
ಬೆಂಗಳೂರು: ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಎದುರಿಸುತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಸೂಕ್ತ ಪ್ರಕ್ರಿಯೆ ಮುಗಿದ ಬಳಿಕ ಬಂಧಿಸಲಾಗಿದ್ದು, ಮುಂದಿನ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಜಿ ಪರಮೇಶ್ವರ ಶುಕ್ರವಾರ ಹೇಳಿದ್ದಾರೆ.
ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ಕಿರುಕುಳ ಪ್ರಕರಣಗಳ ತನಿಖೆಗೆ ರಾಜ್ಯ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡಕ್ಕೆ (ಎಸ್ಐಟಿ) ಈ ಬಂಧನ ನೆರವಾಗಲಿದೆ ಎಂದರು.
ಜರ್ಮನಿಯಿಂದ ಬಂದ ಕೆಲವೇ ನಿಮಿಷಗಳಲ್ಲಿ ಪ್ರಜ್ವಲ್ ರೇವಣ್ಣ ಅವರನ್ನು ಎಸ್‌ಐಟಿ ಶುಕ್ರವಾರ ಮುಂಜಾನೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿತು.
'ಪ್ರಜ್ವಲ್ ರೇವಣ್ಣ ಅವರು ಜರ್ಮನಿಯ ಮ್ಯೂನಿಚ್‌ನಿಂದ ಮಧ್ಯರಾತ್ರಿ 12.40 ರಿಂದ 12:50 ರ ಸುಮಾರಿಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದರು. ಅವರ ವಿರುದ್ಧ ಬಂಧನ ವಾರಂಟ್ ಇದ್ದ ಕಾರಣ, ಎಸ್‌ಐಟಿ ಅದರ ಪ್ರಕಾರವೇ ಅವರನ್ನು ಬಂಧಿಸಿ ಕಸ್ಟಡಿಗೆ ತೆಗೆದುಕೊಂಡಿದೆ ಮತ್ತು ಮುಂದಿನ ಕಾನೂನು ಪ್ರಕ್ರಿಯೆಗಳನ್ನು ಅವರು ಅನುಸರಿಸಲಿದ್ದಾರೆ. ನಮ್ಮ ಅಧಿಕಾರಿಗಳೊಂದಿಗೆ ನಾನು ಇನ್ನೂ ಚರ್ಚಿಸಿಲ್ಲ' ಎಂದು ಪರಮೇಶ್ವರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯಕ್ಕೆ ಪ್ರಜ್ವಲ್ ಬಂದಿದ್ದಾರೆ ಎಂಬ ಮಾಹಿತಿ ಮಾತ್ರ ಲಭ್ಯವಾಗಿದೆ. ಸದ್ಯ ಅವರನ್ನು ಬಂಧಿಸಲಾಗಿದೆ ಮತ್ತು ಕಾನೂನು ಪ್ರಕಾರ, ವೈದ್ಯಕೀಯ ಪರೀಕ್ಷೆ ನಡೆಸಿ ನ್ಯಾಯಾಂಗದ ಮುಂದೆ ಹಾಜರುಪಡಿಸಲಾಗುವುದು. ಅವರ ವಿಚಾರಣೆ ನಡೆಸುವುದು ಸೇರಿದಂತೆ ಎಲ್ಲ ಪ್ರಕ್ರಿಯೆಗಳನ್ನು ಅನುಸರಿಸಲಾಗುವುದು. ಸ್ವಾಭಾವಿಕವಾಗಿ ಅವರು ಬಂಧನಕ್ಕೆ ಸಹಕರಿಸಬೇಕಿತ್ತು. ಅವರು ರಾಜತಾಂತ್ರಿಕ ಪಾಸ್‌ಪೋರ್ಟ್ ಹೊಂದಿದ್ದರಿಂದ, ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ನಂತರವೇ ಅವರನ್ನು ಬಂಧಿಸಲಾಯಿತು ಎಂದರು.
ಈಗ ಪ್ರಜ್ವಲ್‌ನನ್ನು ಬಂಧಿಸಿರುವ ಹಿನ್ನೆಲೆಯಲ್ಲಿ ಇನ್ನಷ್ಟು ಸಂತ್ರಸ್ತರು ಮುಂದೆ ಬರುವಂತೆ ಸರ್ಕಾರ ಮನವಿ ಮಾಡಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಅವರಿಂದ ತೊಂದರೆ ಅನುಭವಿಸಿದವರು ಮುಂದೆ ಬಂದು ಎಸ್‌ಐಟಿ ಮತ್ತು ಪೊಲೀಸರಿಗೆ ದೂರು ನೀಡುವಂತೆ ಮತ್ತು ನಾವು ಅವರಿಗೆ ಎಲ್ಲ ರೀತಿಯ ರಕ್ಷಣೆಯನ್ನು ಒದಗಿಸುತ್ತೇವೆ ಎಂದು ನಾವು ಈಗಾಗಲೇ ಹೇಳಿದ್ದೇವೆ. ಮುಂದಿನ ಬೆಳವಣಿಗೆಗಳನ್ನು ನಾವು ಕಾದು ನೋಡಬೇಕಾಗಿದೆ ಎಂದು ಅವರು ತಿಳಿಸಿದರು.
ಪ್ರಜ್ವಲ್ ಅವರು ತಮ್ಮ ಫೋನ್‌ನಲ್ಲಿರುವ ಸಾಕ್ಷ್ಯಗಳನ್ನು ನಾಶಪಡಿಸಿದ್ದಾರೆ ಮತ್ತು ಫೋನ್ ಕಳೆದುಹೋಗಿದೆ ಎಂದು ಹೇಳುತ್ತಿದ್ದಾರೆ ಎಂಬ ವರದಿಗಳ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪರಮೇಶ್ವರ, ಅದರ ಬಗ್ಗೆ ನನಗೆ ತಿಳಿದಿಲ್ಲ ಮತ್ತು ಈ ಬಗ್ಗೆ ಎಸ್‌ಐಟಿಯಿಂದಲೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ಹೇಳಿದರು.
ಬಂಧನ ವಿಳಂಬವಾಗಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಗೃಹ ಸಚಿವರು, ಪ್ರಜ್ವಲ್ ದೇಶದಲ್ಲಿ ಅಥವಾ ರಾಜ್ಯದಲ್ಲಿದ್ದರೆ, ಅವರ ಬಂಧನಕ್ಕೆ ತಂಡವನ್ನು ಕಳುಹಿಸಬಹುದಿತ್ತು. ಆದರೆ, ಅವರು ವಿದೇಶದಲ್ಲಿ ಇದ್ದದ್ದರಿಂದ ಕೆಲವು ಕಾರ್ಯವಿಧಾನಗಳನ್ನು ಅನುಸರಿಸಬೇಕಾಗಿತ್ತು. ಹಾಗಾಗಿ ಸಿಬಿಐ ಮೂಲಕ ಇಂಟರ್‌ಪೋಲ್‌ಗೆ ಮಾಹಿತಿ ನೀಡಲಾಯಿತು ಮತ್ತು ಅವರ ವಿರುದ್ಧ ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡಲಾಗಿತ್ತು ಎಂದರು.
Advertisement