ಉತ್ತರ ಕನ್ನಡ ಜಿಲ್ಲೆಯಲ್ಲಿ 108 ಮಂಗನ ಕಾಯಿಲೆ ಪ್ರಕರಣ ಪತ್ತೆ!

ಉತ್ತರ ಕನ್ನಡ ಜಿಲ್ಲೆಯಲ್ಲಿ ಇದೂವರೆಗೆ 108 ಮಂಗನ ಕಾಯಿಲೆ (ಕ್ಯಾಸನೂರು ಫಾರೆಸ್ಟ್ ಡಿಸೀಸ್-ಕೆಎಫ್‌ಡಿ) ಪ್ರಕರಣಗಳು ಪತ್ತೆಯಾಗಿದ್ದು, ಇದು ಆತಂಕ ಹೆಚ್ಚಾಗುವಂತೆ ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಸಿದ್ದಾಪುರ (ಉತ್ತರ ಕನ್ನಡ): ಉತ್ತರ ಕನ್ನಡ ಜಿಲ್ಲೆಯಲ್ಲಿ ಇದೂವರೆಗೆ 108 ಮಂಗನ ಕಾಯಿಲೆ (ಕ್ಯಾಸನೂರು ಫಾರೆಸ್ಟ್ ಡಿಸೀಸ್-ಕೆಎಫ್‌ಡಿ) ಪ್ರಕರಣಗಳು ಪತ್ತೆಯಾಗಿದ್ದು, ಇದು ಆತಂಕ ಹೆಚ್ಚಾಗುವಂತೆ ಮಾಡಿದೆ.

ಆರೋಗ್ಯ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, 2019ರಲ್ಲಿ 50 ಪ್ರಕರಣಗಳು ಪತ್ತೆಯಾಗಿದ್ದವು. ಆದರೆ, ಪ್ರಸಕ್ತ ಸಾಲಿನಲ್ಲಿ ಪ್ರಕರಣಗಳ ಸಂಖ್ಯೆ ದ್ವಿಗುಣಗೊಂಡಿರುವುದು ತಿಳಿದುಬಂದಿದೆ.

ಜಿಲ್ಲಾ ಆರೋಗ್ಯ ಅಧಿಕಾರಿ ಡಾ ನೀರಜ್ ಅವರು ಮಾತನಾಡಿ, ಜಿಲ್ಲೆಯಲ್ಲಿ ರೋಗ ಹರಡದಂತೆ ಮಾಡಲು ಹಲವು ಕ್ರಮಗಳ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಸಿದ್ದಾಪುರ ಒಂದರಲ್ಲೇ 100 ಪ್ರಕರಣಗಳು ದಾಖಲಾಗಿವೆ. ಉಳಿದ ಎಂಟು ಪ್ರಕರಣಗಳು ಜೊಯಿಡಾ, ಶಿರಸಿ ಮತ್ತು ಅಂಕೋಲಾದಲ್ಲಿ ಪತ್ತೆಯಾಗಿವೆ. ಈ ವರ್ಷ ಐದು ಮತ್ತು ಒಂಬತ್ತು ವರ್ಷದ ಇಬ್ಬರು ಮಕ್ಕಳು ಸೇರಿದಂತೆ ಒಂಬತ್ತು ಜನರು ಸಾವನ್ನಪ್ಪಿದ್ದಾರೆ. ಆತಂಕದ ವಿಚಾರವೆಂದರೆ ಈ ಎಲ್ಲಾ ಸಾವುಗಳು ಸಿದ್ದಾಪುರ ತಾಲೂಕಿನಲ್ಲಿ ವರದಿಯಾಗಿದೆ.

ಕಡಿಮೆ ರೋಗನಿರೋಧಕ ಶಕ್ತಿಯಿಂದಾಗಿ ಮಕ್ಕಳು ರೋಗಕ್ಕೆ ತುತ್ತಾದರು. ಇತರರು, ಹಿರಿಯ ನಾಗರೀಕರು, ದೀರ್ಘಕಾಲಿಕ ರೋಗದಿಂದ ಬಳಲುತ್ತಿರುವವರಾಗಿದ್ದಾರೆಂದು ತಿಳಿಸಿದ್ದಾರೆ.

ಜಿಲ್ಲೆಯಾದ್ಯಂತ ಪರೀಕ್ಷೆ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಸ್ವಯಂಸೇವಕರು ಕಾಡುಗಳು ಮತ್ತು ದೂರದ ಹಳ್ಳಿಗಳಲ್ಲಿ ಸತ್ತ ಕೋತಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಜೊತೆಗೆ ಜಿಲ್ಲೆಯಲ್ಲಿ ಜಾಗೃತಿ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗಿದೆ. ಜನವರಿ 20 ರಿಂದ ಈ ವರೆಗೂ 2,242 ರಕ್ತದ ಮಾದರಿಗಳನ್ನು ಪರೀಕ್ಷಿಸಲಾಗಿದೆ. ಈ ಪೈಕಿ 108 ಮಂದಿಯಲ್ಲಿ ಮಂಗನ ಕಾಯಿಲೆ ಪತ್ತೆಯಾಗಿದೆ.

ಸಂಗ್ರಹ ಚಿತ್ರ
ಮಂಗನ ಕಾಯಿಲೆ ಅಥವಾ Monkey Fever (ಕುಶಲವೇ ಕ್ಷೇಮವೇ)

ರಕ್ತದ ಮಾದರಿಗಳನ್ನು ಶಿವಮೊಗ್ಗದ ಕೆಎಫ್‌ಡಿ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತಿದೆ. ಮೃತರಲ್ಲಿ ಒಬ್ಬರು ಮೇ ತಿಂಗಳಲ್ಲಿ ಮತ್ತು ಮತ್ತೊಬ್ಬರು ಏಪ್ರಿಲ್‌ನಲ್ಲಿ ಸಾವನ್ನಪ್ಪಿದ್ದಾರೆ. ಮಾರ್ಚ್‌ನಲ್ಲಿ ಏಳು ಮಂದಿ ಸಾವನ್ನಪ್ಪಿದ್ದರು. ಈ ವರ್ಷ ಸುದೀರ್ಘ ಒಣಹವೆ ಮತ್ತು ತಾಪಮಾನದಲ್ಲಿ ಏರಿಕೆಯಾಗಿದ್ದ ಹಿನ್ನೆಲೆಯಲ್ಲಿ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು, ಮಳೆಗಾಲ ಪ್ರಾರಂಭವಾಗುವವರೆಗೂ ವೈರಸ್ ಸಕ್ರಿಯವಾಗಿರುತ್ತದೆ ಎಂದು ನೀರಜ್ ಅವರು ತಿಳಿಸಿದ್ದಾರೆ.

ಅಪಾಯ ಹೆಚ್ಚಿರುವ ಪ್ರದೇಶಗಳಲ್ಲಿ ವಿಶೇಷ ಅಭಿಯಾನವನ್ನು ನಡೆಸಲಾಗುತ್ತಿದೆ, ಅಲ್ಲಿ ಸ್ವಯಂಸೇವಕರು ಮನೆಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ. ಮಂಗನ ಜ್ವರ ಮತ್ತು ಅದರ ರೋಗಲಕ್ಷಣಗಳ ಬಗ್ಗೆ ಜನರಿಗೆ ಶಿಕ್ಷಣ ನೀಡುತ್ತಿದ್ದಾರೆ. ಜ್ವರದಿಂದ ಬಳಲುತ್ತಿರುವವರ ರಕ್ತದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸುತ್ತಿದ್ದಾರೆ. ಅರಣ್ಯಕ್ಕೆ ಹೋಗುವ ಜನರಿಗೆ ಶಿಕ್ಷಣ ನೀಡುತ್ತಿದ್ದಾರೆ. ಅರಣ್ಯಕ್ಕೆ ಹೋಗುವುದಕ್ಕೂ ಮುನ್ನ DEPA ತೈಲವನ್ನು ಹಚ್ಚಿಕೊಳ್ಳುವಂತೆ ತಿಳಿಸಲಾಗುತ್ತಿದೆ. ಇದಲ್ಲದೆ, ಜಿಲ್ಲೆಯಾದ್ಯಂತ ಎಲ್ಲಾ ಆಸ್ಪತ್ರೆಗಳಲ್ಲಿ 10 ಬೆಡ್‌ಗಳನ್ನು ಕೆಎಫ್‌ಡಿ ರೋಗಿಗಳಿಗೆ ಮೀಸಲಿಡಲಾಗಿದೆ. ಪ್ರಸ್ತುತ ಇರುವ ಲಸಿಕೆ ನಿಷ್ಪರಿಣಾಮಕಾರಿಯಾದ ಕಾರಣ, ಹೊಸದನ್ನು ಅಭಿವೃದ್ಧಿಪಡಿಸಲು ICMR ಗೆ ಮನವಿ ಮಾಡಿಕೊಳ್ಳಲಾಗಿದೆ. ಶಿರಸಿಯಲ್ಲಿ ಕೆಎಫ್‌ಡಿ ಪರೀಕ್ಷಾ ಘಟಕ ಸ್ಥಾಪಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com