ರಾಜ್ಯದಲ್ಲಿ 2ನೇ ಹಂತದ ಮತದಾನ ಅಂತ್ಯ; ಸಂಜೆ 5 ರವರೆಗೆ 66.05 ಮತದಾನ; ಪ್ರಜ್ವಲ್ ಪ್ರಕರಣದ ಹಿಂದೆ ಡಿಸಿಎಂ ಕೈವಾಡ, ಸಿಬಿಐ ತನಿಖೆಯಾಗಲಿ- HDK; ಈ ದಿನದ ಸುದ್ದಿ ಮುಖ್ಯಾಂಶಗಳು 07-05-2024

ಸಂಗ್ರಹ ಚಿತ್ರ
ಸಂಗ್ರಹ ಚಿತ್ರonline desk

1. ರಾಜ್ಯದಲ್ಲಿ 2 ನೇ ಹಂತದ ಮತದಾನ ಅಂತ್ಯ: ಸಂಜೆ 5 ರವರೆಗೆ 66.05 ರಷ್ಟು ಮತದಾನ

2024 ಲೋಕಸಭೆ ಚುನಾವಣೆಗೆ ಕರ್ನಾಟಕದಲ್ಲಿ ಎರಡನೇ ಹಂತದ ಮತದಾನದ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಸಂಜೆ 5 ಗಂಟೆ ವರೆಗಿನ ವರದಿಯ ಪ್ರಕಾರ ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಇಂದು ಶೇ.66.05 ರಷ್ಟು ಮತದಾನ ನಡೆದಿದೆ. ಬಾಗಲಕೋಟೆಯಲ್ಲಿ ಶೇ.65.55, ಬೆಳಗಾವಿಯಲ್ಲಿ 65.67, ಬಳ್ಳಾರಿಯಲ್ಲಿ 68.94, ಬೀದರ್ ನಲ್ಲಿ 60.17, ವಿಜಯಪುರದಲ್ಲಿ 60.95, ಚಿಕ್ಕೋಡಿ 72.75, ದಾವಣಗೆರೆಯಲ್ಲಿ 70.90, ಧಾರವಾಡ 67.16, ಗುಲಬರ್ಗಾ 57.20, ಹಾವೇರಿ 71.90, ಕೊಪ್ಪಳ 66.05, ರಾಯಚೂರು 59.48, ಶಿವಮೊಗ್ಗ 72.07 ಮತ್ತು ಉತ್ತರ ಕನ್ನಡದಲ್ಲಿ ಶೇ.69.57 ರಷ್ಟು ಮತದಾನ ನಡೆದಿದೆ.

ತೀವ್ರ ಬಿಸಿಲಿನ ನಡುವೆ ಜನತೆ ಮತದಾನ ಮಾಡಿದ್ದು, ಕೆಲವೆಡೆ Heat wave ನಿಂದ ಚುನಾವಣಾ ಸಿಬ್ಬಂದಿಗಳು ಅಸ್ವಸ್ಥರಾದ ಘಟನೆಯೂ ವರದಿಯಾಗಿದ್ದು, ಬಳ್ಳಾರಿಯ ಮತಗಟ್ಟೆಯಲ್ಲಿ Heatwave ನಿಂದ ಅಸ್ವಸ್ಥರಾದ ನೌಕರರನ್ನು ಆಸ್ಪತ್ರೆಗೆ ಸೇರಿಸಲಾಯಿತು. ಕೊಪ್ಪಳ ಜಿಲ್ಲೆಯ ಹಲವಡೆ ಮತದಾನ ಬಹಿಷ್ಕಾರ ಮಾಡಿರುವ ಘಟನೆ ವರದಿಯಾಗಿದೆ. ಕೊಪ್ಪಳ ಜಿಲ್ಲೆಯ ಕುಕನೂರು ಪಟ್ಟಣದ 19ನೇ ವಾರ್ಡ್ ಜನರು ಪಟ್ಟಣದ ಗುದ್ನೇಪ್ಪನಮಠದ ದೇವಸ್ಥಾನದ ಜಾಗದಲ್ಲಿ ಸರ್ಕಾರಿ ಕಟ್ಟಡ ಕಟ್ಟುವ ಆದೇಶ ಹಿಂಪಡೆಯಬೇಕು ಎಂದು ಮತದಾನ ಬಹಿಷ್ಕಾರ ಮಾಡಿದ್ದರು. ವಿಕಲಚೇತನ ಮಹಿಳೆ ಮತ್ತು ವಿಜಯನಗರ ಜಿಲ್ಲೆಯ ಲೋಕಸಭಾ ಚುನಾವಣೆ 2024 ರಾಯಭಾರಿ ಲಕ್ಷ್ಮೀದೇವಿ ಕಾಲಿನಿಂದ ಮತ ಚಲಾಯಿಸಿ, ಮಾದರಿಯಾದರು. ಇನ್ನು ಧಾರವಾಡದಲ್ಲಿ ಕೊಪ್ಪದ ಎಂಬ 180 ಸದಸ್ಯರನ್ನು ಹೊಂದಿರುವ ಒಂದೇ ಕುಟುಂಬದ 96 ಮಂದಿ ಮತದಾರರು ಇಂದು ಮತದಾನ ಮಾಡಿದ್ದು ವಿಶೇಷವಾಗಿತ್ತು.

2. ಪ್ರಜ್ವಲ್ ಪೆನ್ ಡ್ರೈವ್ ಹಿಂದೆ ಡಿಸಿಎಂ ಕೈವಾಡ, ಸಿಬಿಐ ತನಿಖೆಯಾಗಲಿ- HDK

ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಎಸಗಿರುವ ವಿಡಿಯೋಗಳಿರುವ 25 ಸಾವಿರ ಪೆನ್‌ಡ್ರೈವ್‌ಗಳನ್ನು ಲೋಕಸಭೆ ಚುನಾವಣೆಗೂ ಮುನ್ನವೇ ಹಂಚಲಾಗಿದೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಪೆನ್ ಡ್ರೈವ್ ಹಂಚಿರುವುದರ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಪಿತೂರಿಯಿದೆ.

ತನಿಖೆಗಾಗಿ ಏಪ್ರಿಲ್ 28 ರಂದು ಕಾಂಗ್ರೆಸ್ ಸರ್ಕಾರ ರಚಿಸಿದ ಎಸ್ ಐಟಿ, ಇದು ವಿಶೇಷ ತನಿಖಾ ತಂಡವಲ್ಲ "ಸಿದ್ದರಾಮಯ್ಯ ತನಿಖಾ ತಂಡ" ಮತ್ತು "ಶಿವಕುಮಾರ್ ತನಿಖಾ ತಂಡ" ಎಂದು ಹೇಳಿದ್ದಾರೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲೂ ಪೆನ್ ಡ್ರೈವ್ ಹಂಚಿಕೆಯಾಗಿದೆ. ಇದು ಏಪ್ರಿಲ್ 21 ರಂದೇ ನಡೆದಿದೆ. ಏಪ್ರಿಲ್ 22 ರಂದು ಈ ಸಂಬಂಧ ನಮ್ಮ ಚುನಾವಣಾ ಏಜೆಂಟ್, ಪೂರ್ಣಚಂದ್ರ ಅವರು ಜಿಲ್ಲಾಧಿಕಾರಿಗೆ ದೂರು ನೀಡಿದ್ದರು ಎಂದು HDK ತಿಳಿಸಿದರು. ಪೆನ್ ಡ್ರೈವ್ ಕಥೆಯ ಸೂತ್ರದಾರ ಕಾರ್ತಿಕ್ ಗೌಡ ಅವರನ್ನು ಮೊದಲು ಪತ್ತೆ ಹಚ್ಚಿ ಜನರ ಮುಂದೆ ತರಬೇಕು, ಪ್ರಕರಣದಲ್ಲಿ ಡಿಸಿಎಂ ಕೈವಾಡವಿದ್ದು, ಅವರನ್ನು ಸಂಪುಟದಿಂದ ಕೈಬಿಡಬೇಕು ತನಿಖೆಯನ್ನು ಸಿಬಿಐ ಗೆ ವಹಿಸಿ ಎಂದು ಕುಮಾರಸ್ವಾಮಿ ಆಗ್ರಹಿಸಿದರು.

3. ರೇವಣ್ಣ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

ಮಹಿಳೆಯೊಬ್ಬರ ಅಪಹರಣ ಪ್ರಕರಣದ ಆರೋಪಿಯಾಗಿ ಎಸ್‌ಐಟಿ ಬಂಧನದಲ್ಲಿರುವ ಜೆಡಿಎಸ್ ಶಾಸಕ ಎಚ್‌ಡಿ ರೇವಣ್ಣ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮುಂದೂಡಿದ್ದು, ಈ ಸಂಬಂಧ ಎಸ್ಐಟಿಗೆ ನೋಟಿಸ್ ಜಾರಿ ಮಾಡಿದೆ. ರೇವಣ್ಣ ಶನಿವಾರ ಬಂಧನಕ್ಕೊಳಗಾಗಿದ್ದರು. ಇದಕ್ಕೂ ಮುನ್ನ ನ್ಯಾಯಾಲಯ ಶನಿವಾರ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು.

4. ಬೆಂಗಳೂರಿನಲ್ಲಿ ಮಳೆ: ಕಟ್ಟಡ ಕುಸಿದು 17 ವರ್ಷದ ಬಾಲಕಿಯ ತಲೆಗೆ ತೀವ್ರ ಗಾಯ

ಬಿಸಿಲಿನಿಂದ ಕಂಗೆಟ್ಟಿದ್ದ ರಾಜಧಾನಿ ಬೆಂಗಳೂರಿನಲ್ಲಿ ಗುಡುಗು ಸಹಿತ ಮಳೆಯಾಗಿದೆ. ನೆನ್ನೆ ಸುರಿದ ಮಳೆಯಿಂದಾಗಿ ನಗರದ ಕೋಣನಕುಂಟೆ ಬಳಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಒಂದು ಭಾಗ ಕುಸಿದು ಬಿದ್ದ ಪರಿಣಾಮ 17 ವರ್ಷದ ಬಾಲಕಿಯ ತಲೆಗೆ ತೀವ್ರ ಗಾಯವಾಗಿದ್ದು, ಆಕೆಯ ತಾಯಿಗೆ ಮೂಳೆ ಮುರಿತವಾಗಿದೆ. ತಾಯಿ ಮತ್ತು ಮಗಳು ಒಣಗಿದ ಬಟ್ಟೆಗಳನ್ನು ತೆಗೆದುಕೊಳ್ಳಲು ಹೊರಗೆ ಬಂದಾಗ ಭಾರಿ ಮಳೆ ಪ್ರಾರಂಭವಾಗಿದೆ. ಈ ವೇಳೆ ಅವರ ಮನೆಯ ಪಕ್ಕದ ನಾಲ್ಕು ಅಂತಸ್ತಿನ ನಿರ್ಮಾಣ ಹಂತದ ಕಟ್ಟಡ ಕುಸಿದಿದೆ. ಮುಂದಿನ 48 ಗಂಟೆಗಳ ಕಾಲ ಭಾರೀ ಮಳೆಯಾಗುವ ಮುನ್ಸೂಚನೆ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com