
ಬೆಂಗಳೂರು: ಮೊನ್ನೆ ಭಾನುವಾರ ವಾರಾಂತ್ಯ ಮಧ್ಯರಾತ್ರಿ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಜಿಆರ್ ಫಾರಂ ಹೌಸ್ನಲ್ಲಿ ನಡೆದ ರೇವ್ ಪಾರ್ಟಿಯಲ್ಲಿ ತೆಲುಗು ಚಿತ್ರರಂಗದ ನಟಿ ಹೇಮಾ ಸೇರಿದಂತೆ ಹಲವು ಸೆಲೆಬ್ರಿಟಿಗಳು ಭಾಗಿಯಾಗಿದ್ದರು ಎಂಬ ಸುದ್ದಿ ಹರಿದಾಡಿತ್ತು.
ಆದರೆ ತಾವು ಪಾರ್ಟಿಯಲ್ಲಿರಲಿಲ್ಲ, ನಾನು ಹೈದರಾಬಾದ್ ನಲ್ಲಿ ಫಾರ್ಮ್ ಹೌಸ್ ನಲ್ಲಿದ್ದೇನೆ ಎಂದು ಮೊದಲೊಂದು ವಿಡಿಯೊ ಮಾಡಿ ನಂತರ ನಿನ್ನೆ ಮನೆಯಲ್ಲಿ ಅಡುಗೆ ಮಾಡುತ್ತಿರುವ ವಿಡಿಯೊವನ್ನು ನಟಿ ಹೇಮಾ ಹರಿಬಿಟ್ಟಿದ್ದರು. ಆದರೆ ಅದು ಸುಳ್ಳು, ಅವರು ಜಿ ಆರ್ ಫಾರಂ ಹೌಸ್ ನಲ್ಲಿಯೇ ಇದ್ದಾರೆ ಎಂದು ಹೇಳಲಾಗುತ್ತಿತ್ತು. ಇಂದು ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ಸುದ್ದಿಗೋಷ್ಠಿ ನಡೆಸಿ ರೇವ್ ಪಾರ್ಟಿ ಮೇಲೆ ನಡೆದ ಸಿಸಿಬಿ ಪೊಲೀಸರ ದಾಳಿಯ ಬಗ್ಗೆ ಇಂಚಿಂಚು ಮಾಹಿತಿಯನ್ನು ತಿಳಿಸಿದ್ದಾರೆ.
ನಟಿ ಹೇಮಾ, ಜಿಆರ್ ಫಾರಂ ಹೌಸ್ ನಲ್ಲಿ ಇದ್ದಿದ್ದು ನಿಜ ಎಂದಿದ್ದಾರೆ. ಪಾರ್ಟಿಗೆ ಬಂದಿದ್ದ ಎಲ್ಲರ ರಕ್ತ ಪರೀಕ್ಷೆ ಮಾಡಿ ಹೊರಕಳಿಸಿದಾಗ ಹೇಗೋ ಕಣ್ತಪ್ಪಿಸಿ ಹೋಗಿ ಹೇಮಾ ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ ಎಂದು ಆಯುಕ್ತರು ತಿಳಿಸಿದ್ದಾರೆ.
ರೇವ್ ಪಾರ್ಟಿಯಲ್ಲಿ ತೆಲುಗು ನಟಿ ಹೇಮಾ ಭಾಗಿಯಾಗಿದ್ದು ಸತ್ಯ. ಫಾರ್ಮ್ ಹೌಸ್‌ನಲ್ಲೇ ನಟಿ ವಿಡಿಯೋ ಮಾಡಿ ಹೇಳಿಕೆ ಬಿಡುಗಡೆ ಮಾಡಿರುವ ಪ್ರಕರಣದ ಕುರಿತು ಯಾವ ಸಂದರ್ಭದಲ್ಲಿ ವಿಡಿಯೋ ಮಾಡಿದ್ದಾರೆಂಬ ಬಗ್ಗೆ ಪರಿಶೀಲನೆ ನಡೆಯುತ್ತಿದೆ ಎಂದು ದಯಾನಂದ್ ಹೇಳಿದ್ದಾರೆ. ಸದ್ಯ ಹೇಮಾ ಅವರ ರಕ್ತದ ಮಾದರಿ ತೆಗೆದುಕೊಂಡು ಅವರನ್ನು ಕಳುಹಿಸಲಾಗಿದೆ. ಮೆಡಿಕಲ್ ಟೆಸ್ಟ್ ಬಳಿಕ ಸ್ಟೇಷನ್ ಬೇಲ್ ಮೇಲೆ ಹೇಮಾರನ್ನು ಬಿಡುಗಡೆ ಮಾಡಲಾಗಿದೆ ಎಂದು ದಯಾನಂದ್ ಮಾತನಾಡಿದ್ದಾರೆ.
101 ಜನರು ಭಾಗಿ: ನಗರದ ಹೊರವಲಯದ ಫಾರ್ಮ್‍ಹೌಸ್‍ನಲ್ಲಿ ರೇವ್ ಪಾರ್ಟಿ ನಡೆಸಿದ ಪ್ರಕರಣವನ್ನು ಹೆಬ್ಬಗೋಡಿ ಠಾಣಾ ಪೊಲೀಸರಿಗೆ ಹಸ್ತಾಂತರಿಸಲಾಗಿದ್ದು, ಪಾರ್ಟಿಯಲ್ಲಿ 101 ಮಂದಿ ಭಾಗಿಯಾಗಿದ್ದರು. ಇದರಲ್ಲಿ ಯಾವುದೇ ಜನಪ್ರತಿನಿಧಿಗಳು ಇರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಫಾರ್ಮ್‍ಹೌಸ್ ನಲ್ಲಿ ‘ಸನ್‍ಸೆಟ್ ಟು ಸನ್‍ರೈಸ್ ವಿಕ್ಟರಿ ಈವೆಂಟ್’ನಲ್ಲಿ ಹೊರ ರಾಜ್ಯದವರು ಸೇರಿದಂತೆ ಕೆಲ ಸ್ಥಳೀಯರು ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದ್ದಾರೆಂಬ ಮಾಹಿತಿ ಆಧರಿಸಿ ದಾಳಿ ನಡೆಸಲಾಗಿತ್ತು. ಸಿಸಿಬಿ ಪೊಲೀಸರ ದಾಳಿ ವೇಳೆ ಮಾದಕ ಪದಾರ್ಥಗಳು ಪತ್ತೆಯಾಗಿವೆ. ಕೆಲವರು ಬಳಸುತ್ತಿದ್ದ ಮಾದಕ ಪದಾರ್ಥಗಳನ್ನು ಸ್ವಿಮ್ಮಿಂಗ್ ಪೂಲ್ ಮತ್ತಿತರ ಕಡೆ ಎಸೆದಿದ್ದಾರೆ. ಘಟನೆ ಸಂಬಂಧ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಐವರನ್ನು ಬಂಧಿಸಲಾಗಿದೆ ಎಂದರು.
ಈ ಕಾರ್ಯಚರಣೆಯಲ್ಲಿ ಶ್ವಾನದಳ ಬಳಕೆ ಮಾಡಿರುವುದರಿಂದ ಕಾರ್ಯಾಚರಣೆ ಯಶಸ್ವಿಯಾಗಿದೆ. ಅಲ್ಲಿದ್ದ ಕೆಲವರು ಮಾದಕವಸ್ತುಗಳನ್ನು ಕಾರು ಮತ್ತು ವಿವಿಧೆಡೆ ಬಚ್ಚಿಡಲಾಗಿದ್ದ ಮಾದಕ ವಸ್ತುಗಳನ್ನು ಶ್ವಾನದಳ ಪತ್ತೆ ಹಚ್ಚಿದೆ. 2023ರಲ್ಲಿ ಶ್ವಾನದಳಕ್ಕೆ ಮಾದಕವಸ್ತು ಪತ್ತೆಗೆ ವಿಶೇಷ ತರಬೇತಿ ನೀಡಲಾಗಿತ್ತು. ಆ ಶ್ವಾನಗಳನ್ನು ಮೊದಲ ಬಾರಿ ಈ ಕಾರ್ಯಚರಣೆಗೆ ಬಳಸಿ ಯಶಸ್ವಿಯಾಗಿದ್ದೇವೆ ಎಂದರು.
Advertisement