ಬೆಳಗಾವಿ: ನವೆಂಬರ್ 1ರಂದು ‘ಕರಾಳ ದಿನ’ ಆಚರಣೆಗೆ ಬೆಳಗಾವಿ ಜಿಲ್ಲಾಡಳಿತ ನಿಷೇಧ ಹೇರಿದ ಬಳಿಕವೂ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್) ಶುಕ್ರವಾರ ಬೆಳಿಗ್ಗೆ ನಗರದಲ್ಲಿ ಬೃಹತ್ ‘ಕರಾಳ ದಿನ’ ರ್‍ಯಾಲಿ ನಡೆಸಿದೆ. ಈ ಹಿನ್ನೆಲೆಯಲ್ಲಿ ಕರಾಳ ದಿನಾಚರಣೆಯಲ್ಲಿ ಭಾಗವಿಸಿದ ಎಲ್ಲರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ.
ಎಂಇಎಸ್‌ನ ಕರ್ನಾಟಕ ವಿರೋಧಿ ನಿಲುವಿನಿಂದ ಆಕ್ರೋಶ ವ್ಯಕ್ತಪಡಿಸಿರುವ ಪಿಡಬ್ಲ್ಯುಡಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು, ಕರಾಳ ದಿನಾಚರಣೆಯಲ್ಲಿ ಪಾಲ್ಗೊಂಡವರೆಲ್ಲರೂ ಶೀಘ್ರದಲ್ಲೇ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.
ಎಂಇಎಸ್ ಉಪಟಳ ಈ ಹಿಂದೆ ಇದ್ದಷ್ಟು ಈಗ ಇಲ್ಲ. ಕನ್ನಡಿಗರ ಸಂಭ್ರಮದ ಮುಂದೆ ಅವರು ಮಂಕಾಗಿ ಹೋಗಿದ್ದಾರೆ. ಬೆರಳೆಣಿಕೆಯಷ್ಟು ಜನ ಮೆರವಣಿಗೆ ಮಾಡಿರಬಹುದು. ಅವರನ್ನು ನೇರವಾಗಿ ಬಂಧಿಸುವುದು ಸರಿಯಲ್ಲ. ರಾಜ್ಯೋತ್ಸವ ಸಂದರ್ಭದಲ್ಲಿ ಅದು ಗಲಾಟೆಗೆ ಎಡೆಮಾಡಿ ಕೊಡುತ್ತದೆ. ನಂತರ ಪೊಲೀಸರು ಸೂಕ್ತ ಕ್ರಮ ಜರುಗಿಸುತ್ತಾರೆ. ಯಾರೆಲ್ಲಾ ಮೆರವಣಿಗೆ ನಡೆಸಿದ್ದಾರೆ, ನಾಡ ವಿರೋಧಿ ಘೋಷಣೆ ಕೂಗಿದ್ದಾರೆ ಎಂಬುದನ್ನು ಪರಿಶೀಲಿಸಲಾಗುವುದು. ನಂತರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಮಹಾರಾಷ್ಟ್ರ ಏಕೀಕರಣ ಸಮಿತಿ ನಿಷೇಧಿಸುವ ಅಗತ್ಯ ಇಲ್ಲ. ಅದು ಹೆಸರಿಗಷ್ಟೇ ಇದೆ. ವರ್ಷದಲ್ಲೊಮ್ಮೆ ಅದಕ್ಕೆ ಕರಾಳ ದಿನ ನೆನಪಾಗುತ್ತದೆ. ಆದ್ದರಿಂದ ಅದನ್ನು ನಿಷೇಧಿಸುವುದಕ್ಕಿಂತ ನಿರ್ಲಕ್ಷ ಮಾಡುವುದು ಒಳಿತು. ಎಂಇಎಸ್ ಸಂಘಟನೆ ನಿಷೇಧಿಸಿದರೆ, ಮತ್ತೆ ಅದರ ಕಡೆಗೆ ಹೆಚ್ಚಿನ ಒಲವು ಹೊಂದುವ ಸಾಧ್ಯತೆಯಿದೆ. ಹಾಗಾಗಿ ಅದನ್ನು ನಿಷೇಧಿಸುವುದಿಲ್ಲ ಎಂದರು.
ಇದೇ ವೇಳೆ ಬೆಳಗಾವಿಯಲ್ಲಿ ಎಂಇಎಸ್ ಆಯೋಜಿಸಿದ್ದ ದಿನಾಚರಣೆಯಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ ಮರಾಠಿ ಪರ ಕಾರ್ಯಕರ್ತರು ಕಪ್ಪು ವಸ್ತ್ರ ಧರಿಸಿ ಪಾಲ್ಗೊಂಡಿದ್ದು ಕಂಡು ಬಂದಿತು.
ಬೆಳಗಾವಿ, ನಿಪ್ಪಾಣಿ, ಖಾನಾಪುರ, ಕಾರವಾರ, ಬೀದರ್ ಮತ್ತು ಭಾಲ್ಕಿಯನ್ನು ಮಹಾರಾಷ್ಟ್ರದೊಂದಿಗೆ ವಿಲೀನಗೊಳಿಸುವಂತೆ ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು.
ಇನ್ನು ‘ಕರಾಳ ದಿನ’ ರ್‍ಯಾಲಿಯಲ್ಲಿ ಭಾಗವಹಿಸಲು ಮಹಾರಾಷ್ಟ್ರ ನಾಯಕರು ಬೆಳಗಾವಿಗೆ ಪ್ರವೇಶಿಸುವುದನ್ನು ಜಿಲ್ಲಾಡಳಿತ ನಿಷೇಧಿಸಿತ್ತು. ನಗರದಾದ್ಯಂತ, ವಿಶೇಷವಾಗಿ ಎಂಇಎಸ್ ಮೆರವಣಿಗೆ ನಡೆಯುವ ಮಾರ್ಗವಾದ ಹಳೆ ಬೆಳಗಾವಿಯಲ್ಲಿ ಹೆಚ್ಚಿನ ಸಂಖ್ಯೆಯ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ‘ಕರಾಳ ದಿನ’ ರ್‍ಯಾಲಿಯಲ್ಲಿ ಭಾಗವಹಿಸುವ ಗುಂಪಿನ ಮೇಲೆ ನಿಗಾ ಇಡಲು ಇಲಾಖೆ ಸಿಸಿಟಿವಿ ಮತ್ತು ಡ್ರೋನ್ ಕ್ಯಾಮೆರಾಗಳನ್ನು ವ್ಯವಸ್ಥೆ ಮಾಡಿತ್ತು.
Advertisement