
ಹುಬ್ಬಳ್ಳಿ: ಇತ್ತೀಚೆಗೆ ಭೀಕರವಾಗಿ ಕೊಲೆಗೀಡಾದ ಹುಬ್ಬಳ್ಳಿಯ ನೇಹಾ (Neha) ಮತ್ತು ಅಂಜಲಿ ಅಂಬಿಗೇರ ಅವರ ನಿವಾಸಕ್ಕೆ ಎಡಿಜಿಪಿ ಹಿತೇಂದ್ರ ಭೇಟಿ ನೀಡಿ ಪೋಷಕರಿಂದ ಮಾಹಿತಿ ಪಡೆದರು.
ನೇಹಾ (Neha) ಮತ್ತು ಅಂಜಲಿ ಅಂಬಿಗೇರ ಹತ್ಯೆ ಪ್ರಕರಣಗಳು ರಾಜ್ಯಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದು, ರಾಜ್ಯ ಸರ್ಕಾರಕ್ಕೆ ತೀವ್ರ ಮುಜುಗರ ತಂದಿದೆ. ಈ ಪ್ರಕರಣ ರಾಜ್ಯ ಮಾತ್ರವಲ್ಲದೇ ರಾಷ್ಟ್ರಮಟ್ಟದಲ್ಲಿ ಕೂಡ ಸಾಕಷ್ಟು ಸುದ್ದಿಯಾಗಿದೆ.
ಒಂದರ ಹಿಂದೆ ಒಂದರಂತೆ ನಗರದಲ್ಲಿ ಕೊಲೆ ಹಿನ್ನಲೆ ಇಡೀ ಹುಬ್ಬಳ್ಳಿ (Hubballi) ಜನರು ಬೆಚ್ಚಿಬಿದ್ದಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಈ ಬಗ್ಗೆ ಮಾತನಾಡಿದ್ದರು. ಇದೆಲ್ಲದರ ನಡುವೆ ಇಂದು ರಾಜ್ಯ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆರ್.ಹಿತೇಂದ್ರ ನೇಹಾ ಮನೆಗೆ ಭೇಟಿ ನೀಡಿದ್ದು ಪೋಷಕರಿಂದ ಮಾಹಿತಿ ಪಡೆದಿದ್ದಾರೆ. ಬಳಿಕ ಅಧಿಕಾರಿಗಳೊಂದಿಗೆ ಸಭೆ ಮಾಡಿದ್ದು ತರಾಟೆ ತೆಗೆದುಕೊಂಡಿದ್ದಾರೆ.
ಹು-ಧಾ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸಭೆ ಮಾಡಿರುವ ಎಡಿಜಿಪಿ ಆರ್.ಹಿತೇಂದ್ರ ನೇಹಾ, ಅಂಜಲಿ ಕೇಸ್‌ನ ಪಿನ್ ಟು ಪಿನ್ ಮಾಹಿತಿ ಕೇಳಿದ್ದು, ಅವಳಿ ನಗರದ ಕ್ರೈಂ ಪ್ರಕರಣಗಳ ಮಾಹಿತಿ ಪಡೆದಿದ್ದಾರೆ. ಅವಳಿ ನಗರದಲ್ಲಿ ಇಲಾಖೆ ಕೈಗೊಂಡ ಕ್ರಮಗಳ ಸಂಬಂಧ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಎಡಿಜಿಪಿ ಹಿತೇಂದ್ರ ಅವರು, 'ಎಲೆಕ್ಷನ್ ಸಹ ಇತ್ತು, ಇದೇ ವೇಳೆ ಇಬ್ಬರು ಯುವತಿಯರ ಹತ್ಯೆಯಾಗಿದೆ. ಪೊಲೀಸ್ ಇಲಾಖೆ ಬಗ್ಗೆ ಸಾರ್ವಜನಿಕರಿಂದ ಅಭಿಪ್ರಾಯಗಳು ಬಂದಿದ್ದವು. ಹೀಗಾಗಿ ನಾನೇ ಬಂದು ಸಭೆ ಮಾಡಿದ್ದೇನೆ, ಸಮಗ್ರ ಮಾಹಿತಿ ಪಡೆದಿದ್ದೇನೆ. ಆದರೆ ಇಲಾಖೆಯ ಆಂತರಿಕ ವಿಚಾರ ಬಹಿರಂಗವಾಗಿ ಹೇಳಲು ಆಗುವುದಿಲ್ಲ. ಆದರೆ ಕ್ರೈಂ ಅಂಕಿ-ಅಂಶಗಳ ಬಗ್ಗೆ ನಾವು ಪರಿಶೀಲನೆ ಮಾಡುತ್ತಿದ್ದೇವೆ.
ಅಪರಾಧಗಳ ಅಂಕಿ-ಅಂಶ ನೋಡಿದ್ರೆ ಹಿಂದಿಗಿಂತ ಈ ಸಲ ಕಡಿಮೆ ಇದೆ. ಆದರೆ ಹು-ಧಾ ಸಾರ್ವಜನಿಕರಲ್ಲಿ ಆತಂಕದ ವಾತಾವರಣ ಮೂಡಿದೆ. ಹೀಗಾಗಿ ಸಭೆಯಲ್ಲಿ ಪೊಲೀಸ್ ಅಧಿಕಾರಿಗಳಿಗೆ ಕೆಲ ಸೂಚನೆ ಕೊಟ್ಟಿದ್ದೇನೆ. ಇದರಂತೆ ಅಪರಾಧ ಪ್ರಕರಣ ಕಡಿಮೆ ಮಾಡಲು ಕ್ರಮ ತೆಗೆದುಕೊಳ್ಳುತ್ತಾರೆ. ಸಾರ್ವಜನಿಕರಲ್ಲಿ ನಂಬಿಕೆ ಮೂಡಿಸುವ ಕೆಲಸ ಪೊಲೀಸರು ಮಾಡಲಿದ್ದಾರೆ ಎಂದರು.
''ರಾಜ್ಯ ಸರ್ಕಾರದ ನಿರ್ಧಾರಗಳ ಬಗ್ಗೆ ನಾನು ಬಹಿರಂಗವಾಗಿ ಹೇಳುವುದಿಲ್ಲ. ಪೊಲೀಸರ ವಿರುದ್ಧ ಸಾರ್ವಜನಿಕರಿಂದ ಕೆಲ ದೂರುಗಳು ಬಂದಿದ್ದವು. ದೂರು ಬಂದಾಗ ಕೆಲ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಅಂಜಲಿ ಅಜ್ಜಿ ಮೊದಲೇ ದೂರು ಕೊಡಲು ಬಂದಿದ್ದಳೆಂಬ ವಿಚಾರ ಬಂದಿತ್ತು. ಹೀಗಾಗಿ ಸಂಬಂಧಿಸಿದ ಪೊಲೀಸ್ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಹು-ಧಾ ಅವಳಿ ನಗರದಲ್ಲಿ ಪೊಲೀಸ್ ಠಾಣೆಗಳ ಸಂಖ್ಯೆ ಹೆಚ್ಚಿಸಲು ಕ್ರಮಕೈಗೊಳ್ಳಲಿದ್ದು, ಸಭೆಯ ಸಮಗ್ರವಾದ ವರದಿ ಗೃಹ ಸಚಿವರಿಗೆ ಸಲ್ಲಿಸುತ್ತೇನೆ'' ಎಂದರು.
Advertisement