ವಿಜಯಪುರ: ವಿಜಯಪುರ ವಿಮಾನ ನಿಲ್ದಾಣದ ಎಲ್ಲಾ ಕಾಮಗಾರಿಗಳು ಪೂರ್ಣಗೊಂಡಿದ್ದು, ಇನ್ನು ಕೆಲವೇ ತಿಂಗಳುಗಳಲ್ಲಿ ಕಾರ್ಯಾಚರಣೆ ಆರಂಭವಾಗಲಿದೆ ಎಂದು ರಾಜ್ಯ ಸರ್ಕಾರ ಮಹತ್ವದ ಮಾಹಿತಿ ನೀಡಿದೆ.
ಶುಕ್ರವಾರ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಕರ್ನಾಟಕ ರಾಜ್ಯೋತ್ಸವ ಭಾಷಣ ಮಾಡಿದ ಜಿಲ್ಲಾ ಉಸ್ತುವಾರಿ ಹಾಗೂ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರು, ಈ ಮಾಹಿತಿ ನೀಡಿದರು.
ರಾಷ್ಟ್ರದ ಎಲ್ಲನೂತನ ವಿಮಾನ ನಿಲ್ದಾಣಗಳಿಗೆ ಪರಿಸರ ಸಂಬಂಧಿತ ವ್ಯಾಜ್ಯಗಳ ಇತ್ಯರ್ಥಕ್ಕೆ ಸುಪ್ರಿಂ ಕೋರ್ಟ್ ತಡೆಯಾಜ್ಞೆ ನೀಡಿದೆ. ಈ ತಡೆಯಾಜ್ಞೆ ತೆರವಾದ 2 ತಿಂಗಳೊಳಗಾಗಿ ವಿಜಯಪುರದಲ್ಲಿ ವಿಮಾನ ಹಾರಾಟ ಆರಂಭವಾಗಲಿದೆ ಎಂದು ಹೇಳಿದರು.
ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸರ್ಕಾರ 347.92 ಕೋಟಿ ಅನುದಾನ ನೀಡಿದ್ದು, ವಿಮಾನ ನಿಲ್ದಾಣದಲ್ಲಿ ಕಾರ್ಯಾಚರಣೆ ಆರಂಭಿಸಲು ಅಗತ್ಯವಿರುವ ಅನುಮತಿ ಪಡೆಯಲು ರಾಜ್ಯ ಸರ್ಕಾರ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ. ವಿಮಾನಯಾನ ಕಾರ್ಯಾಚರಣೆಗೆ ಅವಶ್ಯವಿರುವ ಏರ್‌ಕ್ರಾಪ್ಟ್ ರೆಸ್ಕ್ಯೂವ್ ಫೈರ್ ಫೈಟಿಂಗ್ ವಾಹನ ಖರೀದಿಸಲು ಕೆಎಸ್‌ಐಐಡಿಸಿಯಿಂದ ಟೆಂಡರ್ ಆಹ್ವಾನಿಸಲಾಗಿದ್ದು, ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ.
ವಿಮಾನ ನಿಲ್ದಾಣದಲ್ಲಿ ರಾತ್ರಿ ವೇಳೆಯಲ್ಲಿಯೂ ಕಾರ್ಯಾಚರಣೆ ಕೈಗೊಳ್ಳಲು ಮತ್ತು ರಾಷ್ಟ್ರೀಯ ಹೆದ್ದಾರಿ - 50 ರಿಂದ ವಿಮಾನ ನಿಲ್ದಾಣಕ್ಕೆ ನೇರ ಸಂಪರ್ಕ ರಸ್ತೆಯನ್ನು ಅಭಿವೃದ್ಧಿಪಡಿಸಲು ಯೋಜಿಸಲಾಗಿದೆ. ಇದಕ್ಕಾಗಿ 117 ಕೋಟಿ ರೂಪಾಯಿಗಳ ಹೆಚ್ಚುವರಿ ಮೊತ್ತದ ಡಿಪಿಆರ್ ತಯಾರಿಸಿ ಅನುಮೋದನೆಗೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಬಳಿಕ ಜಿಲ್ಲೆಯ ಇತರೆ ಅಭಿವೃದ್ಧಿ ಯೋಜನೆಗಳ ಕುರಿತು ಮಾತನಾಡಿದ ಸಚಿವರು, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಇಲಾಖೆ ವತಿಯಿಂದ ಸಿಎಎಸ್‌ಆರ್ ಅನುದಾನದಲ್ಲಿ ಬಬಲೇಶ್ವರ ಹಾಗೂ ತಿಕೋಟಾ ತಾಲೂಕುಗಳನ್ನು ಜಿಲ್ಲೆಯಲ್ಲಿ ಮಾದರಿ ತಾಲೂಕುಗಳು ಎಂದು ಆಯ್ಕೆ ಮಾಡಿಕೊಂಡು ಇಲ್ಲಿನ ಆಯ್ದ 1000 ಸರಕಾರಿ ಶಾಲೆಗಳ ಕಟ್ಟಡಗಳ ದುರಸ್ತಿ, ನಿರ್ಮಾಣ ಹಾಗೂ ಅತ್ಯಾಧುನಿಕ ಸ್ಮಾರ್ಟ್ ಕ್ಲಾಸ್ ಅಳವಡಿಕೆ ಮಾಡುವ ಕಾರ್ಯ ಭರದಿಂದ ಸಾಗಿದೆ. ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಜಿಲ್ಲೆಯ ಎಲ್ಲಾ7 ಶೈಕ್ಷಣಿಕ ತಾಲೂಕುಗಳಲ್ಲಿ ರಚನಾತ್ಮಕ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ,
ನಗರದ ಕನಕದಾಸ ವಿಸ್ತರಣಾ ಪ್ರದೇಶದಲ್ಲಿ ಆರು ಎಕರೆ ಸರ್ಕಾರಿ ಜಾಗದಲ್ಲಿ ನಾಲ್ಕು ಅಂತಸ್ತಿನ ಜಿಲ್ಲಾ ಕಚೇರಿ ಸಂಕೀರ್ಣ ನಿರ್ಮಿಸಲು 55.60 ಕೋಟಿ ರೂ.ಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ನಿಡಗುಂದಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗೆ 18 ಕೋಟಿ ರೂ.ಗಳಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಜಿಲ್ಲೆಯ ಒಟ್ಟಾರೆ ಕೈಗಾರಿಕಾ ವಿಸ್ತರಣೆಗೆ ಒಟ್ಟು 3,239 ಎಕರೆಯನ್ನು ಮೀಸಲಿಡಲಾಗಿದ್ದು, ಕೊಲ್ಹಾರ ತಾಲೂಕಿನಲ್ಲಿಯೇ 614 ಎಕರೆಯನ್ನು 245 ಕೋಟಿ ರೂ.ಗಳ ಬಂಡವಾಳದಲ್ಲಿ ಅಭಿವೃದ್ಧಿಪಡಿಸಲಾಗಿದೆ. 411 ಕೈಗಾರಿಕಾ ನಿವೇಶನಗಳು ಹೊಸ ವ್ಯವಹಾರಗಳಿಗೆ ಲಭ್ಯವಾಗುವಂತೆ ಮಾಡಲಾಗಿದೆ. ನವೆಂಬರ್ 2, 2023 ರಿಂದ ಅಕ್ಟೋಬರ್ 27, 2024 ರವರೆಗೆ ವಿಜಯಪುರದಲ್ಲಿ 4,537 ಹೊಸ ಕೈಗಾರಿಕೆಗಳಿಂದ 24,645 ಉದ್ಯೋಗಗಳು ಸೃಷ್ಟಿಯಾಗಿದ್ದು, ಇವುಗಳನ್ನು ಒಟ್ಟು 9,300 ಲಕ್ಷ ರೂಪಾಯಿ ಹೂಡಿಕೆಯೊಂದಿಗೆ ಸ್ಥಾಪಿಸಲಾಗಿದೆ ಎಂದು ತಿಳಿಸಿದರು. ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 22 ಮಂದಿಗೆ ಪ್ರಶಸ್ತಿ ಪ್ರದಾನ ಮಾಡಿದರು.
Advertisement