ಹೂಡಿಕೆ ಯೋಜನೆಗಳ ಕ್ಷಿಪ್ರ ಅನುಮೋದನೆಗೆ ಮೈಕ್ರೋಸಾಫ್ಟ್‌ನಿಂದ ನೂತನ ಸಾಫ್ಟ್‌ವೇರ್: ಎಂಬಿ ಪಾಟೀಲ್‌

ಗರಿಷ್ಠ 100 ದಿನಗಳೊಳಗೆ ಅಗತ್ಯವಿರುವ ಎಲ್ಲಾ ಅನುಮೋದನೆ ನೀಡುವ ಗುರಿ ಹೊಂದಲಾಗಿದ್ದು, ಫೆಬ್ರವರಿ ತಿಂಗಳಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ನೂತನ ಸಾಫ್ಟ್‌ವೇರ್ ಲೋಕಾರ್ಪಣೆ
MB Patil
ಎಂಬಿ ಪಾಟೀಲ್
Updated on

ಬೆಂಗಳೂರು: ಏಕಗವಾಕ್ಷಿ ಯೋಜನೆಯಡಿ ಕೈಗಾರಿಕಾ ಯೋಜನೆಗಳಿಗೆ ಅನುಮೋದನೆ ಪ್ರಕ್ರಿಯೆಯನ್ನು ಸರಳಗೊಳಿಸಲು ಮೈಕ್ರೋಸಾಫ್ಟ್ ಕಂಪನಿ ನೆರವಿನಿಂದ ನೂತನ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ‌ಬಿ ಪಾಟೀಲ್ ತಿಳಿಸಿದ್ದಾರೆ.

ಗರಿಷ್ಠ 100 ದಿನಗಳೊಳಗೆ ಅಗತ್ಯವಿರುವ ಎಲ್ಲಾ ಅನುಮೋದನೆ ನೀಡುವ ಗುರಿ ಹೊಂದಲಾಗಿದ್ದು, ಫೆಬ್ರವರಿ ತಿಂಗಳಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ನೂತನ ಸಾಫ್ಟ್‌ವೇರ್ ಲೋಕಾರ್ಪಣೆ ಮಾಡಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.

ಈ ಸಂಬಂಧ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ನೆರೆಹೊರೆಯ ಕೆಲವು ರಾಜ್ಯಗಳಲ್ಲಿ ಕೈಗಾರಿಕಾ ಹೂಡಿಕೆ ಯೋಜನೆಗಳಿಗೆ 60 - 70 ದಿನಗಳಲ್ಲಿ ಅನುಮೋದನೆಯನ್ನೂ ನೀಡಲಾಗುತ್ತಿದೆ. ಆದರೆ ನಮ್ಮ ರಾಜ್ಯದಲ್ಲಿ ಸರಾಸರಿ 300 ದಿನಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಇದನ್ನು 60-70 ದಿನಗಳಿಗೆ ಕಡಿಮೆಗೊಳಿಸಬೇಕೆಂಬುದು ತಮ್ಮ‌ ಗುರಿಯಾಗಿದೆ. ಇಲ್ಲದೆ ಹೋದರೆ ನಾವು ಹೂಡಿಕೆಯನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.

ಕೈಗಾರಿಕಾ ಯೋಜನೆಗಳಿಗೆ ರಾಜ್ಯದಲ್ಲಿ ಅಗ್ನಿಶಾಮಕ, ಕಾನೂನು, ಅರಣ್ಯ ಮುಂತಾದ 33 ಇಲಾಖೆಗಳ ಅನುಮೋದನೆ ಬೇಕಾಗುತ್ತದೆ. ಜೊತೆಗೆ 147 ಬಗೆಯ ಸೇವೆಗಳಿವೆ. ಇವನ್ನು ಒಂದೇ ಕಡೆ ತರಬೇಕಾಗಿದೆ. ಇದನ್ನು ನೂತನ ಸಾಫ್ಟ್‌ವೇರ್ ಸುಗಮಗೊಳಿಸಲಿದೆ. ಏಕಗವಾಕ್ಷಿ ವ್ಯವಸ್ಥೆಯ ಬಗ್ಗೆ ಸಚಿವರು ಹಾಗೂ ಎಲ್ಲ ಇಲಾಖೆಗಳ ಮುಖ್ಯಸ್ಥರಿಗೆ ಪರಿಚಯಿಸಲಾಗುವುದು. ಸಾಪ್ಟ್ ವೇರ್ ಬಳಕೆ ಕುರಿತು ತರಬೇತಿ ನೀಡಲಾಗುವುದು ಎಂದು ಅವರು ತಿಳಿಸಿದರು.

MB Patil
ಉಪನಗರ ರೈಲು ಯೋಜನೆಯ ಮೊದಲ ಮಾರ್ಗ 2025ರ ಡಿಸೆಂಬರ್‌ಗೆ ಪೂರ್ಣ: ಎಂಬಿ ಪಾಟೀಲ್

ಹೊಸ ಸಾಪ್ಟ್ ವೇರ್ ಗೆ 'ಉಮಾ' (ಉದ್ಯೋಗ ಮಿತ್ರ ಅಸಿಸ್ಟೆಂಟ್) ಎಂದು ಹೆಸರು ಇಟ್ಟಿದ್ದು, ಕೇವಲ ಕನ್ನಡ, ಇಂಗ್ಲಿಷ್ ಮಾತ್ರವಲ್ಲದೆ ಪ್ರಪಂಚದ ಎಲ್ಲಾ ಪ್ರಮುಖ ಭಾಷೆಗಳಲ್ಲೂ ಮಾಹಿತಿ ಲಭ್ಯವಾಗಲಿದೆ. ಇದಕ್ಕೆ ಕೃತಕ ಬುದ್ಧಿಮತ್ತೆಯ ನೆರವು ಕೂಡ ಪಡೆಯಲಾಗಿದೆ. ಜತೆಗೆ ಧ್ವನಿ ಮಾಧ್ಯಮದಲ್ಲೂ ಕೂಡ ಉದ್ಯಮಿಗಳು ತಮ್ಮಿಚ್ಛೆಯ ಭಾಷೆಯಲ್ಲಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಅವರು ಮಾಹಿತಿ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com