
ಬೆಂಗಳೂರು: ಎಂಎಲ್‌ಸಿ ಚುನಾವಣೆ ಮತ್ತು ಲೋಕಸಭೆ ಮತ್ತು ವಿಧಾನ ಪರಿಷತ್ ಚುನಾವಣೆಗಳ ಮತ ಎಣಿಕೆಯ ದೃಷ್ಟಿಯಿಂದ ರಾಜ್ಯಾದ್ಯಂತ ಐದು ದಿನಗಳ ಕಾಲ ಮದ್ಯ ಮಾರಾಟದ ಮೇಲೆ ಪರಿಣಾಮ ಬೀರಲಿದ್ದು, ಜೂನ್ 2, 4 ಮತ್ತು 6 ರಂದು ಮದ್ಯ ಮಾರಾಟಕ್ಕೆ ನಿಷೇಧ ಹೇರಲಾಗಿದೆ. ಜೂನ್ 1 ಮತ್ತು ಜೂನ್ 3 ರಂದು ಭಾಗಶಃ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗುತ್ತದೆ.
ರಾಜ್ಯದಲ್ಲಿ ಲೋಕಸಭೆ ಚುನಾವಣೆ ಅಂಗವಾಗಿ ಏಪ್ರಿಲ್ 24 ರಿಂದ 26 ರವರೆಗೆ ಮದ್ಯ ಮಾರಾಟ ನಿಷೇಧದಿಂದ ಈಗಾಗಲೇ ತೀವ್ರ ಹೊಡೆತಕ್ಕೆ ತುತ್ತಾಗಿರುವ ಆಹಾರ ಮತ್ತು ಪಾನೀಯ (ಎಫ್ & ಬಿ) ಉದ್ಯಮದಲ್ಲಿರುವವರಿಗೆ ಇದು ಮತ್ತೊಂದು ದೊಡ್ಡ ಹೊಡೆತ ಎಂದಿದ್ದಾರೆ.
ನಗರದ ಮಾರತಹಳ್ಳಿಯಲ್ಲಿರುವ ದೊಡ್ಡ ರೆಸ್ಟೋಬಾರ್‌ಗಳ ಕಾರ್ಯಾಚರಣೆಯ ಮುಖ್ಯಸ್ಥರು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಜೊತೆಗೆ ಮಾತನಾಡಿ, ಈ ತಿಂಗಳ ಆರಂಭದಲ್ಲಿಯೇ ಮದ್ಯ ನಿಷೇಧದಿಂದಾಗಿ ವ್ಯವಹಾರದ ಮೇಲೆ ಗಂಭೀರ ಪರಿಣಾಮಗಳನ್ನು ಬೀರುತ್ತವೆ. ನಾವು ಕಾರ್ಪೊರೇಟ್ ಪಾರ್ಟಿಗಳು ಮತ್ತು ಇತರ ಕಾರ್ಯಕ್ರಮಗಳನ್ನು ಆಯೋಜಿಸಿರುವ ಶನಿವಾರ ಸಂಜೆಯಿಂದಲೇ ಮದ್ಯ ಮಾರಾಟ ನಿಷೇಧವು ಪ್ರಾರಂಭವಾಗುತ್ತದೆ. ಇದರಿಂದ ದಿನಕ್ಕೆ 30 ಲಕ್ಷ ರೂ.ಗೂ ಅಧಿಕ ನಷ್ಟ ಉಂಟಾಗಲಿದೆ ಎಂದಿದ್ದಾರೆ.
ತೆರಿಗೆ ಕಟ್ಟುವುದರಲ್ಲಿ ನಾವು ದೊಡ್ಡ ಪಾಲನ್ನು ಹೊಂದಿದ್ದು, ಪದೇ ಪದೆ ಇಂತಹ ಪರಿಸ್ಥಿತಿ ಉಂಟಾಗುತ್ತಿದೆ. ಮದ್ಯ ಮಾರಾಟ ನಿಷೇಧದಿಂದಾಗಿ ತಮಗೆ ಭಾರಿ ಹಿನ್ನಡೆಯಾಗಲಿದೆ. ವಾರಾಂತ್ಯದಲ್ಲಿ ಶೇ 60ರವರೆಗಿನ ಮದ್ಯ ಮಾರಾಟದಿಂದಾಗಿ ತಾವು ತಮ್ಮ ಲಾಭದ ಶೇ 40ರಷ್ಟನ್ನು ಪಡೆಯುತ್ತೇವೆ. ಆದರೆ, ಇಂತಹ ಪರಿಸ್ಥಿತಿಯಿಂದ ತೊಂದರೆ ಉಂಟಾಗುತ್ತದೆ ಎನ್ನುತ್ತಾರೆ ನಗರದಲ್ಲಿನ ರೆಸ್ಟೋಬಾರ್‌ಗಳ ಮಾಲೀಕರು.
ಪಬ್‌ಗಳು ಮತ್ತು ರೆಸ್ಟೋಬಾರ್‌ಗಳಲ್ಲಿ ಕನಿಷ್ಠ ಆಹಾರವನ್ನಾದರೂ ಮಾರಾಟ ಮಾಡಲು ಅವಕಾಶ ನೀಡುವಂತೆ ನಾವು ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಆದರೆ, ಅಧಿಕಾರಿಗಳು ಇನ್ನೂ ನಿರ್ಧಾರ ಕೈಗೊಂಡಿಲ್ಲ. ಈ ಸಂಬಂಧ ತಾವು ನ್ಯಾಯಾಲಯದ ಮೊರೆ ಹೋಗಿರುವುದಾಗಿ ಎಂದು ನ್ಯಾಷನಲ್ ರೆಸ್ಟೊರೆಂಟ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ಎನ್‌ಆರ್‌ಎಐ) ಪ್ರತಿನಿಧಿಗಳು ತಿಳಿಸಿದ್ದಾರೆ.
'ಕನಿಷ್ಠ ನಷ್ಟವನ್ನು ಕಡಿಮೆ ಮಾಡಲು ಆಹಾರವನ್ನು ಒದಗಿಸುವುದಕ್ಕೆ ನಮಗೆ ಅವಕಾಶ ಮಾಡಿಕೊಡಲು ಆದೇಶಗಳನ್ನು ನೀಡಬೇಕು' ಎಂದು ಪ್ರತಿನಿಧಿ ಶಿವ ಹೇಳಿದರು.
ಬೃಹತ್ ಬೆಂಗಳೂರು ಹೊಟೇಲ್ ಮಾಲೀಕರ ಸಂಘದ (ಬಿಬಿಎಚ್‌ಎ) ಅಧ್ಯಕ್ಷ ಪಿಸಿ ರಾವ್ ಮಾತನಾಡಿ, ಜೂನ್ 4 ರಂದು ಲೋಕಸಭಾ ಚುನಾವಣೆಯ ಮತ ಎಣಿಕೆ ಮುಗಿದ ನಂತರ (ಮುಂಬೈನಂತೆ) ಮದ್ಯ ಮಾರಾಟಕ್ಕೆ ಅವಕಾಶ ನೀಡುವಂತೆ ಮತ್ತು ಜೂನ್ 6 ರಂದು ಮತ ಎಣಿಕೆ ಕೇಂದ್ರಗಳಿಂದ ಒಂದು ಕಿ.ಮೀ ವ್ಯಾಪ್ತಿಯಲ್ಲಿರುವ ಸಂಸ್ಥೆಗಳಿಗೆ ನಿರ್ಬಂಧಗಳನ್ನು ಮಿತಿಗೊಳಿಸುವಂತೆ ಸಂಘವು ಅಬಕಾರಿ ಆಯುಕ್ತರಿಗೆ ಪತ್ರ ಬರೆದಿದೆ ಎಂದರು.
1522ರ ಸಂಸ್ಥಾಪಕ ಮತ್ತು ಬೆಂಗಳೂರಿನ ಎನ್‌ಆರ್‌ಎಐ ಮುಖ್ಯಸ್ಥ ಚೇತನ್ ಹೆಗ್ಡೆ ಮಾತನಾಡಿ, ಮದ್ಯ ಮಾರಾಟ ನಿಷೇಧದಿಂದಾಗಿ ಹೆಚ್ಚಿನ ಸಂಸ್ಥೆಗಳು ಜೂನ್‌ನಲ್ಲಿ ತಮ್ಮ ಗುರಿಗಳನ್ನು ನಿರ್ವಹಿಸಲು ಹೆಣಗಾಡಬಹುದು ಎಂದಿದ್ದಾರೆ.
ಆಹಾರವನ್ನು ಒದಗಿಸುವ ಸೇವೆಗೆ ಅವಕಾಶ ನೀಡುವ ಕುರಿತು ನ್ಯಾಯಾಲಯದ ತೀರ್ಪಿಗಾಗಿ ಕಾಯಲಾಗುತ್ತಿದ್ದು, ಜಿಲ್ಲಾಡಳಿತವು ಜೂನ್ 1 ರಿಂದ 3 ರವರೆಗೆ ಮತ್ತು ಜೂನ್ 6 ರಂದು ಮದ್ಯ ಉತ್ಪಾದನೆ, ಮಾರಾಟ, ವಿತರಣೆ, ಸಾಗಣೆ ಮತ್ತು ಸಂಗ್ರಹಣೆಯನ್ನು ನಿಷೇಧಿಸಿದೆ.
ಯಾವೆಲ್ಲ ದಿನದಲ್ಲಿ ಮದ್ಯ ಮಾರಾಟಕ್ಕೆ ನಿಷೇಧ
* ವಿಧಾನ ಪರಿಷತ್ ಚುನಾವಣೆ ನಡೆಯಲಿರುವುದರಿಂದ ಜೂನ್ 1 ರಂದು ಸಂಜೆ 4 ರಿಂದ ಜೂನ್ 3ರ ಸಂಜೆ 4ರವರೆಗೆ.
* ಲೋಕಸಭೆ ಚುನಾವಣೆಯ ಮತ ಎಣಿಕೆಯಿಂದಾಗಿ ಜೂನ್ 3ರ ಮಧ್ಯರಾತ್ರಿಯಿಂದ ಜೂನ್ 4ರ ಮಧ್ಯರಾತ್ರಿಯವರೆಗೆ.
* ಎಂಎಲ್‌ಸಿ ಚುನಾವಣೆಯ ಮತ ಎಣಿಕೆ ನಡೆಯುವುದರಿಂದ ಜೂನ್ 6 ರಂದು ಬೆಳಿಗ್ಗೆ 6 ರಿಂದ ಮಧ್ಯರಾತ್ರಿಯವರೆಗೆ.
Advertisement