ರೈತರಿಗೆ ಮತ್ತೆ ಶಾಕ್: ಹಠಾತ್ ಮಳೆಯಿಂದ ಬೆಳೆ ಹಾನಿ; ಸಿಡಿಲು ಬಡಿದು ಜಾನುವಾರುಗಳ ಸಾವು!

ಒಂದೆಡೆ ರಾಜ್ಯದಲ್ಲಿ ಭೀಕರ ಬರಗಾಲದಿಂದ ರೈತರು ಕಂಗಾಲಾಗಿದ್ದರೆ, ಮತ್ತೊಂದೆಡೆ ಏಕಾಏಕಿ ಸುರಿದ ಗುಡುಗು ಸಹಿತ ಮಳೆಯಿಂದಾಗಿ ಬೆಳೆ ನಷ್ಟ ಮತ್ತು ಜಾನುವಾರುಗಳು ಸಾಯುವ ಭೀತಿ ಎದುರಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಒಂದೆಡೆ ರಾಜ್ಯದಲ್ಲಿ ಭೀಕರ ಬರಗಾಲದಿಂದ ರೈತರು ಕಂಗಾಲಾಗಿದ್ದರೆ, ಮತ್ತೊಂದೆಡೆ ಏಕಾಏಕಿ ಸುರಿದ ಗುಡುಗು ಸಹಿತ ಮಳೆಯಿಂದಾಗಿ ಬೆಳೆ ನಷ್ಟ ಮತ್ತು ಜಾನುವಾರುಗಳು ಸಾಯುವ ಭೀತಿ ಎದುರಾಗಿದೆ.

ಏಪ್ರಿಲ್ ಕೊನೆಯ ವಾರದಿಂದ ರಾಜ್ಯದ ಹಲವೆಡೆ ಭಾರಿ ಮಳೆಯಾಗುತ್ತಿದ್ದು, ಬೆಳೆ ಹಾನಿಯಾಗಿದೆ. ಚಾಮರಾಜನಗರ, ಮಂಡ್ಯ, ಮೈಸೂರು, ಹಾವೇರಿ, ಕಲಬುರಗಿಯಲ್ಲಿ ಕೃಷಿ ಮತ್ತು ತೋಟಗಾರಿಕೆ ಅವಲಂಬಿಸಿರುವ ರೈತರು ಬಾಳೆ, ಈರುಳ್ಳಿ, ಟೊಮೇಟೊ ಸೇರಿದಂತೆ ಇತರೆ ಬೆಳೆಗಳನ್ನು ಕಳೆದುಕೊಂಡಿದ್ದಾರೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಜಿ ನಿರ್ದೇಶಕ ಶ್ರೀನಿವಾಸ್ ರೆಡ್ಡಿ, ಬಿರು ಬೇಸಿಗೆಯಿಂದ ರೈತರ ಬೆಳೆಗಳಿಗೆ ಈಗಾಗಲೇ ಹಾನಿಯಾಗಿದೆ. ಜನವರಿ ಅಥವಾ ಫೆಬ್ರುವರಿ ವೇಳೆಗೆ ಬಿತ್ತನೆ ಮಾಡಬೇಕಿತ್ತು ಆದರೆ ಈ ವರ್ಷ ಮಳೆಯಾಗಿಲ್ಲ. ಭೂಮಿ ನೀರಾವರಿ ಇರುವ ಅಥವಾ ಬೋರ್‌ವೆಲ್‌ಗಳನ್ನು ಅವಲಂಬಿಸಿರುವ ಪ್ರದೇಶಗಳಲ್ಲಿ ರೈತರು ಬೇಸಿಗೆ ಬೆಳೆಗಳನ್ನು ತೆಗೆದುಕೊಂಡರು. ದುರದೃಷ್ಟವಶಾತ್ ಕೆಲವೆಡೆ ಬೋರ್‌ವೆಲ್‌ಗಳು ಬತ್ತಿ ಹೋಗಿದ್ದು, ರೈತರು ಬೇರೆ ಮೂಲಗಳಿಂದ ನೀರು ಪೂರೈಸಲು ಹಣ ಪಾವತಿಸಿದ್ದಾರೆ. ಅಂತಹ ಬೆಳೆಗಳೂ ಹಾನಿಗೀಡಾಗಿವೆ ಎಂದರು.

ಭತ್ತ, ಜೋಳದ ಜತೆಗೆ ತೋಟಗಾರಿಕೆ ಬೆಳೆಗಳು ಹಾನಿಗೀಡಾಗಿವೆ. ಕೊಯ್ಲಿಗೆ ಸಿದ್ಧವಾಗಿದ್ದ ತೋಟಗಾರಿಕೆ ಬೆಳೆಗಳು ಹಾಳಾಗಿವೆ. ಅವುಗಳ ತೂಕ ಮತ್ತು ಭಾರೀ ಗಾಳಿಯಿಂದ ಗಿಡಗಳು ನೆಲಕ್ಕುರುಳುತ್ತಿದ್ದು, ಅಂತಹ ಬೆಳೆಗಳಿಗೆ ಏನೂ ಮಾಡಲು ಸಾಧ್ಯವಿಲ್ಲ ಎಂದು ಅಸಹಾಯಕತೆ ತೋಡಿಕೊಳ್ಳುತ್ತಿದ್ದಾರೆ.

ಸಾಂದರ್ಭಿಕ ಚಿತ್ರ
ಚಾಮರಾಜನಗರ: ಮಳೆಗೆ 25 ಕೋಟಿ ರೂಪಾಯಿ ಮೌಲ್ಯದ ಬೆಳೆ ನಾಶ!

ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ, ಅತಿವೃಷ್ಟಿಯಿಂದ ಬೆಳೆ ನಷ್ಟವಾಗಿರುವ ಬಗ್ಗೆ ಸರಕಾರಕ್ಕೆ ಅರಿವಿದೆ. ನೈಸರ್ಗಿಕ ವಿಕೋಪದಿಂದ ಉಂಟಾಗುವ ಯಾವುದೇ ನಷ್ಟಕ್ಕೆ ಸರ್ಕಾರವು ಪರಿಹಾರವನ್ನು ನೀಡುತ್ತದೆ. ರೈತರಿಗೆ ಯಾವುದೇ ರೀತಿಯಲ್ಲಿ ನಷ್ಟವಾಗದಂತೆ ನೋಡಿಕೊಳ್ಳುವಂತೆ ಸಿಎಂ ಸಿದ್ದರಾಮಯ್ಯ ಈಗಾಗಲೇ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಆಯಾ ತಹಶೀಲ್ದಾರ್‌ಗಳು ಇದನ್ನು ಕೈಗೆತ್ತಿಕೊಳ್ಳಲಿದ್ದು, ಹಣ ಜಿಲ್ಲಾಧಿಕಾರಿಗಳ ಬಳಿ ಇದೆ ಎಂದು ಹೇಳಿದರು.

ಕಂದಾಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು, ನಷ್ಟವನ್ನು ಒಟ್ಟುಗೂಡಿಸುತ್ತಿದ್ದು, ಒಂದೆರೆಡು ದಿನದಲ್ಲಿ ನೈಜ ಚಿತ್ರಣ ಸಿಗಲಿದೆ ಎಂದರು. ಸಿಡಿಲು ಬಡಿದು ಹಲವೆಡೆ ಜಾನುವಾರುಗಳು ಮೃತಪಟ್ಟಿದ್ದು, ರೈತರು ಕಂಗಾಲಾಗಿದ್ದಾರೆ. ಇತ್ತೀಚೆಗಷ್ಟೇ ಹೊಸಕೋಟೆ ಸಮೀಪದ ಗ್ರಾಮದಲ್ಲಿ ಸಿಡಿಲು ಬಡಿದು 50 ಮೇಕೆ, ಕುರಿ ಹಾಗೂ ಕುರುಬರು ಮೃತಪಟ್ಟಿದ್ದರು. ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿಯಲ್ಲಿ ಭಾನುವಾರ 20 ಕುರಿಗಳು ಬಲಿಯಾಗಿವೆ.

ಕಳೆದ ಶುಕ್ರವಾರ ಚಾಮರಾಜನಗರದಲ್ಲಿ 14 ಕುರಿಗಳು ಮೃತಪಟ್ಟಿವೆ. ಈ ರೈತರಿಗೆ ಪರಿಹಾರ ನೀಡಲಾಗುವುದು. ಕಳೆದ ವರ್ಷ ನೈಋತ್ಯ ಮತ್ತು ಈಶಾನ್ಯ ಮಾನ್ಸೂನ್ ವಿಫಲವಾದ ನಂತರ, ರಾಜ್ಯ ಸರ್ಕಾರವು 223 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಿತು. ಬರ ಪರಿಹಾರಕ್ಕಾಗಿ 18,177 ಕೋಟಿ ರೂಪಾಯಿಗಳ ಆರ್ಥಿಕ ನೆರವು ಕೋರಿತ್ತು. 46.11 ಲಕ್ಷ ಹೆಕ್ಟೇರ್ ಕೃಷಿ ಭೂಮಿ ಹಾಗೂ 2.06 ಲಕ್ಷ ಹೆಕ್ಟೇರ್ ತೋಟಗಾರಿಕೆ ಭೂಮಿಯಲ್ಲಿ ಬೆಳೆ ನಷ್ಟದ ಅಂದಾಜು ಪಟ್ಟಿ ತಯಾರಿಸಲಾಗಿದೆ. ಇತ್ತೀಚೆಗಷ್ಟೇ ಕಂದಾಯ ಸಚಿವ ಕೃಷ್ಣ ಬೈರೇಗೌಡ, ರಾಜ್ಯ ಸರ್ಕಾರ 32.12 ಲಕ್ಷ ರೈತರಿಗೆ ಬರ ಪರಿಹಾರ ನೀಡಿದೆ. ಎರಡು ಲಕ್ಷಕ್ಕೂ ಅಧಿಕ ರೈತರ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದು, ಪ್ರತಿಯೊಬ್ಬರಿಗೂ 4 ಸಾವಿರ ರೂಪಾಯಿ ನೀಡಲಾಗುವುದು ಎಂದು ಹೇಳಿದ್ದರು.

ಪರಿಹಾರ ಪಟ್ಟಿಯಡಿ ನೋಂದಣಿಯಾಗದ 1.63 ಲಕ್ಷ ರೈತರಿಗೆ ಪರಿಹಾರ ನೀಡಲು ನಿರ್ಧರಿಸಲಾಗಿದೆ ಎಂದು ಕಂದಾಯ ಇಲಾಖೆ ಮೂಲಗಳು ತಿಳಿಸಿವೆ. ಸಣ್ಣ ಜಮೀನು ಹೊಂದಿರುವ 16 ಲಕ್ಷ ರೈತರಿದ್ದು, ಅವರಿಗೆ 3,000 ರೂಪಾಯಿ ಪರಿಹಾರ ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com