ಪ್ರಜ್ವಲ್ ಎಲ್ಲಿದ್ದಾನೋ ಗೊತ್ತಿಲ್ಲ, ಪ್ರಕರಣ ಸಂಬಂಧ ಏನನ್ನೂ ಕೇಳದಿರಿ: ಮಾಧ್ಯಮಗಳಿಗೆ ರೇವಣ್ಣ ಮನವಿ
ಬೆಂಗಳೂರು: ಪ್ರಜ್ವಲ್ ಎಲ್ಲಿದ್ದಾನೋ ಗೊತ್ತಿಲ್ಲ. ಲೈಂಗಿಕ ದೌರ್ಜನ್ಯ ಪ್ರಕರಣ ಪ್ರಸ್ತುತ ನ್ಯಾಯಾಲಯದ ಅಂಗಳದಲ್ಲಿದ್ದು, ಪ್ರಕರಣ ಸಂಬಂಧ ನನ್ನನ್ನೂ ಏನನ್ನೂ ಕೇಳದಿರಿ ಎಂದು ಮಾಧ್ಯಮಗಳಿಗೆ ಹೆಚ್'ಡಿ.ರೇವಣ್ಣ ಅವರು ಮನವಿ ಮಾಡಿಕೊಂಡಿದ್ದಾರೆ.
ತಮ್ಮ ಪುತ್ರ ಪ್ರಜ್ವಲ್ ರೇವಣ್ಣ ಅವರ ವಿರುದ್ಧದ ಲೈಂಗಿಕ ಹಗರಣ, ಎಸ್‌ಐಟಿ ತನಿಖೆ, ಮಹಿಳೆಯ ಅಪಹರಣ ಮತ್ತು ಲೈಂಗಿಕ ಕಿರುಕುಳ ಪ್ರಕರಣಗಳ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.
ಈ ವಿಚಾರ ಪ್ರಸ್ತುತ ನ್ಯಾಯಾಲಯದ ಮುಂದಿರುವ ಕಾರಣ ಈ ಬಗ್ಗೆ ಪ್ರತಿಕ್ರಿಯಿಸಲು ಬಯಸುವುದಿಲ್ಲ ಎಂದು ಹೇಳಿದರು.
ಪ್ರಜ್ವಲ್ ಇರುವಿಕೆಯ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಹಗರಣದ ಬಗ್ಗೆ ಏನನ್ನೂ ಕೇಳಬೇಡಿ. ಸೂಕ್ತ ಸಮಯದಲ್ಲಿ ಎಲ್ಲದಕ್ಕೂ ಪ್ರತಿಕ್ರಿಯೆ ನೀಡುತ್ತೇನೆಂದು ಮಾಧ್ಯಮಗಳಿಗೆ ಮನವಿ ಮಾಡಿದರು.
ಬಳಿಕ ಪ್ರಜ್ವಲ್ ಅವರ ಪ್ರಕರಣವು ಪರಿಷತ್ ಚುನಾವಣೆಯ ಮೇಲೆ ಬೀರಬಹುದೇ ಎಂಬ ಪ್ರಶ್ನೆಗೂ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.
ಇದಕ್ಕೂ ಮುನ್ನ ಹೊಳೆನರಸೀಪುರದ ಆಂಜನೇಯಸ್ವಾಮಿ ದೇಗುಲ ಸೇರಿದಂತೆ ವಿವಿಧ ದೇವಸ್ಥಾನಗಳಿಗೆ ಕುಟುಂಬ ಸದಸ್ಯರೊಂದಿಗೆ ಭೇಟಿ ನೀಡಿದ ರೇವಣ್ಣ, ವಿಶೇಷ ಪೂಜೆ ಸಲ್ಲಿಸಿದರು.
ಈ ವೇಳೆ ಮಾತಾಡಿದ ಅವರು, ಎಚ್.ಡಿ.ದೇವೇಗೌಡ ಹಾಗೂ ಅವರ ಕುಟುಂಬ ರಾಜಕೀಯವಾಗಿ ಸದೃಢವಾಗಿ ಬೆಳೆಯಲು ಬೆಂಬಲ ನೀಡಿದ ಹೊಳೆನರಸೀಪುರದ ಜನರನ್ನು ನಮ್ಮ ಕುಟುಂಬ ಯಾವತ್ತೂ ಕಡೆಗಣಿಸಿಲ್ಲ. ಜನರು ನಮಗೆ ಬೆಂಬಲ ನೀಡಲಿದ್ದಾರೆ ಎಂಬ ವಿಶ್ವಾಸವಿದೆ ಎಂದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ