
ಬೆಂಗಳೂರು: ಸರ್ಜಾಪುರ-ಮಾರತಹಳ್ಳಿ ರಸ್ತೆಯಲ್ಲಿ ನಡೆದ ರೋಡ್ ರೇಜ್ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಗಲಾಟೆಯಲ್ಲಿ ಕಾರಿನಲ್ಲಿ ಆಸ್ಪತ್ರೆಗೆ ತೆರಳುತ್ತಿದ್ದ ಕೇರಳ ಮೂಲದ ದಂಪತಿಯ ಮೂರು ವರ್ಷದ ಮಗಳು ಗಾಯಗೊಂಡಿದ್ದಾಳೆ.
ಕಳೆದ ಶುಕ್ರವಾರ ಬೆಳಗ್ಗೆ 10.40ರ ಸುಮಾರಿಗೆ ಸರ್ಜಾಪುರ-ಮಾರತಹಳ್ಳಿ ರಸ್ತೆಯ ಕೊಡತಿಯಲ್ಲಿರುವ ಸೇಂಟ್ ಪ್ಯಾಟ್ರಿಕ್ ಅಕಾಡೆಮಿ ಎದುರು ಈ ಘಟನೆ ನಡೆದಿದೆ. ಈ ಸಂಬಂಧ ವರ್ತೂರು ಪೊಲೀಸ್ ಠಾಣೆಯಲ್ಲಿ ದೂರು ಮತ್ತು ಪ್ರತಿದೂರು ದಾಖಲಾಗಿದೆ.
ಕೊಡತಿ ನಿವಾಸಿ ಅಖಿಲ್ ಸಾಬು(32) ಎಂಬುವರು ತಮ್ಮ ಪತ್ನಿಯನ್ನು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಬೈಕ್ ಸವಾರ, ದೊಮ್ಮಸಂದ್ರ ನಿವಾಸಿ ಜಗದೀಶ್ ಅವರೊಂದಿಗೆ ಗಲಾಟೆಯಾಗಿದೆ.
TNIE ಯೊಂದಿಗೆ ಮಾತನಾಡಿದ ಸಾಬು, ಬೈಕರ್ ಜಗದೀಶ್ ಎಡದಿಂದ ಹಿಂದಿಕ್ಕಲು ಪ್ರಯತ್ನಿಸುತ್ತಿದ್ದರು. ಅಷ್ಟೇನೂ ಜಾಗವಿಲ್ಲದ ಕಾರಣ ಓವರ್‌ಟೇಕ್ ಮಾಡಲು ಸಾಧ್ಯವಾಗಲಿಲ್ಲ. ಹೀಗಾಗಿ ನನ್ನ ಕಾರಿನ ಕೇರಳ ನೋಂದಣಿ ಸಂಖ್ಯೆ ನೋಡಿ ಕನ್ನಡ ಗೊತ್ತಿಲ್ಲ ಎಂದು ನಿಂದಿಸಲು ಆರಂಭಿಸಿದ. ನಂತ ಆತ ಹೇಗೋ ಎಡಬದಿಯಿಂದ ನನ್ನನ್ನು ಓವರ್‌ಟೇಕ್ ಮಾಡಿ ನಮ್ಮ ಕಾರಿನ ಮುಂದೆ ಬೈಕ್ ನಿಲ್ಲಿಸಿ ಜಗಳಕ್ಕೆ ಬಂದರು. ನನ್ನ ಬಳಿ ಬಂದು ನಿಂದಿಸಲು ಪ್ರಾರಂಭಿಸಿದಾಗ ನಾನು ಕಿಟಕಿಯನ್ನು ಮುಚ್ಚಿದೆ. ಇದರಿಂದ ಆಕ್ರೋಶಗೊಂಡ ಅವರು, ಎಡಭಾಗದಲ್ಲಿ ನನ್ನ ಹೆಂಡತಿ ಮತ್ತು ಮಗಳನ್ನು ನೋಡಿ, ಅವರ ಬಳಿಗೆ ಹೋಗಿ ಹೆಲ್ಮೆಟ್‌ನಿಂದ ಕಿಟಕಿಯನ್ನು ಒಡೆದರು. ಪರಿಣಾಮ ಗಾಜು ಒಡೆದು ಹೆಲ್ಮೆಟ್ ನನ್ನ ಹೆಂಡತಿಯ ಮಡಿಲಲ್ಲಿ ಕುಳಿತಿದ್ದ ಮಗಳ ಮೇಲೆ ಬಿದ್ದಿತು. ಸಣ್ಣ ಗಾಜಿನ ತುಂಡುಗಳಿಂದ ಯಾವುದೇ ಗಾಯಗಳಾಗಿಲ್ಲ. ಆದರೆ ನನ್ನ ಮಗಳು ಆಘಾತಕ್ಕೊಳಗಾಗಿದ್ದಾಳೆ” ಎಂದು ಹೇಳಿದ್ದಾರೆ.
ಸಾಬು ತನ್ನ ಕುಟುಂಬವನ್ನು ರಕ್ಷಿಸುವ ಸಲುವಾಗಿ ಕಾರಿನಿಂದ ಹೊರಬಂದಾಗ ಸಾಬು ಅವರ ಪತ್ನಿ ಈ ಘಟನೆಯನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಲು ಆರಂಭಿಸಿದರು. ಈ ವೇಳೆ ಜಗದೀಶ್ ಬೈಕ್ ಸ್ಟಾರ್ಟ್ ಮಾಡಿ ಅಲ್ಲಿಂದ ಹೊರಟು ಹೋದರು.
"ಘಟನೆ ನಡೆದ 30 ನಿಮಿಷಗಳಲ್ಲಿ ನಾನು ವರ್ತೂರು ಪೊಲೀಸ್ ಠಾಣೆಗೆ ದೂರು ನೀಡಲು ತೆರಳಿದೆ. ಆದರೆ ನನಗೂ ಮೊದಲೆೇ ಆ ಬೈಕ್ ಸವಾರ ಪೊಲೀಸ್ ಠಾಣೆಗೆ ತೆರಳಿದ್ದ. ಅವರು ನನ್ನ ವಿರುದ್ಧ ಸುಳ್ಳು ಮತ್ತು ಆಧಾರರಹಿತ ಆರೋಪ ಮಾಡಿದ್ದಾರೆ. ನಾನು ದೂರು ದಾಖಲಿಸಿದ ನಂತರ ಅವರೂ ಪ್ರತಿದೂರು ದಾಖಲಿಸಿದ್ದಾರೆ. ಮಂಗಳವಾರ ರಾತ್ರಿಯೇ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಿದ್ದು, ಆರೋಪಿಯನ್ನು ಇನ್ನೂ ಬಂಧಿಸಿಲ್ಲ ಎಂದು ಸಾಬು ತಿಳಿಸಿದ್ದಾರೆ.
ಸಾಬು ದೂರು ನೀಡಿದ್ದು, ಜಗದೀಶ್ ಪ್ರತಿದೂರು ದಾಖಲಿಸಿದ್ದಾರೆ ಎಂದು ವರ್ತೂರು ಪೊಲೀಸರು ತಿಳಿಸಿದ್ದಾರೆ. "ಪ್ರಕರಣ ಇನ್ನೂ ತನಿಖೆಯಲ್ಲಿದೆ. ನಾವು ಇನ್ನೂ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಬೇಕಾಗಿದೆ. ಸಾಬು ಮತ್ತು ಜಗದೀಶ್ ಇಬ್ಬರೂ ಪರಸ್ಪರ ಆರೋಪ ಮಾಡುತ್ತಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು," ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Advertisement