
ಗದಗ: ರಥೋತ್ಸವದ ವೇಳೆ ಚಕ್ರದಡಿ ಸಿಲುಕಿ ಇಬ್ಬರು ಭಕ್ತರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಘಟನೆ ಗದಗ ಜಿಲ್ಲೆಯ ರೋಣ ಪಟ್ಟಣದಲ್ಲಿ ಶನಿವಾರ ವರದಿಯಾಗಿದೆ.
ಗದಗ ಜಿಲ್ಲೆಯ ರೋಣ ಪಟ್ಟಣದಲ್ಲಿ ಶನಿವಾರ ಸಂಜೆ ನಡೆದ ವೀರಭದ್ರೇಶ್ವರ ಜಾತ್ರೆಯ ರಥೋತ್ಸವದ ವೇಳೆ ಈ ಘಟನೆ ನಡೆದಿದೆ.
ಮೃತರನ್ನು ರೋಣದ ಕೆವಿಜಿ ಬ್ಯಾಂಕ್‌ನಲ್ಲಿ ಪಿಗ್ಮಿ ಕಲೆಕ್ಟರ್ ಆಗಿದ್ದ ಮಲ್ಲನಗೌಡ ಲಿಂಗನಗೌಡರ (52) ಎಂದು ಗುರ್ತಿಸಲಾಗಿದೆ. ಚಕ್ರದ ಮುಂದೆ ಬಿದ್ದು ಮುಖ ನಜ್ಜುಗುಜ್ಜಾಗಿದ್ದರಿಂದ ಮತ್ತೊಬ್ಬನ ಗುರುತು ಇನ್ನೂ ಪತ್ತೆಯಾಗಿಲ್ಲ.
ಘಟನೆಯ ಬಳಿಕ ರಥೋತ್ಸವ ಸ್ಥಗಿತಗೊಂಡಿದ್ದು, ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.
ಶನಿವಾರ ಸಂಜೆ ರಥೋತ್ಸವ ಆರಂಭವಾದಾಗ ಭಕ್ತರು ರಥದ ಮೇಲೆ ಒಣಗಿದ ಖರ್ಜೂರ, ಬಾಳೆಹಣ್ಣು ಎಸೆದರು. ರಥದ ಮೇಲೆ ಎಸೆದ ನಂತರ ಇವುಗಳನ್ನು ಪ್ರಸಾದವೆಂದು ಪರಿಗಣಿಸಲಾಗುತ್ತದೆ, ಆದ್ದರಿಂದ ಅವುಗಳನ್ನು ಜನರು ಸಂಗ್ರಹಿಸುತ್ತಿದ್ದರು. ಆದರೆ, ಜನದಟ್ಟಣೆ ಹೆಚ್ಚಾಗಿ ಇದ್ದರಿಂದ ಮೂವರು ರಥದ ಚಕ್ರಕ್ಕೆ ಸಿಲುಕಿದ್ದಾರೆ. ಈ ವೇಳೆ ಏರ್ವ ವ್ಯಕ್ತಿಯನ್ನು ಸ್ಥಳದಲ್ಲಿದ್ದವರು ಎಳೆದು ರಕ್ಷಿಸಿದ್ದಾರೆ. ಆದರೆ, ಇಬ್ಬರು ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೃತರೊಬ್ಬರ ಬಲಗೈಯಲ್ಲಿ ಕಪ್ಪು ದಾರವಿದ್ದು, ಎಡಗೈಯಲ್ಲಿ RKPWMBA G LOVE V ಎಂದು ಹಚ್ಚೆ ಹಾಕಿಕೊಂಡಿರುವ ಕೆಲವು ಇಂಗ್ಲಿಷ್ ಅಕ್ಷರಗಳು ಕಂಡು ಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಈ ಸಂಬಂಧ ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಥೋತ್ಸವದ ವೇಳೆ ಇಂತಹ ಘಟನೆಯನ್ನು ನೋಡುತ್ತಿರುವುದು ಇದೇ ಮೊದಲು. ಪ್ರತಿ ಬಾರಿಯೂ ನಾವು ಒಣಗಿದ ಖರ್ಜೂರ ಮತ್ತು ಬಾಳೆಹಣ್ಣುಗಳನ್ನು ಸಂಗ್ರಹಿಸಲು ಮುಂದೆ ಬರುತ್ತೇವೆ. ಯಾರಿಗೂ ಹಾನಿಯಾಗಿರಲಿಲ್ಲ. ಆದರೆ, ಈ ಬಾರಿ ನೂಕುನುಗ್ಗಲು ಆಗಿ, ತಳ್ಳಾಟವಾಗಿತ್ತು. ಇದರಿಂದ ಮೂವರು ಚಕ್ರದಡಿ ಸಿಲುಕಿದ್ದರು. ಅದೃಷ್ಟವಶಾತ್ ಓರ್ವ ಪಾರಾದ. ಆದರೆ ಇಬ್ಬರು ಸಾವನ್ನಪ್ಪಿದ್ದಾರೆಂದು ಕೆಲ ಭಕ್ತರು ಹೇಳಿದ್ದಾರೆ.
Advertisement