
ಚಿತ್ರದುರ್ಗ: ಹಾಸನದ ಬಿಜೆಪಿ ಮುಖಂಡ ಹಾಗೂ ವಕೀಲ ದೇವರಾಜೇಗೌಡ ಅವರನ್ನು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಸಮೀಪದ ಗುಯ್ಲಾಳು ಸುಂಕದಕಟ್ಟೆಯಲ್ಲಿ ಶುಕ್ರವಾರ ಬಂಧನಕ್ಕೊಳಪಡಿಸಲಾಗಿದೆ.
ದೇವರಾಜೇಗೌಡ ಅವರನ್ನು ಬಂಧಿಸಲು ಪೊಲೀಸರು ಸಾಕಷ್ಟು ಹರಸಾಹಸ ಪಟ್ಟಿದ್ದರು. ದೇವರಾಜೇಗೌಡ ಬಂಧನಕ್ಕಾಗಿ ಪೊಲೀಸರು ಸಾಕಷ್ಟು ಹುಡುಕಾಟ ಆರಂಭಿಸಿದ್ದರು. ಇದರಂತೆ ಶುಕ್ರವಾರ ತಡರಾತ್ರಪಿ ವಾಟ್ಸಾಪ್ ಗ್ರೂಪ್‌ಗೆ ವಿಡಿಯೋ ಕಳುಹಿಸಲು ದೇವರಾಜೇಗೌಡ ಮೊಬೈಲ್ ಸ್ವಿಚ್ ಆನ್ ಮಾಡಿದ್ದು, ಕೂಡಲೇ ಸ್ಥಳವನ್ನು ಟ್ರೇಸ್ ಮಾಡಿರುವ ಅಧಿಕಾರಿಗಳು, ಚಿತ್ರದುರ್ಗ ಪೊಲೀಸರಿಗೆ ಮಾಹಿತಿ ರವಾನಿಡಿದ್ದಾರೆ.
ಮಾಹಿತಿ ದೊರೆಯತ್ತಿದ್ದಂತೆಯೇ ಟೋಲ್‌ಗೇಟ್‌ನಲ್ಲಿ ಅವರ ಕಾರನ್ನು ನಿಲ್ಲಿಸಿದ ಪೊಲೀಸರು, ದೇವರಾಜೇಗೌಡ ಅವರನ್ನು ಬಂಧಿಸಿದ್ದಾರೆ. ವಾಹನದಲ್ಲಿ ಮೂರು ಬ್ಯಾಗ್‌ಗಳ ಬಟ್ಟೆ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಹಾಸನದ ಜೆಡಿಎಸ್-ಬಿಜೆಪಿ ಲೋಕಸಭಾ ಅಭ್ಯರ್ಥಿಯ ಅಶ್ಲೀಲ ವಿಡಿಯೋಗಳಿರುವ ಪೆನ್ ಡ್ರೈವರ್‌ಗಳ ಲೀಕ್ ಕೇಸ್ ನಲ್ಲಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭಾಗಿಯಾಗಿದ್ದಾರೆ ಎಂದು ಇತ್ತೀಚೆಗೆ ದೇವರಾಜೇಗೌಡ ಅವರು ಆರೋಪಿಸಿದ್ದರು.
ಬಂಧನದ ಬಳಿಕ ಹೊಳೆನರಸೀಪುರ ಪೊಲೀಸರು ಮಧ್ಯರಾತ್ರಿ ಹಿರಿಯೂರು ಗ್ರಾಮಾಂತರ ಠಾಣೆಗೆ ಆಗಮಿಸಿ ದೇವರಾಜೇಗೌಡ ಅವರನ್ನು ಹಾಸನಕ್ಕೆ ಕರೆದೊಯ್ದು ಹಾಸನ ನ್ಯಾಯಾಲಯಕ್ಕೆ ಹಾಜರುಪಡಿಸಿದರು.
ದೇವರಾಜೇಗೌಡ ಅವರನ್ನು ಲೈಂಗಿಕ ದೌರ್ಜನ್ಯ ಹಾಗೂ ಜಾತಿನಿಂದನೆ ಆರೋಪದ ಮೇರೆಗೆ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆಂದು ತಿಳಿದುಬಂದಿದೆ.
ನಿವೇಶನ ಮಾರಿಸಿಕೊಡುವ ಸಂಬಂಧ ಸಂಪರ್ಕಿಸಿದ್ದ ಆರೋಪಿಯು, ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ’ ಎಂದು ಏ.1 ರಂದು ಸಂತ್ರಸ್ತೆ ನೀಡಿದ್ದ ದೂರಿನ ಅನ್ವಯ ಹೊಳೆನರಸೀಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಾತಿನಿಂದನೆಗೆ ಸಂಬಂಧಿಸಿದಂತೆ ಸಂತ್ರಸ್ತೆಯ ಪತಿ ನೀಡಿರುವ ದೂರಿನಂತೆ ಮತ್ತೊಂದು ಪ್ರಕರಣ ದಾಖಲಾಗಿದೆ. ಈ ಮಧ್ಯೆ, ಮಾರ್ಚ್‌ನಲ್ಲಿ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಅವರೂ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆಂದು ಆರೋಪಿ ವಿರುದ್ಧ ಹಾಸನ ನಗರ ಠಾಣೆಗೆ ದೂರು ನೀಡಿದ್ದರು. ಒಟ್ಟಿಗೇ ಎಲ್ಲ ಪ್ರಕರಣಗಳ ವಿಚಾರಣೆ ನಡೆದಿದೆ.
2023ರ ವಿಧಾನಸಭಾ ಚುನಾವಣೆಯಲ್ಲಿ ಹೊಳೆನರಸೀಪುರದಿಂದ ಸ್ಪರ್ಧಿಸಿದ್ದ ದೇವರಾಜೇಗೌಡ ಅವರು, ಜೆಡಿಎಸ್ ಅಭ್ಯರ್ಥಿ ಎಚ್‌ಡಿ ರೇವಣ್ಣ ವಿರುದ್ಧ ಸೋಲು ಕಂಡಿದ್ದರು.
ಈ ವರ್ಷದ ಜನವರಿಯಲ್ಲಿ, ರೇವಣ್ಣ ಅವರ ಪುತ್ರ ಮತ್ತು ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ಕಿರುಕುಳ ವೀಡಿಯೊಗಳನ್ನು ಬಿಡುಗಡೆ ಮಾಡುವುದಾಗಿ ಬೆದರಿಕೆ ಹಾಕಿದ್ದರು ಎಂದು ಹೇಳಲಾಗುತ್ತಿದ್ದು, ಆದಾಗ್ಯೂ, ಲೋಕಸಭೆ ಚುನಾವಣೆಗೆ ಮುನ್ನ ಏಪ್ರಿಲ್‌ನಲ್ಲಿ ವೀಡಿಯೋಗಳು ಲೀಕ್ ಆಗಿ, ಭಾರೀ ಸುದ್ದಿಗೆ ಗ್ರಾಸವಾಗಿದೆ.
Advertisement