
ಬೆಂಗಳೂರು: ಅಮೆರಿಕದಲ್ಲಿ ಜೂನ್ 1ರಿಂದ ಆರಂಭವಾಗಲಿರುವ ಐಸಿಸಿ ಪುರುಷರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಕರ್ನಾಟಕ ಮೂಲದ ನಂದಿನಿ ಡೈರಿ ಬ್ರಾಂಡ್ ಅನ್ನು ಅಧಿಕೃತ ಪ್ರಾಯೋಜಕರಾಗಿ ಸ್ಕಾಟ್ಲೆಂಡ್ ಕ್ರಿಕೆಟ್ ತಂಡ ಘೋಷಿಸಿದ್ದು, ರಾಜ್ಯದ ಗುಣಮಟ್ಟದ ಹಾಲಿನ ಉತ್ಪನ್ನಗಳನ್ನು ಮತ್ತು ರೈತರ ಶ್ರಮವನ್ನು ವಿಶ್ವಕ್ಕೆ ಪರಿಚಯಿಸಲು ತಮ್ಮ ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಮಲೇಷ್ಯಾ, ವಿಯೆಟ್ನಾಂ, ಸಿಂಗಾಪುರ, ಅಮೆರಿಕ, ದುಬೈ, ಯುಎಇ ಮುಂತಾದ ರಾಷ್ಟ್ರಗಳಲ್ಲಿ ಹೆಸರುವಾಸಿಯಾಗಿರುವ ಕರ್ನಾಟಕದ ಹೆಮ್ಮೆಯ ನಂದಿನಿ ಇದೀಗ T20 ವಿಶ್ವಕಪ್ ಪಂದ್ಯಾವಳಿಯಲ್ಲಿ ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ತಂಡಗಳ ಪ್ರಾಯೋಜಕತ್ವ ಹೊಂದಿದೆ ಎಂದಿದ್ದಾರೆ.
ರಾಜ್ಯದ ಉತ್ಕೃಷ್ಟ ಗುಣಮಟ್ಟದ ಹಾಲಿನ ಉತ್ಪನ್ನಗಳು ಮತ್ತು ನಾಡಿನ ರೈತರ ಶ್ರಮವೆರಡನ್ನೂ ವಿಶ್ವಕ್ಕೆ ಪರಿಚಯಿಸುವ ಸಂಕಲ್ಪ ನಮ್ಮದು. ನಂದಿನಿಯನ್ನು ಜಾಗತಿಕ ಬ್ರಾಂಡ್ ಆಗಿ ರೂಪಿಸುವಲ್ಲಿ ಇದು ಮಹತ್ವದ ಹೆಜ್ಜೆಯಾಗಲಿದೆ. ಈ ಬಾರಿ ವಿಶ್ವಕಪ್‌ನಲ್ಲಿ ರಾರಾಜಿಸಲಿದೆ ನಂದಿನಿ, ಕಂಗೊಳಿಸಲಿದೆ ಕನ್ನಡ ಎಂದು ಟ್ವೀಟ್ ಮಾಡಿದ್ದಾರೆ.
ಸ್ಕಾಟ್ಲೆಂಡ್ ಪುರುಷರ ತಂಡದ ನಾಯಕ ರಿಚಿ ಬೆರಿಂಗ್ಟನ್ ಅವರು ನಂದಿನಿ ಬ್ರಾಂಡ್‌ನ ಲೋಗೋ ಇರುವ ಜರ್ಸಿಯನ್ನು ಫೋಟೊವನ್ನು ಸಿದ್ದರಾಮಯ್ಯ ಹಂಚಿಕೊಂಡಿದ್ದಾರೆ.
ಕೆಎಂಎಫ್ ದೇಶದ ಎರಡನೇ ಅತಿ ದೊಡ್ಡ ಡೈರಿ ಸಹಕಾರಿಯಾಗಿದೆ. ಕೆಎಂಎಫ್ ಪ್ರಕಾರ, ದಕ್ಷಿಣ ಭಾರತದಲ್ಲಿ, ಇದು ಸಂಗ್ರಹಣೆ ಮತ್ತು ಮಾರಾಟದ ವಿಷಯದಲ್ಲಿ ಮೊದಲ ಸ್ಥಾನದಲ್ಲಿದೆ.
ಕೆಎಂಎಫ್ ರಾಜ್ಯದ ಎಲ್ಲ ಜಿಲ್ಲೆಗಳನ್ನು ಒಳಗೊಂಡ 16 ಹಾಲು ಒಕ್ಕೂಟಗಳನ್ನು ಹೊಂದಿದೆ. ಇದು ಪ್ರಾಥಮಿಕ ಡೈರಿ ಸಹಕಾರ ಸಂಘಗಳಿಂದ (ಡಿಸಿಎಸ್) ಹಾಲನ್ನು ಸಂಗ್ರಹಿಸುತ್ತದೆ ಮತ್ತು ಕರ್ನಾಟಕದ ವಿವಿಧ ಪಟ್ಟಣಗಳು, ನಗರಗಳು, ಗ್ರಾಮೀಣ ಮಾರುಕಟ್ಟೆಗಳಲ್ಲಿ ಗ್ರಾಹಕರಿಗೆ ಹಾಲನ್ನು ವಿತರಿಸುತ್ತದೆ.
Advertisement