
ಬೆಂಗಳೂರು: ನಗರದಲ್ಲಿ ಸಿಗರೇಟ್ ಸೇದಿ ಕೊನೆಯಲ್ಲಿ ಉಳಿಯುವ ತುಂಡುಗಳನ್ನು ಎಸೆಯುವುದರಿಂದ ಪರಿಸರಕ್ಕೆ ಹಾನಿಯುಂಟಾಗುತ್ತಿದೆ. ಈ ಸಮಸ್ಯೆಯನ್ನು ಪರಿಹರಿಸುವುದಕ್ಕೆ ಬಿಬಿಎಂಪಿ ಧೂಮಪಾನ ಹಾಟ್ ಸ್ಪಾಟ್ ಗಳಲ್ಲಿ ವಿಶೇಷ ಡಬ್ಬಗಳನ್ನು ಇರಿಸಲು ನಿರ್ಧರಿಸಿದೆ.
ಸಿಗರೇಟ್ ಉತ್ಪಾದಕರ ಸಹಯೋಗದೊಂದಿಗೆ ಸಿಗರೇಟ್, ಬೀಡಿ ತುಂಡುಗಳನ್ನು ಎಸೆಯುವುದಕ್ಕೆ ಪ್ರತ್ಯೇಕ ಡಬ್ಬಗಳನ್ನು ಸ್ಥಾಪಿಸಲು ಬಿಬಿಎಂಪಿ ಮುಂದಾಗಿದೆ.
ರಾಷ್ಟ್ರೀಯ ಹಸಿರು ನ್ಯಾಯಮಂಡಳಿ(ಎನ್ ಜಿಟಿ) ಮಾರ್ಗಸೂಚಿಗಳ ಪ್ರಕಾರ, ನಗರದಲ್ಲಿನ ಸಿಗರೇಟ್, ಬೀಡಿ ತುಂಡುಗಳನ್ನು ಸಂಗ್ರಹಿಸಿ, ಸ್ಥಳಾಂತರಿಸಿ ವಿಲೇವಾರಿ ಮಾಡುವುದಕ್ಕೆ ಬಿಬಿಎಂಪಿ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ.
ಪ್ರಾಯೋಗಿಕ ಆಧಾರದ ಮೇಲೆ ಧೂಮಪಾನದ ಹಾಟ್‌ಸ್ಪಾಟ್‌ಗಳಲ್ಲಿ ಸಿಗರೇಟ್ ತುಂಡುಗಳ ಸಂಗ್ರಹಕ್ಕಾಗಿ 'ಮೀಸಲಾದ ಬುಟ್ಟಿಗಳನ್ನು' ಇರಿಸಲು ಸಿಗರೇಟ್ ತಯಾರಕರೊಂದಿಗೆ ಕೆಲಸ ಮಾಡಲು ಬಿಬಿಎಂಪಿಯ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಲಿಮಿಟೆಡ್ ನ್ನು (BSWML) ನಿಯೋಜಿಸಲಾಗಿದೆ.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (KSPCB), ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಡಿಯಲ್ಲಿ ಬರುವ ರಾಜ್ಯ ತಂಬಾಕು ನಿಯಂತ್ರಣ ಕೋಶ, ತಂಬಾಕು ಉತ್ಪನ್ನಗಳ ಪ್ಯಾಕೆಟ್‌ಗಳ ಮೇಲೆ ವಿಲೇವಾರಿ ಸೂಚನೆಗಳನ್ನು ಮುದ್ರಿಸಲು ಸಿಗರೇಟ್ ಮತ್ತು ಬೀಡಿ ತಯಾರಕರಿಗೆ ನಿರ್ದೇಶನ ನೀಡುವಂತೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯಕ್ಕೆ ಪತ್ರ ಬರೆಯಲಿದೆ.
ತಂಬಾಕು ನಿಯಂತ್ರಣ ಘಟಕ ಪುರಸಭೆ ಆಡಳಿತ ನಿರ್ದೇಶನಾಲಯ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳ ಸಮಿತಿಯನ್ನು ಸ್ಥಾಪಿಸಿ, ಸಿಗರೇಟ್ ತುಂಡುಗಳ ಸುರಕ್ಷಿತ ವಿಲೇವಾರಿಗಾಗಿ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (ಎಸ್ಒಪಿ)ನ್ನು ರೂಪಿಸುತ್ತದೆ. ಬಿಬಿಎಂಪಿಯ ಪ್ರಾಯೋಗಿಕ ಯೋಜನೆಯನ್ನು ಆಧರಿಸಿ, ಈ ಪ್ರಕ್ರಿಯೆಯನ್ನು ರಾಜ್ಯಾದ್ಯಂತ ಜಾರಿಗೆ ತರಲಾಗುತ್ತದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ. ಸಿಗರೇಟ್ ಹಾಗೂ ಬೀಡಿ ತುಂಡುಗಳು ಸೆಲ್ಯುಲೋಸ್ ಅಸಿಟೇಟ್ ಎಂದು ಕರೆಯಲ್ಪಡುವ ಸಿಂಥೆಟಿಕ್ ಪಾಲಿಮರ್‌ಗಳನ್ನು ಹೊಂದಿದ್ದು, ನಿಧಾನ/ಜೈವಿಕವಲ್ಲದ ಪ್ಲಾಸ್ಟಿಕ್ ಆಗಿದೆ. ಸೆಲ್ಯುಲೋಸ್ ಅಸಿಟೇಟ್ ನ್ನು ಅಸಿಟಿಕ್ ಆಮ್ಲದೊಂದಿಗೆ ಹತ್ತಿ ಅಥವಾ ಮರದ ತಿರುಳನ್ನು ಎಸ್ಟಿಫೈಯಿಂಗ್/ ಬ್ಲೀಚಿಂಗ್ ಮಾಡುವ ಮೂಲಕ ತಯಾರಿಸಲಾಗುತ್ತದೆ.
Advertisement