾಗವಾಗಿರುವ ಮಾಜಿ ಹಿರಿಯ ಐಎಎಸ್ ಅಧಿಕಾರಿ ಎಂ.ಜಿ.ದೇವಸಹಾಯಂ ಅವರು ಹೇಳಿದ್ದಾರೆ,

ಯಾವುದೇ ನಿಧಿ ಸಂಗ್ರಹವು ಪಾರದರ್ಶಕವಾಗಿರಬೇಕು. ಈ ಅಪಾರದರ್ಶಕತೆಯು ಸಾಂಸ್ಥಿಕ ಕುಸಿತವನ್ನು ತೋರಿಸುತ್ತದೆ. ಸರ್ಕಾರದ ಲೆಕ್ಕಪರಿಶೋಧನೆ ಮತ್ತು ಆರ್‌ಟಿಐ ರಹಸ್ಯವನ್ನು ಮಾಡುತ್ತಿರುವುದೇಕೆ? ಪಕ್ಷಕ್ಕಿಂತ ದೊಡ್ಡವರಂತೆ ಕಾಣುವ ಪ್ರಧಾನಿಯವರ ವ್ಯಕ್ತಿತ್ವ ವಿಕಸನಕ್ಕೆ ಈ ಹಣವನ್ನು ಬಳಸಲಾಗಿದೆಯೇ? ಎಂದು ಪ್ರಶ್ನಿಸಿದರು.

ರಾಜಕೀಯ ಅರ್ಥಶಾಸ್ತ್ರಜ್ಞ ಪರಕಾಲ ಪ್ರಭಾಕರ್ ಮಾತನಾಡಿ, ಪಿಎಂ ಕೇರ್ಸ್ ನಿಧಿಯು ಪ್ರಧಾನ ಮಂತ್ರಿಗಳ ಕಚೇರಿ, ಸೌತ್ ಬ್ಲಾಕ್, ನವದೆಹಲಿಯಲ್ಲಿದೆ, ಇದು ಅಧಿಕೃತ ಭಾರತೀಯ ಲಾಂಛನವನ್ನು ಬಳಸುತ್ತದೆ ಮತ್ತು ಅದರ ವೆಬ್ ವಿಳಾಸವು gov.in ಆಗಿದೆ, ಆದ್ದರಿಂದ ಸರ್ಕಾರವು ಅದನ್ನು ಹೇಗೆ ಸಮರ್ಥಿಸಿಕೊಳ್ಳುತ್ತದೆ? RTI ಅಡಿಯಲ್ಲಿ ಬರುವುದೇ? ಶೀಘ್ರದಲ್ಲೇ ಬಯಲಿಗೆ ಬರುವ ಬಹುದೊಡ್ಡ ಹಗರಣ ಇದಾಗಿದ್ದು, ಇದು ಚುನಾವಣಾ ಬಾಂಡ್‌ಗಳಿಗಿಂತ ದೊಡ್ಡ ಹಗರಣವಾಗಿರಬಹುದು. ಸರ್ಕಾರಿ ನೌಕರರು ಒಂದು ದಿನದ ಸಂಬಳವನ್ನು ದಾನ ಮಾಡಿದ್ಗಪು, ಪಿಎಸ್ಯುಗಳಿಂದ ಸಿಎಸ್ಆರ್ ಹಣವನ್ನು ವರ್ಗಾಯಿಸಲಾಗಿತ್ತು. ಸರಕಾರ ಎಲ್ಲಿಂದ ಹಣ ಪಡೆಯುತ್ತಿದೆ, ಯಾವುದಕ್ಕೆ ಖರ್ಚು ಮಾಡುತ್ತಿದೆ ಎನ್ನುವುದನ್ನು ಹೇಳುತ್ತಿಲ್ಲ ಎಂದು ಹೇಳಿದ್ದಾರೆ.

ಈ ನಡುವೆ ಖರ್ಗೆ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ಮಾಜಿ ಮಾಧ್ಯಮ ಸಂಯೋಜಕ ಎಸ್ ಪ್ರಕಾಶ್ ಅವರು, ರಾಜ್ಯಸಭೆಯಲ್ಲಿ ಪ್ರತಿಪಕ್ಷ ನಾಯಕನಾಗಿ ಅವರು ಜವಾಬ್ದಾರಿಯುತವಾಗಿ ಪ್ರತಿಕ್ರಿಯಿಸುವ ನಿರೀಕ್ಷೆಯಿದೆ. ಪ್ರತಿ ವರ್ಷ, PM ಕೇರ್ಸ್ ಫಂಡ್ ಅನ್ನು ಸ್ವತಂತ್ರ ಲೆಕ್ಕಪರಿಶೋಧಕರು ಆಡಿಟ್ ಮಾಡುತ್ತಾರೆ. ಎಲ್ಲವನ್ನೂ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ. ಖರ್ಗೆಯವರು ಸಮಯ ತೆಗೆದುಕೊಂಡು ಅದನ್ನು ಓದಬೇಕು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com