
ಗಂಗಾವತಿ: ಬಿಜೆಪಿ ನಾಯಕ ಹಾಗೂ ಮಾಜಿ ಸಚಿವ ಗಣಿ ಧಣಿ ಜನಾರ್ಧನ ರೆಡ್ಡಿ ಮತ್ತೆ ಸುದ್ದಿಯಲ್ಲಿದ್ದು ಈ ಬಾರಿ ತಮ್ಮ ಪ್ರೀತಿಯ ಮಡದಿಗಾಗಿ ಮಾವು ಕೀಳಲು ಮರವೇರಿ ಸುದ್ದಿಗೆ ಗ್ರಾಸವಾಗಿದ್ದಾರೆ.
ಹೌದು.. ಗಂಗಾವತಿ ಶಾಸಕ ಜಿ. ಜನಾರ್ದನರೆಡ್ಡಿ (Janardhan Reddy) ತಮ್ಮ ಪ್ರೀತಿಯ ಮಡದಿಗಾಗಿ ಮಾವು ಕೀಳಲು ಮರವೇರಿರುವ ಹಳೆಯ ವಿಡಿಯೋವೊಂದು ವ್ಯಾಪಕ ವೈರಲ್ ಆಗುತ್ತಿದೆ.
ವಿಡಿಯೋದಲ್ಲಿ ಪತ್ನಿ ಲಕ್ಷ್ಮಿ ಅರುಣಾರೊಂದಿಗೆ ತಮ್ಮ ಮಾವಿನ ತೋಟದಲ್ಲಿ ವಿಹರಿಸುತ್ತಿರುವಾಗ ಜನಾರ್ದನರೆಡ್ಡಿ ಮಾವಿನ ಮರವನ್ನು ಪ್ರಯಾಸಪಟ್ಟು ಏರಿ ಕಾಯಿಯೊಂದನ್ನು ಕಿತ್ತು ಪತ್ನಿಯ ಕೈಗಿಡುತ್ತಾರೆ. ಮರದ ಟೊಂಗೆಗಳ ಮೇಲೆ ಶಾಸಕ ರೆಡ್ಡಿ ಜಾಗ್ರತೆಯಿಂದ ಹೆಜ್ಜೆ ಇಡುತ್ತಾ, ಬ್ಯಾಲೆನ್ಸ್ ಮಾಡಿ ಕಾಯಿ ಕಿತ್ತು, ಮರಳಿ ಮರ ಇಳಿಯುವಾಗ ತಮ್ಮ ಬಾಲ್ಯವನ್ನು ನೆನೆಸಿಕೊಂಡು ಇಳಿಯಲು ಪ್ರಯಾಸ ಪಡುವುದು ವಿಡಿಯೊದಲ್ಲಿ ಸೆರೆಯಾಗಿದೆ.
ಸದ್ಯ ಮಾವಿನ ಹಣ್ಣಿನ ಸೀಸನ್ ಆಗಿರುವುದರಿಂದ ತರಹೇವಾರಿ ಹಣ್ಣುಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಈ ನಡುವೆ ಜನಾರ್ದನ ರೆಡ್ಡಿ ಅವರು ಮಡದಿಗಾಗಿ ಮಾವಿನ ಕಾಯಿ ಕಿತ್ತುಕೊಟ್ಟಿರುವ ಹಳೆಯ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ಎಂಆರ್ ರಾಧಾಕೃಷ್ಣ ರೆಡ್ಡಿ ಎನ್ನುವವರು ಈ ವಿಡಿಯೋವನ್ನು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಇದು 2019ರಲ್ಲಿ ರೆಡ್ಡಿ ಅವರ ಮಾವಿನ ತೋಟದಲ್ಲಿ ತೆಗೆದಿರುವ ವಿಡಿಯೊ ಎನ್ನಲಾಗಿದೆ.
Advertisement