ಮಂಗಳೂರು: ದೇಶದಲ್ಲಿ ಎರಡನೇ ಅತಿ ದೊಡ್ಡ ಜಿಎಸ್‌ಟಿ ಸಂಗ್ರಹಿಸುವ ರಾಜ್ಯವಾಗಿದ್ದರೂ ಸಿಗಬೇಕಾದ ಪಾಲು ಸಿಗದ ಕಾರಣ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ. ಇದರ ವಿರುದ್ಧ ನಾವು ಹೋರಾಟ ಮುಂದುವರಿಸಿದ್ದೇವೆ’ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಶುಕ್ರವಾರ ಹೇಳಿದ್ದಾರೆ.
ನಗರದ ನೆಹರೂ ಮೈದಾನದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವರು, ಹಣಕಾಸು ಆಯೋಗದಿಂದ ಸಿಗಬೇಕಾದ ಅನುದಾನದಲ್ಲಿ ತೀವ್ರ ಕಡಿತವಾಗಿದೆ. ಜಿಎಸ್ ಟಿಯಲ್ಲಿ ಪರಿಹಾರ ರೂಪದಲ್ಲಿ ಸಿಗಬೇಕಾದ ಹಣವೂ ಸಿಕ್ಕಿಲ್ಲ. ಇಂತಹ ಪರಿಸ್ಥಿತಿ ಯಾವ ರಾಜ್ಯಕ್ಕೂ ಬರಬಾರದು. ಕರ್ನಾಟಕ ರಾಜ್ಯೋತ್ಸವದ ಈ ದಿನದಂದು ಇದನ್ನು ನೆನಪಿಸಬೇಕಾಗಿದೆ. ನಮ್ಮ ಶ್ರಮದ ಪಾಲನ್ನು ಯಾರೋ ಅನ್ಯಾಯವಾಗಿ ಕಸಿದುಕೊಳ್ಳುತ್ತಿದ್ದಾರೆಂಬ ಭಾವನೆ ರಾಜ್ಯಗಳಿಗೆ ಬರಬಾರದು. ಕರ್ನಾಟಕ ಸರ್ಕಾರ ಇದನ್ನು ಪ್ರಶ್ನಿಸಿದೆ. ರಾಜ್ಯದ ಪರವಾಗಿ ಗಟ್ಟಿಯಾಗಿ ನಿಂತಿದೆ ಎಂದು ಅವರು ಹೇಳಿದರು.
ಜನಸಂಖ್ಯೆಯನ್ನು ನಿಯಂತ್ರಿಸುವಲ್ಲಿ ಕರ್ನಾಟಕ ಯಶಸ್ವಿಯಾಗಿದೆ. ಆದರೆ ಶೈಕ್ಷಣಿಕವಾಗಿ ಹಿಂದುಳಿದಿರುವ ಮತ್ತು ಜನಸಂಖ್ಯಾ ಬೆಳವಣಿಗೆಯನ್ನು ನಿಯಂತ್ರಿಸುವಲ್ಲಿ ವಿಫಲವಾಗಿರುವ ಹಿಂದಿ ಮಾತನಾಡುವ ಉತ್ತರ ಭಾರತದ ರಾಜ್ಯಗಳಿಗೆ ಹೆಚ್ಚು ಲೋಕಸಭಾ ಸದಸ್ಯರನ್ನು ನೀಡಿ, ಕಡಿಮೆ ಜನಸಂಖ್ಯೆ ಇರುವ ದಕ್ಷಿಣ ರಾಜ್ಯಗಳಿಗೆ ಲೋಕಸಭಾ ಸದಸ್ಯರನ್ನು ಕಡಿಮೆ ಮಾಡಿ ಕೇಂದ್ರ ಮಟ್ಟದಲ್ಲಿ ದಕ್ಷಿಣ ಭಾರತ ಹಾಗೂ ಕರ್ನಾಟಕದ ಜನರ ಪ್ರಾತಿನಿಧ್ಯವನ್ನೇ ಇಲ್ಲವಾಗಿಸುವ ಕ್ರಮ ಕಳವಳಕಾರಿಯಾಗಿದೆ ಎಂದರು.
ಕರ್ನಾಟಕವನ್ನು ಸಮೃದ್ಧಗೊಳಿಸುವುದು ರಾಜ್ಯ ಸರ್ಕಾರದ ಗುರಿಯಾಗಿದ್ದು, ಹಲವಾರು ಜನಪರ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ರಾಜ್ಯದ ಪ್ರತಿಯೊಂದು ಪ್ರದೇಶಕ್ಕೂ ಸಮಾನ ಪ್ರಾಮುಖ್ಯತೆ ಮತ್ತು ಪ್ರಾದೇಶಿಕ ಅಸಮತೋಲನವನ್ನು ಸರಿಪಡಿಸುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಇತ್ತೀಚೆಗಷ್ಟೇ ಗುಲ್ಬರ್ಗದಲ್ಲಿ ಸಚಿವ ಸಂಪುಟ ಸಭೆ ನಡೆಸಿ ಹಲವು ಯೋಜನೆಗಳ ಘೋಷಣೆ ಮಾಡಿದ್ದೇವೆ ಎಂದರು.
ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 60 ಸಾಧಕರಿಗೆ ಹಾಗೂ 22 ಸಂಘ ಸಂಸ್ಥೆಗಳಿಗೆ ಜಿಲ್ಲಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದಕ್ಕೂ ಮುನ್ನ ಅಂಬೇಡ್ಕರ್ ವೃತ್ತದಿಂದ ನೆಹರೂ ಮೈದಾನದವರೆಗೆ ವರ್ಣರಂಜಿತ ಮೆರವಣಿಗೆ ನಡೆಯಿತು.
Advertisement